ಪಟಿಯಾಲ ಗುರುದ್ವಾರದಲ್ಲಿ ಮಹಿಳೆಯ ಹತ್ಯೆ : ಹಂತಕನ ಬಂಧನ

ಗುರುದ್ವಾರ ಪ್ರದೇಶದಲ್ಲಿ ಮಹಿಳೆ ಕುಡಿದು ಕುಳಿತಿದ್ದಳು ಎಂದು ಆರೋಪ

ಅಮೃತಸರ (ಪಂಜಾಬ್) – ಮೇ ೧೪ ರಂದು ಪಟಿಯಾಲಾ ಗುರುದ್ವಾರದಲ್ಲಿ ನಿರ್ಮಲಜಿತ್ ಸಿಂಗ್ ಎಂಬ ವ್ಯಕ್ತಿಯೊಬ್ಬ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ‘ಗುರುದ್ವಾರ ದುಖ್ ನಿವರನ್ ಸಾಹಿಬ್’ನ ಪ್ರದೇಶದ ಸರೋವರದ ಬಳಿ ಮಹಿಳೆ ಕುಳಿತು ಮದ್ಯ ಸೇವಿಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಕೊಲೆಯಾದ ಮಹಿಳೆಯ ಹೆಸರು ಪರ್ವಿಂದರ್ ಕೌರ್ ಆಗಿದೆ. ಈ ಗುಂಡಿನ ದಾಳಿಯಲ್ಲಿ ಒಬ್ಬ ಸೇವಕನೂ ಕೂಡ ಗಾಯಗೊಂಡಿದ್ದಾನೆ. ಹಂತಕ ಸಿಂಗ್ ಪಟಿಯಾಲ ನಿವಾಸಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.

೩೨ ರ ಹರೆಯದ ಮಹಿಳೆ ಮದ್ಯಪಾನ ಮಾಡುತ್ತಿದ್ದ ಕಾರಣ, ಗುರುದ್ವಾರದ ಸಿಬ್ಬಂದಿ ಕೂಡ ಆಕೆಯನ್ನು ತಡೆಯಲು ಯತ್ನಿಸಿದ್ದಾರೆ. ಅವರು ಮಹಿಳೆಯ ವಿಚಾರಣೆಗಾಗಿ ಗುರುದ್ವಾರದ ವ್ಯವಸ್ಥಾಪಕರ ಕೋಣೆಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದರು. ಆಗ ಮಹಿಳೆ ಮದ್ಯದ ಬಾಟಲಿಯಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ. ಅದೇ ವೇಳೆಗೆ ಅಲ್ಲಿಗೆ ಬಂದ ನಿರ್ಮಲಜಿತ್ ಸಿಂಗ್ ೫ ಗುಂಡುಗಳನ್ನು ಒಂದರ ಹಿಂದೆ ಒಂದರಂತೆ ಹಾರಿಸಿ ಮಹಿಳೆಯನ್ನು ಕೊಂದಿದ್ದಾನೆ.