ಕಲಿಯುಗದಲ್ಲಿನ ಸರ್ವಶ್ರೇಷ್ಠ ನಾಮಜಪಸಾಧನೆ, ನಾಮಜಪ ವಾಣಿ ಮತ್ತು ಧ್ವನಿ-ಪ್ರಕಾಶ ವಿಜ್ಞಾನ

ಏಪ್ರಿಲ್‌ ೧೯೯೭ ರಲ್ಲಿ “ನಾಮಜಪದ ೪ ವಾಣಿಗಳ ಬಗ್ಗೆ ಅಭ್ಯಾಸವರ್ಗವನ್ನು ತೆಗೆದುಕೊಳ್ಳಿ” ಎಂದು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಜಯಂತ ಆಠವಲೆಯವರಿಂದ ನನಗೆ ಸಂದೇಶ ಬಂದಿತು. ಆಗ ನನಗೆ ವಾಣಿಯ ೪ ವಿಧಗಳಾದ ವೈಖರಿ, ಮಧ್ಯಮಾ, ಪಶ್ಯಂತಿ ಮತ್ತು ಪರಾ ಇವುಗಳ ಬಗ್ಗೆ ಮಾತ್ರ ತಿಳಿದಿತ್ತು. ಇದರ ಹೊರತು ನನ್ನ ಬಳಿ ಬೇರೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಇಷ್ಟು ಮಾಹಿತಿಯಿಂದ ಅಭ್ಯಾಸ ವರ್ಗವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು, ಮೊದಲು ನಾನು ಅಭ್ಯಾಸವರ್ಗವನ್ನು ತೆಗೆದುಕೊಳ್ಳಲು ನಿರಾಕರಿಸಿದೆ. ಆಗ ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಪುನಃ ನನಗೆ ”ಈ ಅಭ್ಯಾಸವರ್ಗವನ್ನು ನೀವೇ ತೆಗೆದುಕೊಳ್ಳಬೇಕು’’ ಎಂಬ ಸಂದೇಶ ಬಂದಿತು, ಹಾಗಾಗಿ ಅವರ ಇಚ್ಛೆಯನ್ನು ಆಜ್ಞೆ ಎಂದು ಪರಿಗಣಿಸಿ ನಾನು ಅಭ್ಯಾಸವರ್ಗವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.

ಆ ಸಮಯದಲ್ಲಿ ನಾನು ಒಂದು ಜಿಲ್ಲೆಯಲ್ಲಿ ಒಂದು ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಲು ಒಂದು ಕೋಣೆಯಲ್ಲಿ ಕುಳಿತುಕೊಳ್ಳುತ್ತಿದ್ದೆ. ನನ್ನ ‘ಕನ್ಸಲಟೇಶನ್’ (ಸಮಾಲೋಚನೆ) ಕೊಠಡಿಯಲ್ಲಿ, ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರವನ್ನು ಹಾಕಲಾಗಿತ್ತು. ನಾನು ಅಲ್ಲಿ ಕುಳಿತಿರುವಾಗ ಅವರೊಂದಿಗೆ ಸಂವಾದ ನಡೆಸಿದೆ. ನಾನು ಅವರಿಗೆ ದೂರಿನ ಸ್ವರದಲ್ಲಿ “ನೀವು ನಾಮಜಪದ ವಿಷಯದಲ್ಲಿ ಕೇವಲ ೪ ಶಬ್ದಗಳನ್ನು ಹೇಳಿದ್ದೀರಿ. ಇಷ್ಟು ಮಾಹಿತಿಯನ್ನಾಧರಿಸಿ ಅಭ್ಯಾಸವರ್ಗವನ್ನು ತೆಗೆದುಕೊಳ್ಳುವುದಾದರೂ ಹೇಗೆ ?’’ಎಂದು ಕೇಳಿದೆನು. ಆ ಸಮಯದಲ್ಲಿ ‘ನಾನು ಡಾಕ್ಟರ’ ಎಂಬ ಬಗ್ಗೆ ನನಗೆ ಬಹಳ ಅಹಂಕಾರವಿತ್ತು. ಇದರಿಂದ ನಾಮಜಪದ ವಾಣಿ ಮತ್ತು ಅದರ ಮಹತ್ವವನ್ನು ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದ ಪ್ರಕಾರ ಎಲ್ಲರಿಗೂ ತಿಳಿಯುವಂತೆ ಹೇಳಲು ಸಾಧ್ಯವಾದರೆ ಮಾತ್ರ ಅದು ಎಲ್ಲರಿಗೂ ತಿಳಿಯುತ್ತದೆ ಎಂದು ನನಗೆ ಅನಿಸುತ್ತಿತ್ತು.

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ವೇದಗಳಂತಹ ಅಪೌರುಷೇಯ ಜ್ಞಾನವನ್ನು ಹೇಳಿದ ಪದ್ಧತಿಯಂತೆ ನನಗೆ ಸಹ ಜ್ಞಾನ ಲಭಿಸುವುದು

ವೇದಗಳು ಅಪೌರುಷೇಯವಾಗಿದ್ದು, ಅವುಗಳನ್ನು ಯಾರೂ ಬರೆದಿಲ್ಲ. ಋಷಿಗಳಿಗೆ ಅದು ಕೇಳಿಸಿತು ಮತ್ತು ಅವರು ಅದನ್ನು ಬರೆದಿಟ್ಟರು. ಇದರಿಂದ ಅವುಗಳಿಗೆ ‘ಶ್ರುತಿ’ ಎನ್ನುತ್ತಾರೆ. ಆ ದಿನ ನಾನು ವೇದೋನಾರಾಯಣನ ಅನುಭೂತಿ ನೀಡುವಂತಹ ಒಂದು ಪ್ರಸಂಗವನ್ನು ಅನುಭವಿಸಿದೆನು. ಮಧ್ಯಾಹ್ನ ೧ ಗಂಟೆಗೆ ಕೊನೆಯ ರೋಗಿ ಮತ್ತು ಸ್ವಾಗತಕಾರಿಣಿ ಮಹಿಳೆ ಇಬ್ಬರೂ ಹೋದರು. ನಾನು ಬಾಗಿಲು ಮುಚ್ಚಿಕೊಂಡು ‘ಕನ್ಸಲ್‌ಟೇಶನ್’ (ಸಮಾಲೋಚನಾ) ಕೊಠಡಿಯಲ್ಲಿ ಕಣ್ಣು ಮುಚ್ಚಿ ಚಿಂತನೆ ಮಾಡುತ್ತ ಕುಳಿತಿದ್ದೆನು. ಆ ಸಮಯದಲ್ಲಿ ನನ್ನ ಮುಚ್ಚಿದ ಕಣ್ಣುಗಳ ಮುಂದೆ ಎರಡು ಕಪ್ಪು ಮೋಡಗಳು ವಿರುದ್ಧ ದಿಕ್ಕಿನಿಂದ ಬಂದು ಒಂದಕ್ಕೊಂದು ಅಪ್ಪಳಿಸಿದವು ಮತ್ತು ಅದರಿಂದ ಮಿಂಚು ಬಂದು ಗುಡುಗು ಕೇಳಿಸುತ್ತಿತ್ತು. ಆಗ ಕಣ್ಣುಗಳ ಮುಂದೆ ಬೆಳ್ಳಿ ಬಣ್ಣದ ಕೆಲವು ಅಕ್ಷರಗಳು ಮೂಡಿದವು. ಅದರಲ್ಲಿ “ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇದರಲ್ಲಿದೆ. ಅದನ್ನು ಬರೆದುಕೊಳ್ಳಿರಿ’’ ಎಂದು ಬರೆದಿತ್ತು. ಏನೋ ಬೇರೆಯದೇ ನಡೆಯುತ್ತಿರುವಂತೆ ಅನಿಸಿತು ಮತ್ತು ನಾನು ನೋಟ್‌ಬುಕ್‌-ಪೆನ್ನು ತೆಗೆದುಕೊಂಡು ಬರೆಯಲು ಪ್ರಾರಂಭಿಸಿದೆನು.

ಮೊದಲು ಅಕ್ಷರಗಳು ಕಾಣಿಸಿದವು; ಆದರೆ ಈಗ ಯಾರೋ (ಸಾಕ್ಷಾತ್‌ ವೇದೋನಾರಾಯಣನೇ) ಮಾತನಾಡುತ್ತಿರುವಂತೆ ಅನಿಸಿತು. ಅವರು ಮುಂದಿನಂತೆ ಹೇಳಿದರು, ಯಾವಾಗ ಯಾವು ದಾದರೂ ಎರಡು ವಸ್ತುಗಳ ನಡುವೆ (ವಸ್ತು, ವ್ಯಕ್ತಿ ಮತ್ತು ಪದಾರ್ಥ) ಘರ್ಷಣೆಯಾಗುತ್ತದೆಯೋ, ಆಗ ಅಲ್ಲಿ ಸಗುಣ ಅಥವಾ ವ್ಯಕ್ತ ಊರ್ಜೆ ತಯಾರಾಗುತ್ತದೆ. (ಸಿದ್ಧಾಂತ : ಎಲ್ಲಿ ಘರ್ಷಣೆ, ಅಲ್ಲಿ ಊರ್ಜೆಯ ನಿರ್ಮಿತಿ (ಸುಪ್ತ ಊರ್ಜೆ ವ್ಯಕ್ತ) ಆಗುತ್ತದೆ. ಘರ್ಷಣೆ ಇಲ್ಲದಿದ್ದರೆ, ಊರ್ಜೆ ಸುಪ್ತವಾಗಿ ಉಳಿಯುತ್ತದೆ.)

೨. ಮಿಂಚು ಕೊರೈಸುವುದು ಮತ್ತು ಮೋಡಗಳ ಗುಡುಗು ಇವುಗಳ ನಡುವಿನ ಶಾಸ್ತ್ರ

ವೇದೋನಾರಾಯಣನು ಮುಂದುವರಿದು ಹೀಗೆ ಹೇಳಿದನು, ಮೋಡಗಳು ಪರಸ್ಪರ ಅಪ್ಪಳಿಸಿದಾಗ ಮೊದಲು ಮಿಂಚು ಕೋರೈಸುವುದು ಕಾಣಿಸುತ್ತದೆ ಮತ್ತು ನಂತರ ಮೋಡಗಳ ಗರ್ಜನೆ ಕೇಳಿಸುತ್ತದೆ. ಇದರ ಕಾರಣವೇನೆಂದರೆ ಪ್ರಕಾಶದ ವೇಗ ಧ್ವನಿಯ ವೇಗಕ್ಕಿಂತ ಅಧಿಕ ಇರುವುದರಿಂದ ನಮಗೆ ತಕ್ಷಣವೇ ಮಿಂಚು ಮಿಂಚುವುದು ಕಾಣಿಸುತ್ತದೆ ಮತ್ತು ಗುಡುಗು ತಡವಾಗಿ ಕೇಳಿಸುತ್ತದೆ. ಇದನ್ನು ಬರೆದುಕೊಂಡ ಬಳಿಕ ನಾನು ಅವರಿಗೆ ”ಈಗ ನೀವು ಹೇಳಿದ್ದನ್ನು ನಮಗೆ ೮-೯ ನೇ ತರಗತಿಯಲ್ಲಿ ಕಲಿಸಿದ್ದಾರೆ’’ ಎಂದು ಹೇಳಿದೆ, ಅದಕ್ಕೆ ಅವರು ”ಏಕೆ ಗಡಿಬಿಡಿ ಮಾಡುತ್ತಿ ? ನಾನು ನಿನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವವನಿದ್ದೇನೆ’’ ಎಂದರು.

೩. ಪ್ರಕಾಶ ಭಾಷೆಯು ಸ್ವರೂಪಸ್ಥಿತ ಮನುಷ್ಯನ ಭಾಷೆಯಾಗಿದ್ದು , ನಾದ ಭಾಷೆಯು ಅಶುದ್ಧಚಿತ್ತ ದೇಹಬುದ್ಧಿಸ್ಥಿತ ಮನುಷ್ಯನ ಭಾಷೆಯಾಗಿದೆ

ಅನಂತರ ಅವರು ನನಗೆ, ‘ಮನುಷ್ಯನ ಭಾಷೆ ನಾದ ಭಾಷೆಯೋ ಪ್ರಕಾಶಭಾಷೆಯೋ ?’ ಎಂದು ಪ್ರಶ್ನೆಯನ್ನು ಕೇಳಿದರು. ನಾನು ಅವರಿಗೆ ”ದೇವರ ಭಾಷೆ ಪ್ರಕಾಶಭಾಷೆ ಮತ್ತು ಮನುಷ್ಯನ ಭಾಷೆ, ನಾದಭಾಷೆ’’ ಎಂದು ಉತ್ತರಿಸಿದೆ. ಅದಕ್ಕೆ ಅವರು ಲೌಕಿಕ ದೃಷ್ಟಿಯಿಂದ ಅದು ಯೋಗ್ಯವಾಗಿದೆ, ಒಂದು ವೇಳೆ ಎಲ್ಲ ಪ್ರಾಣಿಗಳು ಪರಮಾತ್ಮನ ಅಭಿವ್ಯಕ್ತಿಯಾಗಿದ್ದರೆ ಎಲ್ಲರ ಭಾಷೆಗಳೂ ಪ್ರಕಾಶ ಭಾಷೆಯೇ ಆಗಿರಬೇಕಾಗಿತ್ತು. ಅರ್ಥಾತ್‌ ಶಾಸ್ತ್ರಗಳು ಹೇಳಿದ ಹಾಗೆ ಮನುಷ್ಯನ ಭಾಷೆ (ಯಾವನು ಮಾಯೆಯಲ್ಲಿ ಬದ್ಧ, ಅಂದರೆ ಅಶುದ್ಧ ಚಿತ್ತ ಇರುವವನು ಮತ್ತು ದೇಹಬುದ್ಧಿಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾನೆಯೋ ಅವನು) ನಾದಭಾಷೆ ಇರುತ್ತದೆ. ನಾಮದೊಂದಿಗೆ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಹಾಗೆಯೇ ಅವುಗಳ ಶಕ್ತಿ ಒಟ್ಟಿಗೆ ಇರುತ್ತವೆ. ಮಾಯೆಯಲ್ಲಿ ಸಿಲುಕಿರುವ ಮನುಷ್ಯನು ಕೇವಲ ಶಬ್ದಗಳ ಶಬ್ದಾರ್ಥವನ್ನು ತಿಳಿದುಕೊಳ್ಳಬಲ್ಲನು. ಅಶುದ್ಧ ಚಿತ್ತದಿಂದಾಗಿ ಪ್ರಕಾಶ ಭಾಷೆಯನ್ನು ಗ್ರಹಿಸುವ ಮತ್ತು ತಿಳಿದುಕೊಳ್ಳುವ (ಅರ್ಥ ಮಾಡಿಕೊಳ್ಳುವ) ಕ್ಷಮತೆ ಅವನಲ್ಲಿ ಇರುವುದಿಲ್ಲ; ಆದ್ದರಿಂದ, ಕಲಿಯುಗದಲ್ಲಿ, ಸಾಮಾನ್ಯ ಮನುಷ್ಯನ ಭಾಷೆ ನಾದಭಾಷೆ ಆಗಿರುತ್ತದೆ ಎಂದು ಹೇಳಲಾಗುತ್ತದೆ.

ಸಾಧನೆ ಹೆಚ್ಚಾದ ನಂತರ, ವ್ಯಕ್ತಿಯು ಮುಂದುಮುಂದಿನ ಅನುಭೂತಿಗಳನ್ನು ಪಡೆಯುತ್ತಾನೆ. ಆಧ್ಯಾತ್ಮಿಕ ಪ್ರಗತಿ ಶೇ. ೭೦ ರಷ್ಟು ಆದ ನಂತರ ಉನ್ನತರು ಯಾವುದಾದರು ವ್ಯಕ್ತಿ ಏನೂ ಮಾತನಾಡದೇ ಇದ್ದರೂ ಆತನ ಮನಸ್ಸಿನಲ್ಲಿನ ವಿಚಾರಗಳನ್ನು ತಿಳಿದುಕೊಳ್ಳಬಲ್ಲರು. ಅವರು ವಿಶ್ವಮನಸ್ಸಿನಲ್ಲಿನ ಈಶ್ವರೀ ವಿಚಾರಗಳನ್ನು ನಿರಂತರವಾಗಿ ಗ್ರಹಿಸುತ್ತಿರುತ್ತಾರೆ. ಅದಕ್ಕನುಸಾರ ಅವರು ಸಾಧಕರಿಗೆ ಹಾಗೆಯೇ ಸಮಾಜಕ್ಕೆ ಕಾಲಾನುರೂಪ ಮಾರ್ಗದರ್ಶನವನ್ನು ನೀಡುತ್ತಿರುತ್ತಾರೆ. ಇಂತಹ ಶುದ್ಧ ಚಿತ್ತ ಮತ್ತು ಸ್ವಸ್ವರೂಪಸ್ಥಿತ ಉನ್ನತರ ಭಾಷೆಯು ಈಗ ನಾದಭಾಷೆಯೊಂದಿಗೆ ಪ್ರಕಾಶಭಾಷೆಯೂ ಆಗಿರುತ್ತದೆ. ಇಂತಹ ಉನ್ನತರಲ್ಲಿ ಒಂದೇ ಸಮಯದಲ್ಲಿ ಮನುಷ್ಯತ್ವ ಮತ್ತು ದೇವತ್ವ ಕಾರ್ಯನಿರತವಾಗಿರುತ್ತದೆ. ಸಾಧನೆ, ಎಂದರೆ ಒಂದು ಅರ್ಥದಲ್ಲಿ, ಮನುಷ್ಯನು ತನ್ನ ನಾದಭಾಷೆಯ ಕ್ಷಮತೆಯನ್ನು ಪ್ರಕಾಶ ಭಾಷೆಯ ಕ್ಷಮತೆಗೆ ಪರಿವರ್ತಿಸುತ್ತಾ ಸ್ವಸ್ವರೂಪದೊಂದಿಗೆ ಏಕರೂಪತೆಯನ್ನು ಅನುಭವಿಸುವ ಕ್ರಿಯೆಯಾಗಿದೆ.

೪. ಧರ್ಮಪಾಲನೆ, ಧರ್ಮಾಚರಣೆ ಮತ್ತು ಸಾಧನೆ ಈ ಮಾರ್ಗಗಳನ್ನು ತೋರಿಸುವ ಧರ್ಮಮಾರ್ತಂಡರ ಬಗ್ಗೆ ಕೃತಜ್ಞರಾಗಿರಿ !

ಅಧ್ಯಾತ್ಮವನ್ನು ವಿಜ್ಞಾನದೊಂದಿಗೆ ಜೋಡಿಸಿ ನೋಡುವು ದಿದ್ದರೆ, ಯಾವ ರೀತಿ ಮೋಡಗಳು ಪರಸ್ಪರ ಅಪ್ಪಳಿಸಿದಾಗ ಧ್ವನಿ ಮತ್ತು ಪ್ರಕಾಶ ನಿರ್ಮಾಣವಾಗುತ್ತದೆಯೋ, ಹಾಗೆಯೇ ಮಾತನಾಡುವಾಗ ಅಥವಾ ನಾಮಜಪ ಮಾಡುವಾಗ ಧ್ವನಿ ಮತ್ತು ಪ್ರಕಾಶ ಊರ್ಜೆ ನಿರ್ಮಾಣವಾಗುತ್ತಿರುತ್ತದೆ. ಏನು ಮಾತನಾಡಲಾಗುತ್ತದೆ ಮತ್ತು ಯಾವ ಉದ್ದೇಶದಿಂದ ಮಾತನಾಡಲಾಗುತ್ತದೆ, ಅದಕ್ಕನುಸಾರ ಧ್ವನಿ ಮತ್ತು ಪ್ರಕಾಶ ಊರ್ಜೆ ನಿರ್ಮಾಣವಾಗುತ್ತದೆ. ಅದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಈ ಊರ್ಜೆಯ ಮೂಲಕ ಆ ವ್ಯಕ್ತಿಯ ಪ್ರಭಾವಲಯ (ಔರಾ) ತಯಾರಾಗುತ್ತದೆ. ಈ ಊರ್ಜೆಯ ಮೂಲಕ ಅವನು ಒಳ್ಳೆಯ, ಕೆಟ್ಟ ಅಥವಾ ಮಿಶ್ರ ಶಕ್ತಿ ಇವುಗಳ ಮೂಲವಾಗುತ್ತಾನೆ. ಇವುಗಳಿಂದಾಗಿ ಒಂದೋ ಅದು ಸಮಾಜಕ್ಕೆ ಪೂರಕ, ಅಪಾಯಕಾರಿ ಅಥವಾ ಪೂರಕ-ಅಪಾಯಕಾರಿಯಾಗುತ್ತಿರುತ್ತದೆ.

ನಕಾರಾತ್ಮಕ ಪ್ರಭಾವಲಯ ಇರುವರು ಸಮಾಜಕ್ಕೆ ಪರೋಕ್ಷವಾಗಿ ಅಪಾಯಕಾರಿ ಇರುತ್ತಾರೆ; ಸಕಾರಾತ್ಮಕ ಪ್ರಭಾವಲಯ ಇರುವವರು ಪೂರಕವಾಗಿರುತ್ತಾರೆ. ಎರಡೂ ಇದ್ದರೆ ಮಿಶ್ರವಾಗಿರುತ್ತಾರೆ; ಆದರೆ ಇದರಿಂದ ಯಾರೂ ಹೆದರಬೇಕೆಂದಿಲ್ಲ. ಯಾರ ಪ್ರಭಾವಲಯ ನಕಾರಾತ್ಮಕವಾಗಿದೆಯೋ, ಅವರಿಗೆ ಸಾಧನೆಯಿಂದ ಅದರಲ್ಲಿ ಪರಿವರ್ತನೆ ಮಾಡಿ ಸಮಾಜಕ್ಕೆ ಪೂರಕವಾಗಲು ಸಹಜ ಸಾಧ್ಯವಿದೆ. ಧರ್ಮಪರಂಪರೆಯಿಂದ ಧರ್ಮಮಾರ್ತಂಡರು (ಧರ್ಮವನ್ನು ಅರಿತವರು) ಈ ಸೂಕ್ಷ್ಮ ವಿಚಾರವನ್ನು ಮಾಡಿದ್ದು, ಅವರು ಧರ್ಮಪಾಲನೆ, ಧರ್ಮಾಚರಣೆ ಮತ್ತು ಸಾಧನೆ ಇವುಗಳಿಂದ ಪ್ರತಿಯೊಬ್ಬನಿಗೂ ಸಮಷ್ಟಿಗೆ ಪೂರಕವಾಗುವ ಅವಕಾಶ ಮತ್ತು ಮಾರ್ಗವನ್ನು ಒದಗಿಸಿದ್ದಾರೆ. ಈ ಬಗ್ಗೆ ಅವರಿಗೆ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಕಡಿಮೆಯೇ ಆಗಿದೆ.

– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ (ಆಗಸ್ಟ್ ೨೦೨೩) (ಮುಂದುವರಿಯುವುದು)