ಚೀನಾ ಭಾರತದ ಒಂದಿಂಚೂ ಭೂಮಿಯನ್ನು ಕಬಳಿಸಿಲ್ಲ ! – ಲಡಾಖ್ ಉಪ ರಾಜ್ಯಪಾಲ ಹಾಗೂ ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ

ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರತ್ಯುತ್ತರ

ಲಡಾಖ್ – ಚೀನಾ ಭಾರತದ ಒಂದಿಂಚೂ ಭೂಮಿಯನ್ನೂ ಕಬಳಿಸಿಲ್ಲ ಎಂದು ಲಡಾಖ್ ನ ಉಪ ರಾಜ್ಯಪಾಲ ಮತ್ತು ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ ಇವರು `ಚೀನಾ ಲಡಾಖ್ ನ ದೊಡ್ಡ ಪ್ರದೇಶವನ್ನು ಕಬಳಿಸಿದೆ’ ಎಂದ ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರಿಸಿ, ಭಾರತದ ನೆಲವನ್ನು ಆಕ್ರಮಿಸಲು ಯಾರಾದರೂ ಧೈರ್ಯ ಮಾಡಿದರೆ, ಅದಕ್ಕೆ ನಮ್ಮ ಸೈನ್ಯವು ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ ಎಂದು ಹೇಳಿದರು.

ಉಪ ರಾಜ್ಯಪಾಲ ಮಿಶ್ರಾ ಇವರು ಮಾತನ್ನು ಮುಂದುವರಿಸಿ, ನಾನು ಯಾರ ಹೇಳಿಕೆಗೂ ಪ್ರತಿಕ್ರಿಯಿಸಲು ಬಯಸುವುದಿಲ್ಲ; ಆದರೆ ನಾನು ವಸ್ತುಸ್ಥಿತಿ ಏನಿದೆಯೋ ಅದೇ ವಿಷಯವನ್ನು ಮಾತನಾಡುತ್ತಿದ್ದೇನೆ. ನಾನು ಪ್ರತ್ಯಕ್ಷವಾಗಿ ನಮ್ಮ ಗಡಿಯನ್ನು ಪರಿಶೀಲಿಸಿದ್ದೇನೆ ಮತ್ತು ನಮ್ಮ ಒಂದಿಂಚೂ ಭೂಮಿಯನ್ನು ಚೀನಾ ಕಬಳಿಸಿಲ್ಲ ಎಂದು ಹೇಳಬಯಸುತ್ತೇನೆ. 1962 ರಲ್ಲಿ ನಡೆದಿರುವ ಬಗ್ಗೆ ಈಗ ಮಾತನಾಡುವುದು ಅರ್ಥಹೀನವಾಗಿದೆ; ಆದರೆ ಈಗ ನಮ್ಮ ಗಡಿಯ ಕೊನೆಯ ಇಂಚಿನವರೆಗಿನ ಭೂಭಾಗವೂ ನಮ್ಮ ವಶದಲ್ಲಿಯೇ ಇದೆಯೆಂದು ಅವರು ಸ್ಪಷ್ಟಪಡಿಸಿದರು.