
ಶಬರಿಮಲೈ ಪ್ರಕರಣದಲ್ಲಿ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಿರುವ ನಿಲುವು ಕೇವಲ ಒಂದು ದೇವಸ್ಥಾನಕ್ಕೆ ಸೀಮಿತವಾಗಿರದೆ ಭಾರತದ ಧಾರ್ಮಿಕಸ್ವಾತಂತ್ರ್ಯ ಮತ್ತು ನ್ಯಾಯಾಲಯದ ಅಧಿಕಾರದ ಮಿತಿ ಬಗ್ಗೆ ನೇರ ಭಾಷ್ಯ ಮಾಡುವಂತಹದ್ದಾಗಿದೆ.
೧. ಪರಂಪರೆಗಳು ಮತ್ತು ಸಂಪ್ರದಾಯಗಳ ಬಗ್ಗೆ ಕೇಂದ್ರ ಸರಕಾರದ ದೃಢ ನಿಲುವು

ಕೇಂದ್ರ ಸರಕಾರದ ಹೇಳಿಕೆಯಂತೆ ‘ಧಾರ್ಮಿಕ ಪರಂಪರೆಗಳು ಮತ್ತು ಶ್ರದ್ಧೆಯ ಬಗ್ಗೆ ನ್ಯಾಯಾಲಯಗಳು ತೀರ್ಪು ನೀಡಬಾರದು. ಯಾವ ವ್ಯಕ್ತಿ ಆ ಧರ್ಮವನ್ನು ಪಾಲಿಸುವುದಿಲ್ಲವೋ, ಅವನು ಆ ಪರಂಪರೆಗಳ ಬಗ್ಗೆ ಪ್ರಶ್ನೆ ಎತ್ತುವುದು ತಪ್ಪಾಗುತ್ತದೆ, ಹಾಗೆಯೇ ‘ಸಂವಿಧಾನಿಕ ನೈತಿಕತೆಯಂತಹ ಅಸ್ಪಷ್ಟ ಸಂಕಲ್ಪದ ಆಧಾರದಲ್ಲಿ ಸಾಂಪ್ರದಾಯಿಕ ಪದ್ಧತಿಗಳನ್ನು ಬದಲಾಯಿಸುವುದು ಸರಿಯಲ್ಲ, ಎಂದೂ ಸರಕಾರವು ಸ್ಪಷ್ಟಪಡಿಸಿದೆ. ಇದಕ್ಕೆ ಹೊರತಾಗಿ ‘ನ್ಯಾಯಾಲಯಗಳು ‘ಯಾವ ಪರಂಪರೆ ಆವಶ್ಯಕವಾಗಿದೆ ? ಇದನ್ನು ನಿರ್ಧರಿಸುವ ಬದಲು, ಆ ಶ್ರದ್ಧೆಯ ಪ್ರಾಮಾಣಿಕತೆಯನ್ನು ಪರಿಶೀಲಿಸಬೇಕು ಮತ್ತು ಧಾರ್ಮಿಕ ವಿಷಯಗಳಲ್ಲಿ ಸೀಮಿತ ಹಸ್ತಕ್ಷೇಪ ಮಾಡಬೇಕು ಎಂಬ ಸಲಹೆಯನ್ನು ಕೇಂದ್ರವು ನೀಡಿದೆ. ‘ದೇವತೆಯ ಸ್ವರೂಪದ ಬಗ್ಗೆ ಗೌರವವಿಡುವುದು ಮತ್ತು ವೈಯಕ್ತಿಕ ಹಕ್ಕು ಹಾಗೂ ಸಾಮೂಹಿಕ ಶ್ರದ್ಧೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಆವಶ್ಯಕವಾಗಿದೆ, ಎಂಬುದೂ ಸರಕಾರದ ಅಭಿಪ್ರಾಯವಾಗಿದೆ. ಮಹತ್ವದ್ದೆಂದರೆ ‘ಧಾರ್ಮಿಕ ಸುಧಾರಣೆಯ ಅಧಿಕಾರ ನ್ಯಾಯಾಲಯದ್ದಲ್ಲ, ಬದಲಿಗೆ ಶಾಸಕರದ್ದಾಗಿದೆ ಎಂದು ಕೇಂದ್ರವು ದೃಢವಾಗಿ ಹೇಳಿದೆ.
ಒಟ್ಟಾರೆ ಈ ವಿವಾದವು ಕೇವಲ ಶಬರಿಮಲೈ ಮಟ್ಟಿಗೆ ಸೀಮಿತವಾಗಿರದೇ ಭಾರತದಲ್ಲಿ ಧರ್ಮ ಮತ್ತು ಸಂವಿಧಾನದ ನಡುವೆ ಸಮತೋಲನವನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬುದರ ನಿರ್ಣಾಯಕ ಹಂತವಾಗಬಹುದು.
೨. ಮಹಾಧಿವಕ್ತಾ ತುಷಾರ ಮೆಹತಾ ಇವರು ಯುಕ್ತಿವಾದ ಮಾಡುವಾಗ ಮಂಡಿಸಿದ ಪ್ರಮುಖ ಅಂಶಗಳು

ಕೇಂದ್ರ ಸರಕಾರದ ಮಹಾಧಿವಕ್ತಾ ತುಷಾರ ಮೆಹತಾ ಇವರು ೭ ಎಪ್ರಿಲ್ ರಂದು ನಡೆದ ಯುಕ್ತಿವಾದದಲ್ಲಿ ಮಂಡಿಸಿದ ೧೦ ಮುಖ್ಯ ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಅ. ಧರ್ಮವನ್ನು ನಂಬದವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸಲ್ಲಿಸುವುದರ ಮಿತಿ : ಯಾವ ವ್ಯಕ್ತಿಗಳು ಸ್ವತಃ ಆ ಧರ್ಮವನ್ನು ಪಾಲಿಸುವುದಿಲ್ಲವೋ, ಅವರು ಆ ಧರ್ಮದ ಸಂಪ್ರದಾಯಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದನ್ನು ಸರಕಾರವು ವಿರೋಧಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮೂಲತಃ ಸಮಾಜದ ವಂಚಿತ ಮತ್ತು ತಮ್ಮ ಹಕ್ಕಿಗಾಗಿ ಮಾತನಾಡಲಾಗದ ಜನರಿಗೆ ನ್ಯಾಯ ಕೊಡಿಸಲು ಪ್ರಾರಂಭಿಸಲಾಗಿತ್ತು; ಆದರೆ ಈಗ ಅದು ಕೆಲವು ಸ್ಥಳಗಳಲ್ಲಿ ವೈಚಾರಿಕ ಸಂಘರ್ಷದ ಸಾಧನವಾಗುತ್ತಿದೆ ಎಂಬುದು ಗಮನಕ್ಕೆ ಬರುತ್ತಿದೆ. ಅದರಿಂದ ನ್ಯಾಯಾಲಯಗಳ ಮೇಲೆ ಅನಾವಶ್ಯಕ ಒತ್ತಡ ಉಂಟಾಗುತ್ತದೆ ಮತ್ತು ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೊರಗಿನವರ ಹಸ್ತಕ್ಷೇಪ ಹೆಚ್ಚಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ‘ಲೋಕಸ್ ಸ್ಟ್ಯಾಂಡಿ ತತ್ತ್ವದ ಪ್ರಕಾರ, ಒಬ್ಬ ವ್ಯಕ್ತಿಯು ಆ ಸಮುದಾಯಕ್ಕೆ ಸೇರಿರದಿದ್ದರೆ ಮತ್ತು ಆ ದೇವತೆಯ ಪೂಜೆಯನ್ನು ಮಾಡುತ್ತಿಲ್ಲವಾದರೆ, ಅವರಿಗೆ ಆ ಸಂಪ್ರದಾಯಗಳನ್ನು ಪ್ರಶ್ನಿಸುವ ಕಾನೂನಾತ್ಮಕ ಹಕ್ಕು ಇರಬಾರದು ಎಂದು ಸರಕಾರ ಹೇಳಿದೆ.
ಆ. ‘ಸಾಂವಿಧಾನಿಕ ನೈತಿಕತೆ ಪರಿಕಲ್ಪನೆಯ ಮೇಲೆ ಪ್ರಶ್ನೆ : ೨೦೧೮ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕೆಲವು ಮಹತ್ವಪೂರ್ಣ ಪ್ರಕರಣಗಳಲ್ಲಿ ‘ಸಾಂವಿಧಾನಿಕ ನೈತಿಕತೆ ಎಂಬ ತತ್ತ್ವದ ಆಧಾರದಲ್ಲಿ ಸಾಂಪ್ರದಾಯಿಕ ಪದ್ಧತಿಗಳಿಗೆ ಸವಾಲು ಹಾಕಿತು, ಇದರಲ್ಲಿ ಶಬರಿಮಲೈ ಪ್ರಕರಣವೂ ಸೇರಿತ್ತು. ‘ನೈತಿಕತೆ ಎಂಬ ಪದವನ್ನು ಸಂವಿಧಾನದಲ್ಲಿ ಪ್ರಮುಖವಾಗಿ ‘ಸಾಮಾಜಿಕ ಅಥವಾ ಸಾರ್ವಜನಿಕ ನೈತಿಕತೆ ಎಂಬ ಅರ್ಥದಲ್ಲಿ ಬಳಸಲಾಗಿದೆ ಎಂದು ಕೇಂದ್ರ ಸರಕಾರವು ೯ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ಮುಂದೆ ವಾದಿಸಿದೆ. ‘ಸಾಂವಿಧಾನಿಕ ನೈತಿಕತೆ ಎಂಬುದು ನ್ಯಾಯಾಲಯವು ರೂಪಿಸಿದ ಅಸ್ಪಷ್ಟ ಕಲ್ಪನೆಯಾಗಿದ್ದು, ಇದನ್ನು ಬಳಸುವುದರಿಂದ ಭಾರತೀಯ ಸಾಮಾಜಿಕ ಮೌಲ್ಯಗಳನ್ನು ಕಡೆಗಣಿಸಿದಂತಾಗುತ್ತದೆ. ವ್ಯಭಿಚಾರವನ್ನು ಅಪರಾಧಮುಕ್ತಗೊಳಿಸಿದ ೨೦೧೮ ರ ತೀರ್ಪನ್ನು ಉಲ್ಲೇಖಿಸಿದ ಸರಕಾರವು ಈ ಪರಿಕಲ್ಪನೆಯ ಆಧಾರದಲ್ಲಿ ನ್ಯಾಯಾಲಯವು ಭಾರತೀಯ ಸಮಾಜವು ಮಾನ್ಯ ಮಾಡಿದ ಮೌಲ್ಯಗಳಿಗೆ ದ್ವಿತೀಯ ಸ್ಥಾನ ನೀಡಿದೆ ಎಂದು ಹೇಳಿದೆ.
ಇ. ‘ಆವಶ್ಯಕ ಧಾರ್ಮಿಕ ರೂಢಿಗಳ (ಸಂಪ್ರದಾಯಗಳ) ಸತ್ತ್ವಪರೀಕ್ಷೆಯನ್ನು ರದ್ದುಗೊಳಿಸಲು ಬೇಡಿಕೆ : ೧೯೫೪ ರ ಶಿರೂರು ಮಠದ ಪ್ರಕರಣದ ನಂತರ, ಯಾವುದೇ ಒಂದು ಆಚರಣೆಯು ಆ ಧರ್ಮದ ‘ಆವಶ್ಯಕ ಭಾಗವಾಗಿದೆಯೇ ? ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ನ್ಯಾಯಾಲಯಗಳು ಧಾರ್ಮಿಕ ವಿವಾದಗಳನ್ನು ಬಗೆಹರಿಸುತ್ತಾ ಬಂದಿವೆ. ಆದರೆ ಕೇಂದ್ರ ಸರಕಾರವು ಈ ಪರೀಕ್ಷೆಯನ್ನು ಪೂರ್ಣ ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ. ಸರಕಾರದ ಅಭಿಪ್ರಾಯದಂತೆ ಈ ಸಿದ್ಧಾಂತವು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿಲ್ಲ ಮತ್ತು ಅದನ್ನು ನ್ಯಾಯಾಧೀಶರೇ ರೂಪಿಸಿದ್ದಾರೆ. ಜಾತ್ಯತೀತ ನ್ಯಾಯಾಧೀಶರು ಧರ್ಮಶಾಸ್ತ್ರದ ಅಧ್ಯಯನ ಅಥವಾ ಸಾಂಪ್ರದಾಯಿಕ ಜ್ಞಾನವನ್ನು ಹೊಂದಿರುವುದಿಲ್ಲ. ಹಾಗಾಗಿ ಅವರು ಧರ್ಮದ ಯಾವ ಪದ್ಧತಿಯು ಆವಶ್ಯಕ ಎಂಬುದನ್ನು ನಿರ್ಧರಿಸುವುದು ಸರಿಯಲ್ಲ.
ಈ. ಹಿಂದೂ ಧರ್ಮದ ವೈವಿಧ್ಯದ ಮೇಲೆ ಪರಿಣಾಮ : ಕೇಂದ್ರ ಸರಕಾರದ ಪ್ರಕಾರ, ‘ಆವಶ್ಯಕ ಧಾರ್ಮಿಕ ರೂಢಿಪರಂಪರೆಗಳು ಈ ಸತ್ತ್ವಪರೀಕ್ಷೆಯು ವಾಸ್ತವವಾಗಿ ಹಿಂದೂ ಧರ್ಮಕ್ಕೇ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ; ಏಕೆಂದರೆ ಕೆಲವು ಧರ್ಮಗಳಂತೆ ಹಿಂದೂ ಧರ್ಮದಲ್ಲಿ ಏಕೀಕೃತ ಗ್ರಂಥ, ಕೇಂದ್ರೀಕೃತ ಸಂಸ್ಥೆ ಅಥವಾ ನಿರ್ದಿಷ್ಟ ಧಾರ್ಮಿಕ ಅಧಿಕಾರ ವ್ಯವಸ್ಥೆ ಇಲ್ಲ. ಇದು ಅನೇಕ ಸ್ಥಳೀಯ ಸಂಪ್ರದಾಯಗಳು, ದೇವತೆಗಳು, ಪಂಥಗಳು ಮತ್ತು ಗುರು-ಶಿಷ್ಯ ಪರಂಪರೆಯನ್ನು ಒಳಗೊಂಡಿದೆ. ಆದ್ದರಿಂದ ಏಕರೂಪದ ಮಾನದಂಡಗಳ ಮೇಲೆ ಹಿಂದೂ ಧರ್ಮದ ಮೌಲ್ಯಮಾಪನವು ಅದರ ವೈವಿಧ್ಯವನ್ನು ನಿರ್ಲಕ್ಷಿಸಿದಂತಾಗುತ್ತದೆ.
ಉ. ದೇವತೆಯ ಅದ್ವಿತೀಯ ಸ್ವರೂಪಕ್ಕೆ ಗೌರವ : ಶಬರಿಮಲೈ ದೇವಸ್ಥಾನದ ಭಗವಾನ ಅಯ್ಯಪ್ಪ ಇವರನ್ನು ‘ನೈಷ್ಠಿಕ ಬ್ರಹ್ಮಚಾರಿ ಎಂದು ನಂಬಲಾಗುತ್ತದೆ. ಭಾರತೀಯ ಕಾನೂನಿನ ಪ್ರಕಾರ ಹಿಂದೂ ದೇವತೆಯು ಒಂದು ‘ಜ್ಯೂರಿಸ್ಟಿಕ್ ಪರ್ಸನ್, ಅಂದರೆ ‘ಕಾನೂನಾತ್ಮಕ ವ್ಯಕ್ತಿ ಎಂದು ನಂಬಲಾಗಿದೆ. ಆದ್ದರಿಂದ ದೇವತೆಯ ವಿಶಿಷ್ಟ ಸ್ವರೂಪವನ್ನು ಗೌರವಿಸುವುದು ಆವಶ್ಯಕವಾಗಿದೆ. ಕೇಂದ್ರ ಸರಕಾರವು ಎಂತಹ ಯುಕ್ತಿವಾದವನ್ನು ಮಂಡಿಸಿದೆ ಎಂದರೆ, ‘ಒಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆಯ ಬಗ್ಗೆ ಹೇಗೆ ನ್ಯಾಯಾಲಯವು ಪ್ರಶ್ನೆಗಳನ್ನು ಎತ್ತುವುದಿಲ್ಲವೋ, ಹಾಗೆಯೇ ದೇವತೆಗಳ ಸ್ವರೂಪವನ್ನೂ ‘ಜಾತ್ಯತೀತ ತರ್ಕವನ್ನು ಅನ್ವಯಿಸಿ ಬದಲಾಯಿಸಲು ಸಾಧ್ಯವಿಲ್ಲ.
ಊ. ಅನುಚ್ಛೇದ ೨೫ ರ ವ್ಯಾಖ್ಯೆ : ಸಂವಿಧಾನದ ೨೫ ನೇ ಅನುಚ್ಛೇದವು ಪ್ರತಿಯೊಬ್ಬರಿಗೂ ಧರ್ಮಪಾಲನೆಯ ಸ್ವಾತಂತ್ರ್ಯ ನೀಡುತ್ತದೆ. ಆದರೆ ಕೇಂದ್ರ ಸರಕಾರದ ಅಭಿಪ್ರಾಯದಂತೆ ಈ ಅನುಚ್ಛೇದ ‘ಧರ್ಮಗಳ ನಡುವಿನ ಸಮಾನತೆಯನ್ನು (inter-faith equality) ಖಚಿತಪಡಿಸಿಕೊಳ್ಳಲು ಇದೆಯೇ ಹೊರತು, ಯಾವುದಾದರೊಂದು ಧರ್ಮದ ಆಂತರಿಕ ನಿಯಮಗಳಲ್ಲಿ ಬದಲಾವಣೆ ತರಲು ಅಲ್ಲ. ಆದ್ದರಿಂದ ಧರ್ಮದ ಅಂತರ್ಗತ ಪರಂಪರೆಗಳಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಬಾರದು.
ಎ. ವೈಯಕ್ತಿಕ ಹಕ್ಕು ಮತ್ತು ಸಾಮೂಹಿಕ ಶ್ರದ್ಧೆ ಇವುಗಳ ನಡುವಿನ ಸಮತೋಲನ : ಕೆಲವೊಮ್ಮೆ ಯಾವುದಾದರೊಬ್ಬ ವ್ಯಕ್ತಿಯ ಮೂಲಭೂತ ಅಧಿಕಾರ ಮತ್ತು ಲಕ್ಷಾಂತರ ಭಕ್ತರ ಸಾಮೂಹಿಕ ಶ್ರದ್ಧೆಯ ನಡುವೆ ಸಂಘರ್ಷ ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಆವಶ್ಯಕವಾಗಿದೆ ಎಂದು ಕೇಂದ್ರ ಸರಕಾರವು ಹೇಳಿದೆ. ‘ಡಾಕ್ಟ್ರಿನ್ ಆಫ್ ಆಪ್ಟಿಮೈಸೇಶನ್ (Doctrine of Optimization) ಯಾವುದೇ ವಿಷಯವನ್ನು ಅತ್ಯುತ್ತಮವಾಗಿ ಮಾಡಲು ಅಥವಾ ಅತ್ಯುತ್ತಮ ರೀತಿಯಲ್ಲಿ ಮಾಡಲು ಕೈಗೊಳ್ಳುವ ಕ್ರಮಗಳು ಎಂಬ ತತ್ತ್ವವನ್ನು ಉಲ್ಲೇಖಿಸುತ್ತಾ ಸರಕಾರವು, ‘ಒಬ್ಬ ವ್ಯಕ್ತಿಯ ಹಕ್ಕನ್ನು ಸಂಪೂರ್ಣವಾಗಿ ಜಾರಿಗೆ ತರುವಾಗ ಇಡೀ ಸಮುದಾಯದ ಶ್ರದ್ಧೆಯನ್ನು ನಾಶಪಡಿಸಬಾರದು, ಎಂದಿದೆ.
ಏ. ಧಾರ್ಮಿಕ ಸುಧಾರಣೆ – ವಿಧಿಮಂಡಲದ ಅಧಿಕಾರ : ಕೇಂದ್ರ ಸರಕಾರವು ಹೀಗೂ ಹೇಳಿದೆ, ಧಾರ್ಮಿಕ ಸಂಸ್ಥೆಗಳಲ್ಲಿ ಸುಧಾರಣೆ ತರುವ ಅಧಿಕಾರವನ್ನು ಸಂವಿಧಾನವು ವಿಧಿಮಂಡಲಕ್ಕೆ ನೀಡಿದೆ. ಅನುಚ್ಛೇದ ೨೫(೨)(ಬ) ಅಂತರ್ಗತ ಸಾಮಾಜಿಕ ಸುಧಾರಣೆಗಳನ್ನು ಮಾಡುವ ಅಧಿಕಾರ ರಾಜ್ಯ ವಿಧಿಮಂಡಳಕ್ಕಿದೆ. ಆದ್ದರಿಂದ ನ್ಯಾಯಾಲಯವು ತಾನಾಗಿ ಧರ್ಮದಲ್ಲಿ ಸುಧಾರಣೆಗಳನ್ನು ಮಾಡುವುದು ಸರಿಯಲ್ಲ.
ಐ. ದೇವಸ್ಥಾನ ಪ್ರವೇಶ ಕಾನೂನುಗಳ ಮೂಲ ಉದ್ದೇಶ : ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದ ಕಾನೂನುಗಳನ್ನು ಮುಖ್ಯವಾಗಿ ಜಾತಿಭೇದಭಾವ ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ರೂಪಿಸಲಾಗಿತ್ತು. ‘ಸಂವಿಧಾನ ಸಭೆಯ ಚರ್ಚೆ ಮತ್ತು ಮಹಾಡ್, ಹಾಗೆಯೇ ಗುರುವಾಯೂರ ಸತ್ಯಾಗ್ರಹದಂತಹ ಐತಿಹಾಸಿಕ ಚಳುವಳಿಗಳನ್ನು ಉಲ್ಲೇಖಿಸುತ್ತಾ ಕೇಂದ್ರವು ಈ ನಿಬಂಧನೆಗಳ ಉದ್ದೇಶ ‘ಲಿಂಗ ಸಮಾನತೆಯನ್ನು ಜಾರಿಗೆ ತರುವುದಾಗಿರಲಿಲ್ಲ, ಎಂದು ಹೇಳಿದೆ.
ಒ. ಪ್ರಾಮಾಣಿಕತೆಯ ಸತ್ತ್ವಪರೀಕ್ಷೆ (Sincerity Test) : ಒಂದು ವೇಳೆ ‘ಆವಶ್ಯಕ ಧಾರ್ಮಿಕ ರೂಢಿಗಳು ಎಂಬ ಸತ್ತ್ವ್ವಪರೀಕ್ಷೆಯು ರದ್ದಾದರೆ, ಧಾರ್ಮಿಕ ವಿವಾದಗಳನ್ನು ಬಗೆಹರಿಸಲು ಹೊಸ ಪದ್ಧತಿಯು ಆವಶ್ಯಕವಾಗಿರುತ್ತದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಉದಾಹರಣೆಗಳನ್ನು ಉಲ್ಲೇಖಿಸಿರುವ ಕೇಂದ್ರ ಸರಕಾರವು, ನ್ಯಾಯಾಲಯಗಳು ಕೇವಲ ಯಾವುದೇ ಒಂದು ಧಾರ್ಮಿಕ ಪದ್ಧತಿಯನ್ನು ಆ ಸಮುದಾಯವು ಪ್ರಾಮಾಣಿಕವಾಗಿ ನಂಬುತ್ತದೆಯೇ ಎಂಬುದನ್ನು ಮಾತ್ರ ಪರಿಶೀಲಿಸಬೇಕು ಎಂದು ಸೂಚಿಸಿದೆ. ಒಂದು ವೇಳೆ ಆ ಆಚರಣೆಯನ್ನು ಶ್ರದ್ಧೆಯಿಂದ ಪಾಲಿಸಲಾಗುತ್ತಿದ್ದರೆ, ರಾಜ್ಯ ಮತ್ತು ನ್ಯಾಯಾಲಯಗಳು ಆ ಸಮುದಾಯಕ್ಕೆ ತಮ್ಮ ಧಾರ್ಮಿಕ ವಿಷಯಗಳನ್ನು ತಾವೇ ನಿರ್ವಹಿಸಿಕೊಳ್ಳಲು ಮುಕ್ತ ಅವಕಾಶ ನೀಡಬೇಕು.
– ಪಾರ್ಥ ಕಪೊಲೆ, ದೆಹಲಿ (೮.೪.೨೦೨೬)
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….
ಸ್ಥೂಲ ಶರೀರ ಮತ್ತು ಸೂಕ್ಷ್ಮ ಮನಸ್ಸಿನ ನಿಯಂತ್ರಣಕ್ಕಾಗಿ ಪ್ರಾಣಾಯಾಮದ ಮಹತ್ವ !