63 ವರ್ಷದ ಥಾಮಸ್ ಸ್ಯಾಮ್ಯುಯೆಲ್ ಹುಡುಗಿಯನ್ನು ದತ್ತು ಪಡೆದು ಬಲಾತ್ಕಾರ : ನ್ಯಾಯಾಲಯದಿಂದ 109 ವರ್ಷ ಶಿಕ್ಷೆ

ಪಥನಂತಿಟ್ಟಾ (ಕೇರಳ) – ಕೇರಳದ ಒಂದು ನ್ಯಾಯಾಲಯವು ಇತ್ತೀಚೆಗೆ ಥಾಮಸ್ ಸ್ಯಾಮ್ಯುಯೆಲ್ ಹೆಸರಿನ 63 ವರ್ಷದ ವ್ಯಕ್ತಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ದೋಷಿ ಎಂದು ನಿಧ್ರಿಸಿ 109 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಥಾಮಸ್ ಸ್ಯಾಮ್ಯುಯೆಲ್ ಬಲಾತ್ಕಾರ ಮಾಡಿದ ಬಾಲಕಿಯನ್ನು ಕೆಲವು ವರ್ಷಗಳ ಹಿಂದೆ ದತ್ತು ಪಡೆದಿದ್ದನು. ಕೇರಳದ ದಕ್ಷಿಣದಲ್ಲಿರುವ ಪಥನಂತಿಟ್ಟಾ ಜಿಲ್ಲೆಯ ಅದೂರ್‌ನಲ್ಲಿರುವ ಶೀಘ್ರಗತಿಯ ವಿಶೇಷ ನ್ಯಾಯಾಲಯವು ಪಂದಳಂ ನಿವಾಸಿ ಥಾಮಸ್ ಸ್ಯಾಮ್ಯುಯೆಲ್‌ಗೆ 6 ಲಕ್ಷ 25 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ. ದಂಡದ ಮೊತ್ತವನ್ನು 12 ವರ್ಷದ ಸಂತ್ರಸ್ತ ಬಾಲಕಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪೊಲೀಸರು ನೀಡಿರುವ ಮಾಹಿತಿಯನುಸಾರ, ಸಂತ್ರಸ್ತ ಬಾಲಕಿಯನ್ನು ಸ್ಯಾಮ್ಯುಯೆಲ್ ಮತ್ತು ಆತನ ಪತ್ನಿ ದತ್ತು ಪಡೆದಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಹುಡುಗಿಯನ್ನು ದತ್ತು ಪಡೆದ ನಂತರ, ಅವಳು ಸ್ಯಾಮ್ಯುಯೆಲ್ ಮನೆಗೆ ಬಂದ ಕ್ಷಣದಿಂದ, ಅವನು ಅವಳ ಮೇಲೆ ಲೈಂಗಿಕ ದೌರ್ಜನ್ಯ ನೀಡಲು ಪ್ರಾರಂಭಿಸಿದನು. ಮಾರ್ಚ್ 2021 ರಿಂದ ಮೇ 2022 ರವರೆಗೆ ಒಂದು ವರ್ಷದ ಅವಧಿಯಲ್ಲಿ, ಅವನು ಅವಳನ್ನು ಬೆದರಿಸುತ್ತಾ, ಅವಳ ಮೇಲೆ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಮಾಡಿದನು ಮತ್ತು ಅವಳನ್ನು ಹಿಂಸಿಸಿದನು.

ನಂತರ, ಸ್ಯಾಮ್ಯುಯೆಲ್ ಅನಾರೋಗ್ಯದ ಕಾರಣವನ್ನು ನೀಡುತ್ತಾ, ಮಕ್ಕಳ ಕಲ್ಯಾಣ ಸಮಿತಿಗೆ ಬಾಲಕಿಯನ್ನು ಕರೆದುಕೊಂಡು ಹೋಗುವಂತೆ ಮನವಿ ಮಾಡಿದನು. ಇದಾದ ನಂತರ ಬಾಲಕಿಯನ್ನು ಮತ್ತೊಂದು ಕುಟುಂಬ ದತ್ತು ಪಡೆಯಿತು. ಸಂತ್ರಸ್ತೆ ಬಾಲಕಿಯು ಅವಳ ಮೇಲೆ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಕುಟುಂಬದವರಿಗೆ ತಿಳಿಸಿದ್ದಾಳೆ. ಅವರ ದೂರಿನ ಮೇರೆಗೆ ಪಂದಳಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ‘ಪೋಕ್ಸೊ’ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.