ಸಿಕ್ಕಿಂನಲ್ಲಿ ಮೇಘ ಸ್ಫೋಟ : ತಿಸ್ತ ನದಿಯ ನೆರೆಯಿಂದ ಹಾಹಾಕಾರ !

  • ೨೩ ಸೈನಿಕರು ನಾಪತ್ತೆ, ೩ ಜನರ ಮೃತದೇಹ ಪತ್ತೆ !

  • ಭಾರತೀಯ ಸೈನಿಕರ ನೆಲೆ ಧ್ವಂಸ, ಸೈನ್ಯದ ೪೧ ವಾಹನ ಮುಳುಗಡೆ !

ಗಂಗಟೊಕ (ಸಿಕ್ಕಿಂ) – ಸಿಕ್ಕಿಂನಲ್ಲಿ ಅಕ್ಟೋಬರ್ ೪ ರ ರಾತ್ರಿ ಅನಿರೀಕ್ಷಿತವಾಗಿ ಬಂದಿರುವ ನೆರೆಯಿಂದ ಹಾಹಾಕಾರ ಉಂಟಾಗಿದೆ. ಉತ್ತರ ಸಿಕ್ಕಿಂನಲ್ಲಿ ಲ್ಹೋನಾಕ್ ಕೆರೆಯ ಮೇಲೆ ಮೇಘ ಸ್ಫೋಟ ಆಗಿರುವುದರಿಂದ ಲಾಚೇನ ಕಣಿವೆಯಲ್ಲಿ ತಿಸ್ತ ನದಿಯ ನೀರಿನ ಮಟ್ಟ ೧೫ – ೨೦ ಅಡಿಯಷ್ಟು ಹೆಚ್ಚಾಗಿದೆ. ಈ ನೆರೆಯಿಂದ ಭಾರತೀಯ ಸೈನ್ಯದ ೨೩ ಸೈನಿಕರು ನಾಪತ್ತೆಯಾಗಿದ್ದಾರೆ. ರಕ್ಷಣಾ ಇಲಾಖೆಯಿಂದ ನೀಡಿರುವ ಮಾಹಿತಿಯ ಪ್ರಕಾರ ನದಿಗೆ ತಾಗಿರುವ ಪರಿಸರದಲ್ಲಿ ಸೈನ್ಯದ ನೆಲೆ ಇರುವುದರಿಂದ ಈ ನೆರೆಯ ಅಬ್ಬರದಲ್ಲಿ ಕೊಚ್ಚಿ ಹೋಗಿವೆ.

ಅನಿರೀಕ್ಷಿತವಾಗಿ ನೀರಿನ ಮಟ್ಟ ಹೆಚ್ಚಿರುವುದರಿಂದ ಚುಂಗಥಾಂಗ ಆಣೆಕಟ್ಟಿನಿಂದ ನೀರು ಬಿಡಲಾಗಿದೆ. ಇದರ ನಂತರ ಸಂಪೂರ್ಣ ಪ್ರದೇಶ ಮುಳುಗುತ್ತಿದೆ. ಅಲ್ಲಿಯ ಸಿಂಗತಾಮದ ಹತ್ತಿರ ಇರುವ ಬಾರಡಾಂಗ ಇಲ್ಲಿ ನಿಂತಿರುವ ಸೈನ್ಯದ ೪೧ ವಾಹನಗಳು ಮುಳುಗಿವೆ. ನದಿಯ ನೀರು ಅನೇಕ ಮನೆಗಳಿಗೆ ನುಗ್ಗಿದೆ. ಜನರು ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಿರುವುದಾಗಿ ಹೇಳಲಾಗುತ್ತಿದೆ. ಅನಿರೀಕ್ಷಿತವಾಗಿ ಮೇಘ ಸ್ಫೋಟದಿಂದ ನದಿಯ ಮೇಲೆ ಕಟ್ಟಿರುವ ಸೇತುವೆ ಮತ್ತು ರಸ್ತೆಗಳು ಕೂಡ ಹಾಳಾಗಿವೆ. ಈ ಘಟನೆಯ ನಂತರ ನಾಪತ್ತೆ ಆಗಿರುವ ಸೈನಿಕರ ಶೋಧಕ್ಕಾಗಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ೩ ಜನರ ಶವ ದೊರೆತಿರುವುದಾಗಿ ಹೇಳಲಾಗಿದೆ. ‘ಗಡಿ ಮಾರ್ಗ ಸಂಘಟನೆ’ಯ (‘ಬಿ.ಆರ್’ಓ.’ನ) ಕಾರ್ಮಿಕರು ಹಾಗೂ ರಾಷ್ಟ್ರೀಯ ಆಪತ್ತು ನಿವಾರಣ ತಂಡದ ಸೈನಿಕರು ಕೂಡ ರಕ್ಷಣಾಕಾರ್ಯ ಮಾಡುತ್ತಿದ್ದಾರೆ. ಸಿಕ್ಕಿಂನ ಮುಖ್ಯಮಂತ್ರಿ ಪ್ರೇಮಸಿಂಹ ತಮಾಂಗ ಇವರು ಸಿಂಗತಾಮದಲ್ಲಿ ಬಂದಿರುವ ಅನಿರೀಕ್ಷಿತ ನೆರೆಯ ಮತ್ತು ಸಹಾಯ ಕಾರ್ಯದ ವರದಿ ಪಡೆದರು.