ಒಡಿಶಾದ ಮಾವೋವಾದಿಗಳ ನೆಲೆಯಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ ವಶ !

ಭುವನೇಶ್ವರ (ಒಡಿಶಾ) – ಗಡಿ ಭದ್ರತಾ ಪಡೆಯ ಸೈನಿಕರು ರಾಜ್ಯದ ಮಲಕಾನಗಿರಿ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಕೈಮೇಲಾ ಪ್ರದೇಶದಲ್ಲಿ ಮಾವೋವಾದಿಗಳ ನೆಲೆವಿರುವ ಬಗ್ಗೆ ಗಡಿ ಭದ್ರತಾ ಪಡೆಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯನ್ನು ಆಧರಿಸಿ ಸೈನಿಕರು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಸೈನಿಕರು ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ರಾಕೆಟ್ ಲಾಂಚರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ರೀತಿಯ ಕಾರ್ಯಾಚರಣೆಯೊಂದರಲ್ಲಿ ಮಲಕಾನಗಿರಿಯ ಮಾರಿಗೆಟ್ಟಾ ಗ್ರಾಮದಲ್ಲಿ ಸೈನಿಕರು ಮಾವೋವಾದಿಗಳ ನೆಲೆಯನ್ನು ಧ್ವಂಸಗೊಳಿಸಿದ್ದರು. ಆಗಲೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಡಿಶಾ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ಅವರು ಮಾವೋವಾದಿ ಚಟುವಟಿಕೆಗಳನ್ನು ಎದುರಿಸಿದ ಮುಖ್ಯಮಂತ್ರಿ ನವೀನ ಪಟ್ನಾಯಕ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದರು.