ಹಿಂದೂ ಧರ್ಮ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಅವಮಾನಿಸಿದ ಜಮಿಯತ್ ಉಲೇಮಾ-ಎ-ಹಿಂದ್ ನ ಮೌಲಾನಾ ಅರ್ಷದ್ ಮದನಿಯ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹ !

ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳಿಂದ ಬೆಂಗಳೂರು ಗಿರಿನಗರ ಪೊಲೀಸ್ ನಿರೀಕ್ಷಕರಿಗೆ ದೂರು

ಬೆಂಗಳೂರು : ಕಳೆದ ಫೆಬ್ರವರಿ 10 ರಿಂದ 12 ರವರೆಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಜಮಿಯತ್ ಉಲಮಾ-ಎ-ಹಿಂದ್‌ನ 34ನೇ ಅಧಿವೇಶನದಲ್ಲಿ ಮೌಲಾನಾ ಅರ್ಷದ್‌ ಮದನಿ ಅವರು ಹಿಂದೂ ಧರ್ಮ ಹಾಗೂ ಹಿಂದೂಗಳ ಧಾರ್ಮಿಕ ಶ್ರದ್ಧೆಯ ಅಂಶಗಳನ್ನು ಅವಮಾನಿಸಿ ಉದ್ರೇಕಕಾರಿ ಭಾಷಣ ಮಾಡಿದ್ದು ಇದರಲ್ಲಿ ಹಿಂದೂಗಳ ವಿರುದ್ಧ ಅನ್ಯಮತೀಯರನ್ನು ಎತ್ತಿಕಟ್ಟುವ ದುರುದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ. ಈ ರೀತಿ ತಮ್ಮ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಮೌಲಾನಾ ಅರ್ಷದ್ ಮದನಿಯ ಮೇಲೆ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಗಿರಿನಗರ ಪೊಲೀಸ್ ನಿರೀಕ್ಷಕರ ಬಳಿ ದೂರು ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ, ರಾಷ್ಟ್ರೀಯ ಹಿಂದೂ ಪರಿಷತ್ ನ ಶ್ರೀ. ಸುರೇಶ್ ಗೌಡ, ಗಿರೀಶ್ ಕುಮಾರ್, ಉದಯ ಶೆಟ್ಟಿ, ವಿಕ್ರಮ ಶೆಟ್ಟಿ, ಭಜರಂಗದಳದ ಶ್ರೀ. ರಾಘವೇಂದ್ರ, ಪ್ರೊಫೆಸರ್ ಎಸ್. ಉಮಾಶಂಕರ್, ಸಾಮಾಜಿಕ ಹೋರಾಟಗಾರ ರಂಗನಾಥ ಸೇರಿದಂತೆ ಸಮಸ್ತ ಹಿಂದೂ ಸಂಘಟನೆಗಳ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಮಾತನಾಡಿ, ಜಮಿಯತ್ ಉಲಮಾ-ಎ-ಹಿಂದ್‌ನ 34ನೇ ಅಧಿವೇಶನದಲ್ಲಿ ಮೌಲಾನಾ ಅರ್ಷದ್‌ ಮದನಿಯು ಹಿಂದೂಗಳಿಗೆ ಪವಿತ್ರವಾದ ಓಂ ಹಾಗೂ ಅಲ್ಲಾ ಎರಡೂ ಒಂದೇ, ಅಡಮ್ ಮತ್ತು ಮನು ಒಂದೇ ಎನ್ನುವ ಮೂಲಕ ಹಿಂದೂಗಳ ಧಾರ್ಮಿಕ ನಿಷ್ಠೆಯನ್ನು ಘಾಸಿಗೊಳಿಸುವ ದುರುದ್ದೇಶ ಹೊಂದಿದ್ದು ಯೂಟ್ಯೂಬ್ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಭಾಷಣಗಳ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಮಾಹಿತಿ ತಂತ್ರಜ್ಞಾನ ಕಾಯಿದೆ-2000ರ ನಿಬಂಧನೆಗಳನ್ನು ಉಲ್ಲಂಘಿಸಿರುತ್ತಾರೆ. ಇವರ ಮೇಲೆ IPC-1860 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಆಡಿಯಲ್ಲಿ ದೂರು ದಾಖಲಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.