ಗುರುಗಳ ಮಾರ್ಗದರ್ಶನದಂತೆ ಸಾಧನೆ ಮಾಡಿದರೆ ಶೀಘ್ರ ಪ್ರಗತಿಯಾಗುವುದು – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.

ಸನಾತನ ಸಂಸ್ಥೆ ವತಿಯಿಂದ ಮಂಗಳೂರಿನಲ್ಲಿ ಹಿಂದುತ್ವನಿಷ್ಠ ಮತ್ತು ಜಿಜ್ಞಾಸು ಉದ್ಯಮಿಗಳಿಗಾಗಿ ೨ ದಿನಗಳ ಸಾಧನಾ ಶಿಬಿರ !

(ಎಡದಿಂದ) ಶ್ರೀ. ಪ್ರಕಾಶ ರಾಯ್ಕರ್, ದೀಪಪ್ರಜ್ವಲನೆ ಮಾಡುತ್ತಿರುವ ಪೂ. ರಮಾನಂದ ಗೌಡ ಮತ್ತು ಶ್ರೀ. ಎಮ್‌.ಜೆ. ಶೆಟ್ಟಿ

ಮಂಗಳೂರು : ತಾವೆಲ್ಲರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ಉದ್ಯಮಗಳನ್ನು ಮಾಡುತ್ತಿದ್ದೀರಿ, ಅದರೊಂದಿಗೆ ಸಾಧನೆಯನ್ನೂ ಮಾಡುತ್ತಿದ್ದೀರಿ. ಇದು ತುಂಬಾ ಮಹತ್ವದ್ದಾಗಿದೆ. ನಮಗೆ ಮನುಷ್ಯ ಜನ್ಮ ೨ ಉದ್ದೇಶದಿಂದ ಲಭಿಸಿರುತ್ತದೆ. ಅದು ಪ್ರಾರಬ್ಧ ಕರ್ಮವನ್ನು ಭೋಗಿಸಿ ತೀರಿಸುವುದು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ಭಗವಂತನನ್ನು ಪ್ರಾಪ್ತಿ ಮಾಡಿಕೊಳ್ಳುವುದಾಗಿರುತ್ತದೆ. ಮನುಷ್ಯನು ಮಾಡಿದ ಒಳ್ಳೆಯ ಕರ್ಮಗಳಿಂದ ಅವನಿಗೆ ಸಾಧನೆ ಮಾಡಲು ಅವಕಾಶ ಸಿಗುತ್ತದೆ. ಸಾಧನೆಯನ್ನು ಮಾಡಿ ನಮಗೆ ಭಗವಂತನನ್ನೇ ಪ್ರಾಪ್ತಿ ಮಾಡಿಕೊಳ್ಳಬೇಕಿದೆ. ಅಂತಹ ಭಗವಂತನ ಪ್ರಾಪ್ತಿ ಮಾಡಿಕೊಳ್ಳಲು ಗುರುಗಳ ಮಾರ್ಗದರ್ಶನದ ಅವಶ್ಯಕತೆಯಿರುತ್ತದೆ, ಆದ್ದರಿಂದ ಗುರುಗಳ ಮಾರ್ಗದರ್ಶನವನ್ನು ಪಡೆದು ಸಾಧನೆಯನ್ನು ಯೋಗ್ಯ ರೀತಿಯಲ್ಲಿ ಮಾಡಿ ನಮ್ಮ ಜನ್ಮದ ಉದ್ಧಾರ ಮಾಡಿಕೊಳ್ಳೋಣ, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ಸನಾತನ ಸಂಸ್ಥೆಯ ವತಿಯಿಂದ ಮಂಗಳೂರಿನಲ್ಲಿ ನಡೆದ ಹಿಂದುತ್ವನಿಷ್ಠ ಹಾಗೂ ಜಿಜ್ಞಾಸು ಉದ್ಯಮಿಗಳಿಗಾಗಿ ೨ ದಿನಗಳ ಸಾಧನಾ ಶಿಬಿರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.

ಈ ಶಿಬಿರದಲ್ಲಿ ಬೆಂಗಳೂರು, ವಿಜಯಪುರ, ಧಾರವಾಡ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಉದ್ಯಮಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಪೂ. ರಮಾನಂದ ಗೌಡ, ಮಂಗಳೂರು-ಬೈಕಂಪಾಡಿ ಇಂಡಸ್ಟ್ರಿಯಲ್‌ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರಾದ ಶ್ರೀ. ಎಮ್‌.ಜೆ. ಶೆಟ್ಟಿ ಹಾಗೂ ಬೆಂಗಳೂರಿನ ‘ಪೀಣ್ಯಾ ಇಂಡಸ್ಟ್ರಿಯಲ್‌ ಅಸೋಸಿಯೇಶನ್‌’ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ. ಪ್ರಕಾಶ ರಾಯ್ಕರ್‌ ಇವರು ದೀಪಪ್ರಜ್ವಲನೆ ಮಾಡಿದರು.

ಅನುಭವ ಕಥನ

೧. ಆಧ್ಯಾತ್ಮಿಕ ಸಾಧನೆ ಮಾಡುತ್ತಿರುವ ಶೇ.೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಜಯರಾಮ್ ಇವರು ಮಾತನಾಡಿ, ನಾನು ಸಂಸ್ಥೆಯೊಂದಿಗೆ ತುಂಬಾ ಮೊದಲಿನಿಂದಲೂ ಪರಿಚಯದಲ್ಲಿದ್ದೆ. ಒಮ್ಮೆ ರಾಮನಾಥಿ ಆಶ್ರಮದಲ್ಲ್ಕಿ ಸಾಧನಾ ಶಿಬಿರದಲ್ಲಿ ಸಹಭಾಗಿಯಾದ ನಂತರ ನಾನು ಅಧ್ಯಾತ್ಮದಲ್ಲಿ ಪ್ರಗತಿ ಮಾಡಿಕೊಂಡು ೬೧ ಶೇ. ಮಾಡಿಕೊಳ್ಳಬೇಕು ಅನಿಸಿತು. ಮುಂದೆ ಪೂ. ರಮಾನಂದ ಅಣ್ಣನವರ ಭೇಟಿಯಾಯಿತು. ಅವರು ನನಗೆ ಹೇಗೆ ಪ್ರಯತ್ನ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದರು. ಅವರು ಹೇಳಿದಂತೆ ನನ್ನ ವ್ಯವಹಾರದೊಂದಿಗೆ ವ್ಯಷ್ಟಿ ಮತ್ತು ಸಮಷ್ಠಿ ಸಾಧನೆಯ ನಿಯೋಜನೆ ಮಾಡಿಕೊಂಡು ಪ್ರಯತ್ನ ಮಾಡಿದೆ. ಅನಂತರ ನನಗೆ ಸಾಧನೆಗಾಗಿ ಹೆಚ್ಚು ಸಮಯ ನೀಡಬೇಕು ಅನಿಸಿತು. ಅದಕ್ಕಾಗಿ ನಾನು ನನ್ನ ವ್ಯವಹಾರವನ್ನು ಮನೆಯವರೊಂದಿಗೆ ಹಂಚಿಕೊಂಡು ಈಗ ವಾರದಲ್ಲಿ ೩ ದಿನ ಸಾಧನೆ ಮತ್ತು ಸೇವೆಗಾಗಿಯೇ ಮೀಸಲಿಟ್ಟಿದ್ದೇನೆ. ಸಂತರು ಹೇಳಿದಂತೆಯೇ ಪ್ರಯತ್ನ ಮಾಡಿದಾಗ ೩ ತಿಂಗಳಿನಲ್ಲಿ ನನ್ನ ಪ್ರಗತಿಯೂ ಆಯಿತು. ಗುರುಗಳ ಕೃಪೆಯಿಂದ ಈಗ ನನಗೆ ಸಾಧನೆಯಲ್ಲಿ ಆನಂದ ಸಿಗುತ್ತಿದೆ ಎಂದರು.

೨. ಉದ್ಯಮಿ ಶ್ರೀ. ಅರುಣ ಗೌಡರ್ ಇವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಸನಾತನ ಸಂಸ್ಥೆಯ ‘ಗುರುಕೃಪಾಯೋಗಾನುಸಾರ ಸಾಧನೆ ಗ್ರಂಥ ನನಗೆ ಸಾಧನೆಯನ್ನು ಮಾಡಲು ಪ್ರೇರಣೆಯನ್ನು ನೀಡಿತು ಮತ್ತು ಮುಂದೆ ಪೂ. ರಮಾನಂದ ಅಣ್ಣನವರ ಮಾರ್ಗದರ್ಶನ ಪಡೆದು ಸಾಧನೆಯನ್ನು ಆರಂಭಿಸಿದೆ. ಈಗ ನಾನು ನನ್ನ ಮುಂದಿನ ಜೀವನದಲ್ಲಿ ಸಾಧನೆಯನ್ನೇ ಮಾಡಬೇಕು ಮತ್ತು ಧರ್ಮಕಾರ್ಯದಲ್ಲಿ ಜವಾಬ್ದಾರಿ ತೆಗೆದುಕೊಂಡು ಪ್ರಯತ್ನಿಸಬೇಕು ಎಂದು ನಿರ್ಧರಿಸಿದ್ದೇನೆ. ಅದಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ಹೋಗಿ ಉದ್ಯಮಿಗಳ ಭೇಟಿಯಾಗಿ ಅವರನ್ನೂ ಧರ್ಮಕಾರ್ಯದಲ್ಲಿ ಜೋಡಿಸಲು ಪ್ರಯತ್ನಿಸುತ್ತೇನೆ ಎಂದರು.

ಉದ್ಯಮಿಗಳು ವ್ಯಕ್ತಪಡಿಸಿದ ವೈಶಿಷ್ಟ್ಯಪೂರ್ಣ ಅಭಿಪ್ರಾಯಗಳು

೧. ಉದ್ಯಮಿ ಹಾಗೂ ಹಿಂದುತ್ವನಿಷ್ಠರಾದ ಶ್ರೀ. ಸಂತೋಷ ಕೆಂಚಾಂಬ ಇವರು ಅಭಿಪ್ರಾಯ ವ್ಯಕ್ತಪಡಿಸುತ್ತಾ ನನ್ನ ಜೀವನದಲ್ಲಿನ ಪ್ರಶ್ನೆಗಳಿಗೆ ಇಂದು ನನಗೆ ಉತ್ತರ ಸಿಗುತ್ತಿದೆ. ನನ್ನಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧನೆಯೇ ಮಾರ್ಗವಾಗಿದೆ ಎಂದು ಹೇಳಿ ಈ ಶಿಬಿರವನ್ನು ಇನ್ನೂ ೧ ದಿನ ಹೆಚ್ಚು ಮಾಡಿದ್ದರೆ ಇನ್ನೂ ಕಲಿಯಲು ಸಿಗುತ್ತಿತ್ತು ಎಂದು ಹೇಳಿದರು.

೨. ಉದ್ಯಮಿಗಳಾದ ಶ್ರೀ. ಸುರೇಶ ಗೌಡ ಇವರು ಮಾತನಾಡುತ್ತಾ, ‘ನನ್ನ ವೃತ್ತಿ ಜೀವನದಲ್ಲಿ ಕೆಲಸಗಾರರೊಂದಿಗೆ ಸಿಟ್ಟಿನಿಂದ ವರ್ತಿಸುತ್ತಿದ್ದೆ, ಇಲ್ಲಿ ಬಂದ ಮೇಲೆ ನನ್ನ ದೋಷಗಳ ಅರಿವಾಗಿ ಅದರಿಂದಾಗುವ ಹಾನಿಯ ಬಗ್ಗೆಯೂ ತಿಳಿಯಿತು. ಎಲ್ಲ ಸಾಧಕರು ಶಿಬಿರದಲ್ಲಿ ವಿಷಯ ಮಂಡನೆ ಮಾಡುವುದು ಕೇಳಿದಾಗ ತಾಯಿಯು ಸಿಹಿಯಾದ ತಿಂಡಿಯನ್ನು ಪ್ರೀತಿಯಿಂದ ಮಗುವಿಗೆ ತಿನ್ನಿಸಿದಂತಿತ್ತು ಎಂದು ಭಾವ ವ್ಯಕ್ತಪಡಿಸಿದರು.

೩. ವೈದ್ಯರಾದ ಡಾ. ರಮೇಶ್ ಇವರು ನಾನು ಅನೇಕ ಸಂಸ್ಥೆಗಳಲ್ಲಿ ಸಾಧನೆ ಮಾಡಲು ಪ್ರಯತ್ನ ಮಾಡಿದೆ, ಅಲ್ಲಿ ಕೆಲವು ಸೀಮಿತ ವಿಷಯಗಳನ್ನು ಮಾತ್ರ ಹೇಳಿಕೊಡಲಾಗುತ್ತದೆ. ಆದರೆ ಸನಾತನ ಸಂಸ್ಥೆಯು ಎಲ್ಲರ ಉದ್ಧಾರದ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ನಾನು ಸನಾತನ ಸಂಸ್ಥೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದರು.

೪. ಉದ್ಯಮಿ ಪ್ರಕಾಶ್ ರಾಯ್ಕರ್ ತಮ್ಮ ಅನಿಸಿಕೆಯನ್ನು ತಿಳಿಸುತ್ತಾ ಮೊದಲು ಸಾಧಕರು ನನಗೆ ಸಾಧನೆಯನ್ನು ಹೇಳಿದಾಗ ಈ ಆಧ್ಯಾತ್ಮಿಕ ಸಾಧನೆ ನನಗಲ್ಲ ಎಂದು ಅನಿಸುತ್ತಿತ್ತು, ನಾನು ನನ್ನ ವೃತ್ತಿಯ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದೆ. ಆದರೆ ಈ ೨ ದಿನಗಳ ಶಿಬಿರ ನನ್ನನ್ನು ಸಂಪೂರ್ಣವಾಗಿ ಬದಲು ಮಾಡಿದೆ. ಶಿಬಿರದ ಒಂದೊಂದು ವಿಷಯಗಳು ಎಷ್ಟು ಮಹತ್ವದ್ದಿತ್ತು ಎಂದರೆ ನನ್ನ ವ್ಯವಹಾರದ ಒಂದೇ ಒಂದು ಕರೆಯನ್ನು ಸ್ವೀಕರಿಸದೆ ಸಂಪೂರ್ಣ ವಿಷಯವನ್ನು ತಿಳಿದುಕೊಂಡಿದ್ದೇನೆ, ಈ ಶಿಬಿರದ ಮುಖಾಂತರ ನನ್ನ ಮುಂದಿನ ಸಮಯವನ್ನು ಅಧ್ಯಾತ್ಮದಲ್ಲಿ ಕಳೆಯಬೇಕೆಂದು ನಿಶ್ಚಯ ಮಾಡಿದ್ದೇನೆ ಎಂದರು.

೫. ಉದ್ಯಮಿ ಶ್ರೀ. ಜಯರಾಮ್ ಇವರು ತಮ್ಮ ಅನುಭವ ಹೇಳುತ್ತಾ ಸನಾತನದ ಆಶ್ರಮದಲ್ಲಿ ಸಾಧಕರು ತಮ್ಮ ತಪ್ಪುಗಳನ್ನು ಫಲಕದಲ್ಲಿ ಬರೆಯುವುದು ನೋಡಿ ಮನಸ್ಸಿಗೆ ತುಂಬಾ ಆಶ್ಚರ್ಯವಾಯಿತು, ಸಾಧಕರ ಪ್ರಯತ್ನ ನೋಡಿ ನನಗೂ ಅದರಂತೆ ಪ್ರಯತ್ನಿಸಬೇಕು ಎಂಬ ಪ್ರೇರಣೆ ದೊರೆತು ನಾನೂ ಆಶ್ರಮದಲ್ಲಿದ್ದಾಗ ಫಲಕದಲ್ಲಿ ತಪ್ಪುಗಳನ್ನು ಬರೆದೆ ಮತ್ತು ಆ ತಪ್ಪುಗಳಿಗೆ ಪ್ರಾಯಶ್ಚಿತ್ತವನ್ನೂ ತೆಗೆದುಕೊಂಡೆ ಎಂದರು.

೬. ಶಿಬಿರದ ಆಯೋಜನೆ ಸೇವೆಯಲ್ಲಿದ್ದ ಸಾಧಕರು ತಮ್ಮಿಂದಾದ ತಪ್ಪುಗಳನ್ನು ಹೇಳಿ ಕ್ಷಮೆಯಾಚನೆ ಮಾಡುವಾಗ ಶಿಬಿರಾರ್ಥಿಗಳೂ ಸ್ವಯಂಪ್ರೇರಣೆಯಿಂದ ಎಲ್ಲರೂ ಎದ್ದು ನಿಂತು ನಮ್ಮಿಂದಲೂ ತಪ್ಪಾಗಿದೆ, ಅದಕ್ಕಾಗಿ ಕ್ಷಮೆಯಾಚಿಸುತ್ತೇವೆ ಎಂದು ಸಾಮೂಹಿಕ ಕ್ಷಮಾಯಾಚನೆ ಮಾಡಿದರು.