ಮೈಚಾಂಗ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಧಾರಾಕಾರ ಮಳೆ

  • ಚೆನ್ನೈ ನಗರದ ಹಲವೆಡೆ ಪ್ರವಾಹದ ಸ್ಥಿತಿ

  • ವಿಮಾನ ಸಂಚಾರ ಬಂದ್

ಚೆನ್ನೈ (ತಮಿಳುನಾಡು) – ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರಚನೆಯಿಂದಾಗಿ ‘ಮೈಚಾಂಗ್’ ಚಂಡಮಾರುತ (ಶಕ್ತಿ ಅಥವಾ ಸ್ಥಿತಿಸ್ಥಾಪಕತ್ವ) ಹೆಸರಿನ ಚೆಂಡಮಾರುತ ರೂಪುಗೊಂಡಿದೆ. ಈ ಚಂಡಮಾರುತದಿಂದ ಚೆನ್ನೈ ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಇಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಚೆನ್ನೈ ನಗರದ ಪಕ್ಕದಲ್ಲಿರುವ ಚೆಂಗಲ್‌ಪೇಟ, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲದೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರವಾಹದಿಂದಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ನಗರದಲ್ಲಿ ಗಂಟೆಗೆ 35 ರಿಂದ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ನಾಗರಿಕರು ಮನೆಯಿಂದ ಹೊರಗೆ ಬರದಂತೆ ಮಹಾನಗರ ಪಾಲಿಕೆ ಸಲಹೆ ನೀಡಿದೆ. ಚಂಡಮಾರುತದ ಸಾಧ್ಯತೆಯಿಂದಾಗಿ ಇಲ್ಲಿನ ಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದೆ.

ಮೈಚಾಂಗ್ ಚಂಡಮಾರುತವು ನಾಳೆ ಅಂದರೆ ಡಿಸೆಂಬರ್ 5 ರಂದು ಆಂಧ್ರಪ್ರದೇಶ ರಾಜ್ಯವನ್ನು ಅಪ್ಪಳಿಸಲಿದೆ. ರಾಜ್ಯದ ನೆಲ್ಲೂರು ಮತ್ತು ಮಚಲಿಪಟ್ಟಣಂ ಜಿಲ್ಲೆಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ 21 ಘಟಕಗಳನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ನಿಯೋಜಿಸಲಾಗಿದೆ. ಚಂಡಮಾರುತದ ಕಾರಣ, ಡಿಸೆಂಬರ್ 3 ಮತ್ತು 7 ರ ನಡುವೆ ಚಲಿಸುವ 144 ರೈಲುಗಳನ್ನು ಕೇಂದ್ರ ರೈಲ್ವೆ ಇಲಾಖೆ ರದ್ದುಗೊಳಿಸಿದೆ.