ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ !

ರಾಜ್ಯದ ವಿಧಾನಸಭೆ ಚುನಾವಣೆ

ಬೆಂಗಳೂರು – ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಭಾಜಪ ಹೀನಾಯ ಸೋಲು ಕಂಡಿದೆ. ಮೇ 10 ರಂದು ಮತದಾನ ನಡೆದ ಬಳಿಕ ಮೇ 13 ರಂದು ಮತ ಎಣಿಕೆ ಕಾರ್ಯ ನಡೆಯಿತು. 224 ಸ್ಥಾನಗಳ ಪೈಕಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಭಾಜಪ 63 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ 55 ಸ್ಥಾನಗಳನ್ನು ಪಡೆದಿದ್ದರೆ, ಭಾಜಪ 39 ಸ್ಥಾನಗಳನ್ನು ಕಳೆದುಕೊಂಡಿದೆ. ಜನತಾ ದಳ (ಜಾತ್ಯತೀತ) ಪಕ್ಷವು ಮೂರನೇ ಸ್ಥಾನದಲ್ಲಿದ್ದು, ಕೇವಲ 22 ಸ್ಥಾನಗಳನ್ನು ಗೆದ್ದಿದೆ. ಬಹುಮತಕ್ಕೆ 113 ಸ್ಥಾನಗಳ ಅಗತ್ಯವಿದೆ. ಸಂಪೂರ್ಣ ಫಲಿತಾಂಶ ಮತ್ತು ವಿಜೇತ ಅಭ್ಯರ್ಥಿಗಳ ಘೋಷಣೆಯ ವಿಳಂಬದಿಂದಾಗಿ, ಈ ಅಂಕಿ ಅಂಶವು ಸ್ವಲ್ಪ ಮಟ್ಟಿಗೆ ಬದಲಾಗಬಹುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ?

(ಸೌಜನ್ಯ : Public TV)

ಕಾಂಗ್ರೆಸ್ ಬಹುಮತ ಪಡೆದಿದ್ದು, ಪಕ್ಷದಿಂದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದ್ದು, ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಮಾಡಲಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಮತ್ತೆ ತಿರುಗೇಟು ನೀಡೋಣ ! – ಮುಖ್ಯಮಂತ್ರಿ ಬೊಮ್ಮಾಯಿ

(ಸೌಜನ್ಯ : Asianet Suvarna News)

ಪ್ರಧಾನಿ ನರೇಂದ್ರ ಮೋದಿ ಮತ್ತು ಭಾಜಪ ಕಾರ್ಯಕರ್ತರು ಸಾಕಷ್ಟು ಪ್ರಯತ್ನ ಪಟ್ಟರೂ ಚುನಾವಣೆಯಲ್ಲಿ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಹಾಗೂ ಭಾಜಪ ಮುಖಂಡ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಫಲಿತಾಂಶದಿಂದ ಪಾಠ ಕಲಿತು ಲೋಕಸಭೆ ಚುನಾವಣೆಯಲ್ಲಿ ಖಂಡಿತಾ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದಾರೆ.