ಪೇಜಾವರ ಮಠದ ಶ್ರೀಗಳ ಪ್ರಶ್ನೆ
ಮದ್ದೂರು – ಬ್ರಾಹ್ಮಣರು ಮುಖ್ಯಮಂತ್ರಿ ಆಗೋದಾದರೆ ಆಗಲಿ. ಬ್ರಾಹ್ಮಣರು ಮುಖ್ಯಮಂತ್ರಿಯಾಗಬಾರದೆಂದು ಎಲ್ಲಿದೆ ? ಅವರು ಭಾರತದ ಪ್ರಜೆಗಳಲ್ಲವೇ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬ್ರಾಹ್ಮಣರನ್ನು ಉದ್ದೇಶಿಸಿ ಹೇಳಿದ್ದ ಹೇಳಿಕೆಯ ಮೇರೆಗೆ ಶ್ರೀಗಳು ಪತ್ರಕರ್ತರೊಂದಿಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಬ್ರಾಹ್ಮಣರು ಏಕೆ ಮುಖ್ಯಮಂತ್ರಿ ಆಗಬಾರದು? ಅವರು ಭಾರತದ ಪ್ರಜೆಗಳಲ್ಲವೇ: ಎಚ್ಡಿ ಕುಮಾರಸ್ವಾಮಿಗೆ ಪೇಜಾವರ ಶ್ರೀಗಳ ಪ್ರಶ್ನೆ #PejavaraSeer #Mandya #HDKumaraswamy #Brahminshttps://t.co/q9ECpzNJrk
— vijaykarnataka (@Vijaykarnataka) February 7, 2023
ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧದ ಹೇಳಿಕೆಗಳು ಬರುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗುತ್ತವೆ. ಬ್ರಾಹ್ಮಣರು ಕಡಿಮೆ ಇದ್ದಾರೆಂಬ ಕಾರಣಕ್ಕೆ ಏನು ಮಾತನಾಡಿದರೂ ನಡೆಯುತ್ತದೆ ಎಂದು ಮಾತನಾಡುತ್ತಾರೆ. ರಾಜ್ಯದಲ್ಲಿ ಜನತಾದಳದ ಕುಮಾರಸ್ವಾಮಿಯವರು ಎಷ್ಟು ಬ್ರಾಹ್ಮಣರಿಗೆ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ ?’ ಹಿನ್ನೆಲೆ ಅಥವಾ ಪುರಾವೆ ಇಟ್ಟುಕೊಂಡು ಮಾತನಾಡಬೇಕು ಎಂದು ಪ್ರತಿಪಾದಿಸಿದರು. ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಆತನ ಇಡೀ ಸಮಾಜವನ್ನು ದೂಷಿಸುವುದಾದರೆ, ಇತರೆ ಸಮಾಜದಲ್ಲಿ ನಡೆದ ವಿಚಾರವನ್ನ ಏಕೆ ಸಾಮೂಹಿಕರಣ ಮಾಡುತ್ತಿಲ್ಲ? ಪ್ರಜಾಪ್ರಭುತ್ವದಲ್ಲಿ ಯಾರಿಗೂ ಅನ್ಯಾಯವಾಗಬಾರದು. ಯಾವುದೇ ಧರ್ಮವನ್ನು ದೂಷಿಸುವುದು ಸರಿಯಲ್ಲ. ಯಾರಿಗೂ ಅನ್ಯಾಯವಾಗಬಾರದು ಎಂದು ಹೇಳಿದರು.
ಕುಮಾರಸ್ವಾಮಿಯವರು ಏನು ಹೇಳಿದ್ದರು ?
“ಜೋಶಿ ಅವರು ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ, ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿಯ ಮಠ ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರ ವರ್ಗದವರು ಇವರು. ಇವರು ನಮ್ಮ ಭಾಗದ ಹಳೆಯ ಬ್ರಾಹ್ಮಣರಂತೆ ಅಲ್ಲ, ಇವರು ಶೃಂಗೇರಿ ಮಠಕ್ಕೆ ಸೇರಿದವರಲ್ಲ. ಮರಾಠಿ ಪೇಶ್ವೆ ಸಮುದಾಯಕ್ಕೆ ಸೇರಿದವರು” ಎಂದು ಕುಮಾರಸ್ವಾಮಿ ಹೇಳಿದ್ದಾರೆ.