2019 ರಿಂದ 2021 ರವರೆಗೆ ದೇಶದಲ್ಲಿ 13 ಲಕ್ಷಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆ !

ನವ ದೆಹಲಿ – ದೇಶದಲ್ಲಿ 2019 ರಿಂದ 2021 ರವರೆಗೆ 3 ವರ್ಷಗಳಲ್ಲಿ 13 ಲಕ್ಷ 13 ಸಾವಿರಗಿಂತಲೂ ಹೆಚ್ಚಿನ ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟ 10 ಲಕ್ಷದ 61 ಸಾವಿರದ 648 ಮಹಿಳೆಯರು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 2 ಲಕ್ಷ 51 ಸಾವಿರದ 430 ಹುಡುಗಿಯರು 2019 ರಿಂದ 2021 ರ ಕಾಲಾವಧಿಯಲ್ಲಿ ದೇಶಾದ್ಯಂತ ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಿದ ಅಂಕಿಅಂಶಗಳಲ್ಲಿ ಮಾಹಿತಿ ನೀಡಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಇಲಾಖೆ ಈ ಅಂಕಿಅಂಶಗಳನ್ನು ನೀಡಿದೆ. ದೇಶಾದ್ಯಂತ ಮಹಿಳೆಯರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ಸರಕಾರ ಮಾಹಿತಿ ನೀಡಿದೆ. ಇದರಲ್ಲಿ ಲೈಂಗಿಕ ಕಿರುಕುಳವನ್ನು ಪರಿಣಾಮಕಾರಿಯಾಗಿ ತಡೆಯಲು ‘ಕ್ರಿಮಿನಲ್ ಕಾನೂನುಗಳ (ತಿದ್ದುಪಡಿ) ಕಾಯಿದೆ 2013’ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಒಳಗೊಂಡಿದೆ ಎಂದು ಸರಕಾರ ಹೇಳಿದೆ.

1. ಹೆಚ್ಚಿನ ಹುಡುಗಿಯರು ಮತ್ತು ಮಹಿಳೆಯರು ಮಧ್ಯಪ್ರದೇಶದಿಂದ ನಂತರ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರದಿಂದ 1 ಲಕ್ಷದ 78 ಸಾವಿರದ 400 ಮಹಿಳೆಯರು ಮತ್ತು 13 ಸಾವಿರದ 33 ಹುಡುಗಿಯರು ನಾಪತ್ತೆಯಾಗಿದ್ದಾರೆ.

2. ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯಲ್ಲಿ 2019 ರಿಂದ 2021 ರ ಕಾಲಾವಧಿಯಲ್ಲಿ 61 ಸಾವಿರದ 54 ಮಹಿಳೆಯರು ಮತ್ತು 22 ಸಾವಿರದ 919 ಹುಡುಗಿಯರು ನಾಪತ್ತೆಯಾಗಿದ್ದಾರೆ.

ಸಂಪಾದಕೀಯ ನಿಲುವು

ಇದು ಪೊಲೀಸರಿಗೆ ಮತ್ತು ಎಲ್ಲಾ ಸರಕಾರಗಳಿಗೆ ನಾಚಿಕೆಗೇಡು!

ಇದರಲ್ಲಿ ಹಿಂದೂಗಳ ಸಂಖ್ಯೆ ಎಷ್ಟಿದೆ ? ಮತ್ತು ಅವರಲ್ಲಿ ಎಷ್ಟು ಮಂದಿಯನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಲು ಕರೆದೊಯ್ಯಲಾಯಿತು ? ಎನ್ನುವುದನ್ನು ಸರಕಾರ ಬಹಿರಂಗಪಡಿಸಬೇಕು !