ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭೀಕರ ದಾಳಿಯ ನಂತರ ಇಸ್ರೇಲ್ ಹಮಾಸ ವಿರುದ್ಧ ಯುದ್ಧ ಘೋಷಿಸಿದೆ. ಈ ಯುದ್ಧದ ನಂತರ, ಉತ್ತರ ಪ್ರದೇಶದ ಅಲಿಘಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಮಾಸ್ ಮತ್ತು ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿ ಮೆರವಣಿಗೆಗಳನ್ನು ನಡೆಸಿದ್ದರು. ಈ ಮೆರವಣಿಗೆಗಳ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಇಸ್ರೇಲ್-ಹಮಾಸ ಸಂಘರ್ಷದ ಬಗ್ಗೆ ಭಾರತ ಸರಕಾರ ತೆಗೆದುಕೊಂಡಿರುವ ನಿಲುವಿನ ವಿರುದ್ಧ ಮಾತನಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ನವರಾತ್ರಿ ಮತ್ತು ಇತರ ಹಬ್ಬಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಈ ಆದೇಶ ನೀಡಿದ್ದಾರೆ.
ಅವರು ಮಾತನಾಡಿ, ಕೇಂದ್ರ ಸರಕಾರ ತೆಗೆದುಕೊಂಡಿರುವ ನಿಲುವಿಗೆ ವಿರುದ್ಧವಾಗಿ ಯಾರಾದರೂ ನಿಲುವು ತೆಗೆದುಕೊಳ್ಳುತ್ತಿದ್ದರೆ, ಹಾಗೆಯೇ, ಸಾಮಾಜಿಕ ಜಾಲತಾಣಗಳು ಅಥವಾ ಧಾರ್ಮಿಕ ಸ್ಥಳಗಳ ಮೂಲಕ ಹೇಳಿಕೆಗಳನ್ನು ನೀಡಿ ದ್ವೇಷವನ್ನು ಹರಡಲು ಯತ್ನಿಸಿದರೆ ಅದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು. ಅಲಿಘಡ ವಿಶ್ವವಿದ್ಯಾನಿಲಯದಂತೆಯೇ, ಇಸ್ರೇಲ್ ವಿರುದ್ಧ ಚೆನ್ನೈ ಮತ್ತು ಕೋಲಕಾತಾದಲ್ಲಿ ಪ್ರತಿಭಟನೆಗಳು ನಡೆದವು. ‘ಎಸ್.ಐ.ಓ. ಇಂಡಿಯಾ’ ಎಂಬ ಸಂಘಟನೆ ಇಡೀ ದೇಶದಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸಲು ಹೊರಟಿದೆ ಎಂದು ಹೇಳಿದರು.