ಖಾನಾವಳಿಯಲ್ಲಿ ಅಡುಗೆ ಮಾಡುವಾಗ ಹೆಂಡತಿಗೆ ಕೇಳದೆ ಗಂಡ ೨ ಟೊಮೇಟೊ ಬಳಸಿದ್ದರಿಂದ ಮಗಳೊಂದಿಗೆ ಮನೆ ತೊರೆದಳು !

ಟೊಮೇಟೊ ದುಬಾರಿಯಾಗಿದ್ದರಿಂದಾದ ಪರಿಣಾಮ !

ಶಹಡೋಲ (ಮಧ್ಯಪ್ರದೇಶ) – ಪ್ರಸ್ತುತ ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಟೊಮೆಟೊ ಕೆಜಿಗೆ ೧೩೦ ರೂಪಾಯಿ ದಾಟಿದೆ. ಇದರಿಂದಾಗಿ ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ಗದ್ದೆಯಲ್ಲಿ ಬೆಳೆದಿದ್ದ ಟೊಮೇಟೊವನ್ನು ಕಳ್ಳರು ಕದ್ದೊಯ್ದಿದ್ದರು. ಇದೀಗ ಇಲ್ಲಿನ ಒಂದು ದಂಪತಿಗಳ ನಡುವೆ ಟೊಮೇಟೊ ವಿಚಾರವಾಗಿ ಜಗಳ ನಡೆದು ಹೆಂಡತಿಯು ಮಗಳೊಂದಿಗೆ ಮನೆ ಬಿಟ್ಟು ಹೋದ ಘಟನೆ ನಡೆದಿದೆ.

ಇಲ್ಲಿನ ಸಂಜೀವ್ ಬರ್ಮನ್ ಅವರು ಖಾನಾವಳಿಯ ವ್ಯಾಪಾರವನ್ನು ಹೊಂದಿದ್ದಾರೆ. ಅಡುಗೆ ಮಾಡುವಾಗ ಸಂಜೀವ ಅವರು ಹೆಂಡತಿಯನ್ನು ಕೇಳದೆ ೨ ಟೊಮೇಟೊ ಬಳಸಿದ್ದಾರೆ. ಇದರಿಂದ ಗಂಡ-ಹೆಂಡತಿಯ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ಹೆಂಡತಿಯು ಮಗಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಸಂಜೀವ ಅವರು ತನ್ನ ಹೆಂಡತಿ ಮತ್ತು ಮಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ; ಆದರೆ ಅವರು ಎಲ್ಲಿಯೂ ಪತ್ತೆಯಾಗಲಿಲ್ಲ. ಇದಾದ ಬಳಿಕ ಸಂಜೀವ ಅವರು ಪೊಲೀಸ್ ಠಾಣೆಯಲ್ಲಿ ಇಬ್ಬರೂ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಮೂರು ದಿನ ಕಳೆದರೂ ಇನ್ನೂ ಅವರು ಸಿಗಲಿಲ್ಲ.