ಛಿಂದವಾಡಾ (ಮಧ್ಯಪ್ರದೇಶ)ದ ಮಹಂತ್ ಕನಕ್ ಬಿಹಾರಿದಾಸ್ ಮಹಾರಾಜ್ ಇವರು ಅಪಘಾತದಲ್ಲಿ ನಿಧನ

ಬರ್ಮನ್-ಸಗ್ರಿ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಮಹಂತ್ ಕನಕ್ ಬಿಹಾರಿ ಮಹಾರಾಜ್ ಸಾವನ್ನಪ್ಪಿದ್ದಾರೆ.

ಭೋಪಾಲ್ (ಮಧ್ಯಪ್ರದೇಶ) – ಏಪ್ರಿಲ್ 17 ರಂದು ನರಸಿಂಗ್‌ಪುರ ಜಿಲ್ಲೆಯ ಬರ್ಮನ್-ಸಾಗ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಧ್ಯಪ್ರದೇಶದ ಛಿಂದವಾಡಾ ಆಶ್ರಮದ ಮಹಂತ್ ಕನಕ್ ಬಿಹಾರಿದಾಸ್ ಮಹಾರಾಜವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಮಹಂತ್ ಕನಕ್ ಬಿಹಾರಿದಾಸ್ ಮಹಾರಾಜರು ಅಶೋಕನಗರದಿಂದ ಚಿಂದವಾಡಾದಲ್ಲಿರುವ ತಮ್ಮ ಆಶ್ರಮಕ್ಕೆ ಕಾರಿನಲ್ಲಿ ಹೋಗುತ್ತಿದ್ದರು. ನರಸಿಂಹಪುರ ಜಿಲ್ಲೆಯ ಬರ್ಮನ್ ಬಳಿ ಬೈಕನ್ನು ಉಳಿಸಲು ಯತ್ನಿಸುತ್ತಿದ್ದಾಗ ಅವರ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಆಯಿತು. ಈ ಭೀಕರ ಅಪಘಾತದಲ್ಲಿ ಮಹಂತ್ ಅವರು ಮತ್ತು ಅವರ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ 11 ಲಕ್ಷ ರೂಪಾಯಿ ದೇಣಿಗೆ ನೀಡಿ ಗಮನ ಸೆಳೆದಿದ್ದರು. ಅವರು ಯಜ್ಞ ಸಾಮ್ರಾಟ್ ಎಂದೂ ಪ್ರಸಿದ್ಧರಾಗಿದ್ದರು. ಅವರು ಭಗವಾನ್ ರಾಮನ ಭಕ್ತರಾಗಿದ್ದರು ಮತ್ತು ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅಯೋಧ್ಯೆಯಲ್ಲಿ ಮಹಾಯಾಗವನ್ನು ಮಾಡುವವರಿದ್ದರು. ಮಹಂತ್ ಕನಕ ಬಿಹಾರಿದಾಸ್ ಮಹಾರಾಜರವರ ಲಕ್ಷಾಂತರ ಭಕ್ತರು ಇದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇವರಿಂದ ಶೋಕ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಹಂತ್ ಕನಕ್ ಬಿಹಾರಿದಾಸ್ ಮಹಾರಾಜ್ ಅವರ ಆಕಸ್ಮಿಕ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ತಮ್ಮ ಶೋಕ ಸಂದೇಶದಲ್ಲಿ, ರಘುವಂಶ ಶಿರೋಮಣಿ ಶ್ರೀ ಶ್ರೀ 1008 ಸಂತ ಶ್ರೀ ಕನಕ ಬಿಹಾರಿದಾಸ್ ಮಹಾರಾಜ್ ಅವರ ನಿಧನದಿಂದ ಧರ್ಮ ಮತ್ತು ಆಧ್ಯಾತ್ಮಿಕ ಜಗತ್ತಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.