ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಂದೆಯನ್ನು ಅವಮಾನ ಮಾಡಿದ ಆರೋಪ

ಕಾಂಗ್ರೆಸ್ ಮುಖಂಡ ಪವನ ಖೇರಾ ಬಂಧನ

ಕಾಂಗ್ರೆಸ್ ಮುಖಂಡ ಪವನ ಖೇರಾ

ನವ ದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಅವಮಾನಿಸಿರುವುದರಿಂದ ಅಸ್ಸಾಂ ಪೊಲೀಸರು ಕಾಂಗ್ರೆಸ್ಸಿನ ಮುಖಂಡ ಪವನ ಖೇರಾ ಇವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಅವರನ್ನು ದೆಹಲಿ ನ್ಯಾಯಾಲಯದಲ್ಲಿ ಹಾಜರಪಡಿಸಿದ ನಂತರ ಅಸ್ಸಾಂಗೆ ಕರೆದುಕೊಂಡು ಹೋಗುವವರಿದ್ದರು. ಅದಕ್ಕೂ ಮೊದಲು ಖೇರಾ ಇವರ ಪರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ ನಂತರ ಸರ್ವೋಚ್ಚ ನ್ಯಾಯಾಲಯವು ಅವರನ್ನು ದೆಹಲಿ ನ್ಯಾಯಾಲಯದಲ್ಲಿ ಹಾಜರಪಡಿಸಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯ ಆದೇಶ ನೀಡಿದೆ.

ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರುವರಿ ೨೭ ರಂದು ನಡೆಯಲಿದೆ, ಅಲ್ಲಿಯವರೆಗೆ ಪವನ ಖೇರಾ ಇವರಿಗೆ ನಿಯಮಿತ ಜಾಮಿನಿನಗಾಗಿ ಅರ್ಜಿ ತುಂಬಿಸಬೇಕಾಗುತ್ತದೆ. ಹಾಗೂ ಪವನ ಖೇರಾ ಇವರ ವಿರುದ್ಧ ಅಸ್ಸಾಂ, ವಾರಣಾಸಿ ಮತ್ತು ಲಕ್ಷ್ಮಣ ಪುರಿಯಲ್ಲಿ ದೂರು ದಾಖಲಾಗಿವೆ. ಅದರ ವಿಚಾರಣೆ ಒಂದೇ ಸ್ಥಳದಲ್ಲಿ ನಡೆಯಲಿ, ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಬಂಧನ ಪೂರ್ವದಲ್ಲಿ ಪವನ ಖೇರಾ ಇವರು ಪಕ್ಷದ ಇತರ ಸಹಚರರ ಜೊತೆ ಕಾಂಗ್ರೆಸ್ಸಿನ ಅಧಿವೇಶನಕ್ಕಾಗಿ ದೆಹಲಿಯಿಂದ ರಾಯಪುರಕ್ಕೆ ಹೊರಟಿರುವಾಗ ಅವರನ್ನು ದೆಹಲಿ ಪೊಲೀಸರು ವಿಮಾನದಿಂದ ಕೆಳಗಿಳಿಸಿದರು. ಪವನ ಖೇರಾ ಇವರು ಫೆಬ್ರುವರಿ ೨೦ ರಂದು ದೆಹಲಿಯಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ತಂದೆಯ ಹೆಸರು ‘ದಾಮೋದರದಾಸ’ ಎಂದು ಹೇಳುವ ಬದಲು ‘ಗೌತಮದಾಸ ‘ಎಂದು ಹೇಳಿದ್ದರು. ತಪ್ಪಿನ ಅರಿವು ಆದ ನಂತರ ಅವರು ಕ್ಷಮೆ ಯಾಚಿಸಿದ್ದರು.