ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಯವರು ವ್ಯಕ್ತಿಯ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪಾಯೋಗ ವನ್ನು ನಿರ್ಮಿಸಿದ್ದಾರೆ. ಇದರ ಅಂತರ್ಗತ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಆದ್ಯತೆ ನೀಡಲಾಗಿದೆ. ಈಶ್ವರಪ್ರಾಪ್ತಿಯಾಗಲು ಮನಸ್ಸಿನ ಶುದ್ಧೀಕರಣ ವಾಗುವುದು ಮಹತ್ವದ್ದಾಗಿದ್ದು ಸ್ವಭಾವದೋಷ ಮತ್ತು ಅಹಂಅನ್ನು ದೂರಗೊಳಿಸುವುದು ಅತ್ಯಂತ ಆವಶ್ಯಕವಾಗಿದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯ ಮಹತ್ವವನ್ನು ಮನಸ್ಸಿನ ಮೇಲೆ ಬಿಂಬಿಸಲು ಸನಾತನದ ೧೭ ನೇ ಸಂತರಾದ ಪೂ. ಉಮೇಶ ಶಣೈ ಇವರು ಮಾಡಿದ ಮಾರ್ಗದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ.
೧. ಅನೇಕ ಆಧ್ಯಾತ್ಮಿಕ ಸಂಸ್ಥೆಗಳಿಗೆ ಸಾಧನೆಯಲ್ಲಿನ ಉನ್ನತಿಗಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಆವಶ್ಯಕವಾಗಿದೆ ಎಂಬುದು ಗೊತ್ತೇ ಇಲ್ಲ
’ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನವೇ ಆಗಿದೆ. ಅನೇಕ ಆಧ್ಯಾತ್ಮಿಕ ಸಂಸ್ಥೆಗಳು ತಮ್ಮ ತಮ್ಮ ವಿಚಾರಗಳೊಂದಿಗೆ, ಗುರುಗಳು ಹೇಳಿದ ಸಾಧನಾ ಮಾರ್ಗದಿಂದ ಸಾಧನೆಯ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಇದರಲ್ಲಿನ ಹೆಚ್ಚಿನವರು ಭಕ್ತಿಮಾರ್ಗದಿಂದ ಸಾಧನೆಯ ಪ್ರಯತ್ನವನ್ನು ಮಾಡಿ ಮುಂದಿನ ಹಂತಕ್ಕೆ ಹೋಗಲು ಪ್ರಯತ್ನಿಸುತ್ತಾರೆ. ’ನಮ್ಮ ಸಾಧನೆಯಲ್ಲಿ ನಾವು ಯಾವ ಹಂತದ ವರೆಗೆ ತಲುಪಿದ್ದೇವೆ ?’, ಎಂಬುದು ಅವರ ಸಾಧಕರಿಗೆ ತಿಳಿಯುವುದಿಲ್ಲ. ಅಷ್ಟೇ ಅಲ್ಲ, ಸಂಸ್ಥೆಯೂ ’ಸಾಧಕರ ಸಾಧನೆ ಹೇಗೆ ನಡೆದಿದೆ ?’ ಎಂಬುದರ ಬಗ್ಗೆ ಅವರನ್ನು ಬೆಂಬತ್ತಿ ಮುಂದಿನ ಹಂತಕ್ಕೆ ಹೋಗಲು ಮಾಡುವ ಪ್ರಯತ್ನದಲ್ಲಿ ಕಡಿಮೆ ಬೀಳುತ್ತದೆ. ಅನೇಕ ಸಂಸ್ಥೆಗಳಿಗೆ ’ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಈ ಸಾಧನೆಯ ಬಗೆಗಿನ ಮಾಹಿತಿ ಅತ್ಯಂತ ಕಡಿಮೆ ಇದ್ದು ಅದರ ಬಗ್ಗೆ ಹೇಳಿದರೆ ಅವರು ಆಶ್ಚರ್ಯಪಡುತ್ತಾರೆ.
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂಕಲ್ಪ ಮತ್ತು ಮಾರ್ಗದರ್ಶನದಿಂದ ಸಾಧಕರು ಸಾಧನೆಯ ಮುಂದಿನ ಹಂತಗಳಿಗೆ ಹೋಗುವುದು
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂಕಲ್ಪ ಮತ್ತು ಮಾರ್ಗದರ್ಶನ ದಿಂದ ಸಾಧಕರು ಸಾಧನೆಯ ಮುಂದುಮುಂದಿನ ಹಂತಗಳಿಗೆ ಹೋಗುತ್ತಿದ್ದಾರೆ. ಇದರ ಮುಖ್ಯ ಕಾರಣವೆಂದರೆ ಸಾಧಕರು ನಾಮಸ್ಮರಣೆ, ಸತ್ಸಂಗ ಮತ್ತು ಸತ್ಸೇವೆಯೊಂದಿಗೆ ಗುರುದೇವರು ನೀಡಿರುವ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಕೃತಿಯಲ್ಲಿ ತರುತ್ತಿದ್ದಾರೆ.
೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗೆ ಆದ್ಯತೆಯನ್ನು ನೀಡುವುದು
ಸಾಧನೆಯಲ್ಲಿ ನಮಗೆ ಭಗವಂತನೊಂದಿಗೆ ಏಕರೂಪ ಆಗಬೇಕಾಗಿರುತ್ತದೆ. ಭಗವಂತನು ಸ್ವಭಾವದೋಷರಹಿತ ಮತ್ತು ಅಹಂರಹಿತನಾಗಿದ್ದಾನೆ, ಹೀಗಿರುವಾಗ ’ನಾವು ನಮ್ಮ ಅನೇಕ ಸ್ವಭಾವದೋಷಗಳು ಮತ್ತು ಅಹಂನ ಜೊತೆಗೆ ಭಗವಂತನ ಜೊತೆಗೆ ಏಕರೂಪವಾಗಲು ಸಾಧ್ಯವಿದೆಯೇ ?’, ಅಂತರ್ಮನಸ್ಸಿನಲ್ಲಿ (ಚಿತ್ತದಲ್ಲಿ) ಇಷ್ಟೆಲ್ಲ ಸ್ವಭಾವದೋಷಗಳನ್ನು ಇಟ್ಟುಕೊಂಡು ನಾವು ಆನಂದದಿಂದ ಇರಲು ಸಾಧ್ಯವೇ ? ಆದ್ದರಿಂದಲೇ ಗುರುದೇವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಪ್ರಾಧಾನ್ಯತೆಯನ್ನು ನೀಡಿದ್ದಾರೆ.
೪. ಸಾಧಕರು ’ನಾವು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇವೆ ?’, ಎಂಬುದರ ವಿಚಾರ ಮಾಡಬೇಕು
ಸಾಧಕರು ಸಾಧನೆಯಲ್ಲಿ ಕಡಿಮೆ ಬೀಳಬಾರದೆಂದು ಗುರುದೇವರು ಜವಾಬ್ದಾರ ಸಾಧಕರ ಮಾಧ್ಯಮದಿಂದ ಪ್ರತಿ ಹಂತದಲ್ಲಿ ಸಾಧಕರ ವರದಿಯನ್ನು ತೆಗೆದುಕೊಂಡು ಅವರ ಪ್ರಗತಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಆದ್ದರಿಂದ ಸಾಧಕರು ಸಾಧನೆಯ ಮುಂದಿನ ಹಂತಕ್ಕೆ ಹೋಗಿ ಆನಂದವನ್ನು ಅನುಭವಿಸುತ್ತಿದ್ದಾರೆ. ಸಾಧಕರ ಪ್ರಗತಿಯ ಬಗೆಗಿನ ತಳಮಳವು ಸಾಧಕರಿಗಿಂತ ಗುರುದೇವರಲ್ಲಿಯೇ ಹೆಚ್ಚಿದೆ; ಆದ್ದರಿಂದ ನಾವು ಸಾಧಕರು ’ಎಲ್ಲಿ ಕಡಿಮೆ ಬೀಳುತ್ತಿದ್ದೇವೆ ?’, ಎಂಬುದರ ಬಗ್ಗೆ ವಿಶ್ಲೇಷಣೆ ಮಾಡಿ ಗುರುದೇವರಿಗೆ ನಮ್ಮ ಪ್ರಗತಿಯಿಂದ ಆನಂದವನ್ನು ನೀಡಬೇಕು. ಅಂತರ್ಮನಸ್ಸಿನ ಶುದ್ಧೀಕರಣವು ಮೋಕ್ಷಪ್ರಾಪ್ತಿಯ ದಿಶೆಯಲ್ಲಿನ ಮಾರ್ಗಕ್ರಮಣವಾಗಿದೆ. ಇದು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಮಾಡುವ ಪ್ರಯತ್ನವಾಗಿದೆ.
೫. ವ್ಯಷ್ಟಿ ಸಾಧನೆಯನ್ನು ಮಾಡುವಾಗ ಅಂತರ್ಮುಖತೆ ಮಹತ್ವದ್ದಾಗಿರುವುದು ಮತ್ತು ಅದಕ್ಕಾಗಿ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಯ ಸಂಪೂರ್ಣ ಲಾಭವನ್ನು ಪಡೆಯುವುದು ಆವಶ್ಯಕ
’ಸ್ವಭಾವದೋಷ ಮತ್ತು ಅಹಂ ನಿರ್ಮಲನೆ ತಖ್ತೆ’ಯನ್ನು ತುಂಬಿಸುವುದು ಹಾಗೂ ಅದಕ್ಕಾಗಿ ಸ್ವಯಂಸೂಚನೆಗಳನ್ನು ಕೊಡುವುದು ಈ ವಿಷಯದ ಬಗ್ಗೆ ನಮ್ಮಲ್ಲಿ ಗಾಂಭೀರ್ಯ ಮೂಡಿಸುವುದು ಆವಶ್ಯಕವಾಗಿದೆ. ತಖ್ತೆಯನ್ನು ಬರೆಯು ವುದು, ಅಂದರೆ ಒಂದು ರೀತಿಯಲ್ಲಿ ದೇವರೊಂದಿಗಿನ ಅನುಸಂಧಾನವೇ ಆಗಿರುತ್ತದೆ. ತಖ್ತೆಯಲ್ಲಿ ಎಷ್ಟು ತಪ್ಪುಗಳನ್ನು ಬರೆಯುತ್ತೇವೆಯೋ, ಅದಕ್ಕಿಂತ ಅವುಗಳ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿಯೂ ಅಂತರ್ಮುಖವಾಗುವುದು ಅತ್ಯಂತ ಆವಶ್ಯಕವಾಗಿದೆ. ದಿನವಿಡೀ ಆಗಿರುವ ಅನೇಕ ತಪ್ಪುಗಳನ್ನು ನಾವು ಮರೆಯುತ್ತೇವೆ; ಆದ್ದರಿಂದ ತಪ್ಪಾದ ನಂತರ ತಕ್ಷಣ ಅವುಗಳನ್ನು ತಖ್ತೆಯಲ್ಲಿ ಬರೆಯುವ ಅಭ್ಯಾಸವಾಗಬೇಕು. ಇದನ್ನು ನಾವು ಗಾಂಭೀರ್ಯದಿಂದ ಮಾಡಬೇಕು; ಇಲ್ಲದಿದ್ದರೆ ಸ್ವಭಾವದೋಷಗಳಿಗಾಗಿ ಸ್ವಯಂಸೂಚನೆಗಳನ್ನು ಕೊಡುವ ಪ್ರಕ್ರಿಯೆ ಸರಿಯಾಗಿ ಆಗುವುದಿಲ್ಲ. ಸ್ವಭಾವದೋಷ ನಿರ್ಮೂಲನೆಗಾಗಿ ತಖ್ತೆಯನ್ನು
ಬರೆಯುವುದು ಇದು ಮೊದಲ ಹಂತ ಮತ್ತು ಅಡಿಪಾಯ ವಾಗಿದೆ. ಪ್ರತಿಯೊಬ್ಬರೂ ಈ ಕುರಿತು ಗಾಂಭೀರ್ಯದಿಂದ ವಿಚಾರ ಮಾಡಬೇಕು. ಗುರುದೇವರು ನಮಗೆ ಲಭ್ಯಮಾಡಿ ಕೊಟ್ಟಿರುವ ಈ ಪ್ರಕ್ರಿಯೆಯ ಲಾಭವನ್ನು ಪಡೆಯಲು ನಾವು ಪ್ರಯತ್ನ ಮಾಡಬೇಕು.
೬. ಸ್ವಭಾವದೋಷಗಳ ನಿರ್ಮೂಲನೆಗಾಗಿ ಸ್ವಯಂಸೂಚನೆ ಅಂತರ್ಮನಸ್ಸಿನ ವರೆಗೆ ತಲುಪಬೇಕು
’ನಾವು ನಮ್ಮ ಸ್ವಭಾವದೋಷಗಳಿಗಾಗಿ ಕೊಡುತ್ತಿರುವ ಸ್ವಯಂಸೂಚನೆಗಳು ನಮ್ಮ ಅಂತರ್ಮನಸ್ಸಿನವರೆಗೆ ಹೋಗುತ್ತಿವೆಯಲ್ಲ ?’, ಇದರ ಬಗ್ಗೆ ಅಂತರ್ಮುಖರಾಗಿ ವಿಚಾರ ಮಾಡಬೇಕು. ನಾವು ದಿನವಿಡೀ ೮ ರಿಂದ ೧೨ ಸ್ವಯಂಸೂಚನೆಗಳನ್ನು ಕೊಡುತ್ತೇವೆ (ಸಾಧಕರ ಸ್ಥಿತಿಗನುಸಾರ ಸ್ವಯಂಸೂಚನೆಯ ಸಂಖ್ಯೆಗಳು ಅವಲಂಬಿಸಿರುತ್ತವೆ. ಸ್ವಯಂಸೂಚನೆಗಳನ್ನು ಎಷ್ಟು ಹೆಚ್ಚು ಕೊಡುತ್ತೇವೆಯೋ, ಅಷ್ಟು ಹೆಚ್ಚು ಲಾಭವಾಗುತ್ತದೆ.); ಆದರೆ ’ಕೆಲವು ಸ್ವಭಾವದೋಷಗಳು ಇನ್ನೂ ಅಪೇಕ್ಷಿತ ಪ್ರಮಾಣದಲ್ಲಿ ಕಡಿಮೆ ಆಗಲಿಲ್ಲ’, ಎಂಬ ವಿಚಾರವು ಸಾಧಕರಲ್ಲಿ ಕಂಡುಬರುತ್ತವೆ. ಸೂಚನೆಗಳು ಬಾಹ್ಯ ಮನಸ್ಸಿನಲ್ಲಿಯೇ ಇದ್ದರೆ, ಹೆಚ್ಚು ಲಾಭವಾಗುವುದಿಲ್ಲ. ನಮ್ಮ ಸ್ವಭಾವದೋಷಗಳು, ಸಂಸ್ಕಾರ ಮತ್ತು ಅಹಂ ಇವುಗಳು ಅಂತರ್ಮನಸ್ಸಿನಲ್ಲಿ ಇರುವುದರಿಂದ ಅವುಗಳನ್ನು ನಾಶ ಮಾಡಲು ಸೂಚನೆಗಳು ಅಂತರ್ಮನಸ್ಸಿನ ವರೆಗೆ ಹೋಗುವುದು ಅತ್ಯಂತ ಆವಶ್ಯಕವಾಗಿದೆ. ಸೂಚನೆಗಳು ಅಂತರ್ಮನಸ್ಸಿನ ವರೆಗೆ ತಲುಪದಿದ್ದರೆ, ಸ್ವಭಾವದೋಷಗಳ ನಿರ್ಮೂಲನೆಯೂ ಆಗುವುದಿಲ್ಲ. ಇದರ ಕಡೆಗೆ ಸಾಧಕರು ಗಮನ ಕೊಡುವುದು ಅಷ್ಟೇ ಮಹತ್ವದ್ದಾಗಿದೆ. ’ಇಷ್ಟೊಂದು ಪ್ರಯತ್ನ ಮಾಡಿಯೂ ನನ್ನ ಪ್ರಗತಿ ಆಗುವುದಿಲ್ಲ’, ಎಂಬ ನಕಾರಾತ್ಮಕ ವಿಚಾರಕ್ಕೆ ಇದು ಕಾರಣವಾಗುತ್ತದೆ. ಪ್ರತಿಯೊಂದು ಸ್ವಯಂಸೂಚನೆ ಅಂತರ್ಮನಸ್ಸಿನ ವರೆಗೆ ಹೋದರೆ ನಮಗೆ ಆನಂದದ ಸ್ಪಂದನಗಳ ಅರಿವಾಗುತ್ತವೆ.
೭. ಸ್ವಭಾವದೋಷ ಮತ್ತು ಅಹಂ ನಾಶವಾದಾಗಮಾತ್ರ ಅಂತರ್ಮನಸ್ಸಿನಲ್ಲಿನ ಗುರುಗಳ ಅಸ್ತಿತ್ವದ ಅರಿವಾಗಿ ಆತ್ಮಜ್ಯೋತಿಯ ಪ್ರಕಾಶ ಕಾಣಿಸುವುದು
ಗುರುದೇವರು ಹೇಳಿದಂತೆ ಅಂತರ್ಮನಸ್ಸಿನಲ್ಲಿನ ಸ್ವಭಾವದೋಷ, ಅಹಂಕಾರ, ಇಷ್ಟಾ-ನಿಷ್ಟಗಳು, ವಾಸನಾ ಇತ್ಯಾದಿಗಳನ್ನು ನಾವು ಯಾವಾಗ ಕಡಿಮೆ ಮಾಡುತ್ತೇವೆಯೋ, ಆಗಲೇ ಅವಿದ್ಯೆಯ ಆವರಣ ನಾಶವಾಗಿ ಆತ್ಮಚೈತನ್ಯದ ಅರಿವಾಗುವುದು. ಸೂಚನೆಗಳು ಅಂತರ್ಮನಸ್ಸಿನ ವರೆಗೆ ತಲುಪದಿದ್ದರೆ, ಯಾವುದೇ ಉಪಯೋಗವಾಗುವುದಿಲ್ಲ. ಯಾವಾಗ ಅಂತರ್ಮನಸ್ಸಿನಲ್ಲಿನ ಸ್ವಭಾವದೋಷಗಳು ಮತ್ತು ಅಹಂ ನಾಶವಾಗುತ್ತವೆಯೋ, ಆಗಲೇ ಲಿಂಗದೇಹದ ಮೇಲಿರುವ ಅವಿದ್ಯೆಯ ಆವರಣ ನಾಶವಾಗಿ ಶುದ್ಧೀಕರಣದ ನಂತರವೇ ಗುರುಗಳ ಅಸ್ತಿತ್ವದ ಅರಿವಾಗುವುದು ಮತ್ತು ಆತ್ಮಜ್ಯೋತಿಯ ಪ್ರಕಾಶ ಕಾಣಿಸುವುದು. – (ಪೂ.) ಉಮೇಶ ಶೆಣೈ, ಸನಾತನ ಆಶ್ರಮ, ದೇವದ, ಪನವೇಲ್.