ರಾಜ್ಯದ ವಿಧಾನಸಭೆಯ ಚುನಾವಣೆ ಭಾಜಪದ ಘೋಷಣಾಪತ್ರ ಬಿಡುಗಡೆ

  • ಸಮಾನ ನಾಗರಿಕ ಕಾನೂನಿಗೆ ಸಮಿತಿಯ ಸ್ಥಾಪನೆ !

  • ೩ ಹಬ್ಬಗಳ ಸಂದರ್ಭದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಬೆಂಗಳೂರು – ರಾಜ್ಯದ ವಿಧಾನಸಭೆ ಚುನಾವಣೆಗೆ ಭಾಜಪವು ತನ್ನ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಧಿಕಾರಕ್ಕೆ ಬಂದರೆ ಸಮಾನ ನಾಗರಿಕ ಕಾನೂನು ನಿರ್ಮಿಸಲು ಸಮಿತಿ ಸ್ಥಾಪನೆ ಮಾಡುವುದರೊಂದಿಗೆ ಯುಗಾದಿ, ಗಣೇಶ ಚತುರ್ಥಿ, ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ನೀಡುವುದಾಗಿ ಭರವಸೆ ನೀಡಿದೆ. ಪ್ರಣಾಳಿಕೆ ಬಿಡುಗಡೆ ವೇಳೆ ಭಾಜಪದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇವರು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ಮತ್ತು ಮುಖಂಡರು ಉಪಸ್ಥಿತರಿದ್ದರು.

ಭಾಜಪವು ಇತರ ಆಶ್ವಾಸನೆಗಳನ್ನೂ ನೀಡಿದೆ. ಇದರಲ್ಲಿ ಪ್ರತಿಯೊಂದು ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‌ಗಳಲ್ಲಿ ‘ಅಟಲ್ ಆಹಾರ ಕೇಂದ್ರ’ ಆರಂಭಿಸಲಾಗುವುದು. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ೫ ಕೆಜಿ ಶ್ರೀ ಅಣ್ಣ ಪಡಿತರ ಕಿಟ್ ನೀಡಲಾಗುವುದು.

‘ಸರ್ವರಿಗೂ ಸೂರು ಯೋಜನೆ’ ಮೂಲಕ ಕಂದಾಯ ಇಲಾಖೆಯಿಂದ ರಾಜ್ಯಾದ್ಯಂತ ನಿರ್ಗತಿಕರಿಗೆ ೧೦ ಲಕ್ಷ ಮನೆಗಳನ್ನು ವಿತರಿಸಲಿದೆ. ರೈತರಿಗೆ ಬೀಜಗಳಿಗೆ ೧೦ ಸಾವಿರ ರೂಪಾಯಿ ನೀಡಲಿದೆ. ಅಲ್ಲದೆ, ೫ ಲಕ್ಷ ಸಾಲ ತೆಗೆದುಕೊಂಡರೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ ಎಂದು ಹೇಳಿದೆ.