ಸಂತರ ಮಾರ್ಗದರ್ಶನ ಪಡೆದು ಕಾರ್ಯ ಮಾಡಿದಾಗಲೇ ಹಿಂದೂ ರಾಷ್ಟ್ರ ಸ್ಥಾಪನೆ ಸಾಧ್ಯ ! – ಶ್ರೀ. ವಿಜಯ ಕುಮಾರ್, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ಉಡುಪಿ

ಸಿದ್ದಾಪುರದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಹಿಂದೂ ರಾಷ್ಟ್ರ ವ್ಯಾಖ್ಯಾನ ಸಂಪನ್ನ !

ಸಿದ್ದಾಪುರ – ಇಂದು ದೇಶದಲ್ಲಿ ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್, ವಕ್ಫ್ ಕಾಯ್ದೆ, ಭಯೋತ್ಪಾದನೆ, ಭ್ರಷ್ಟಾಚಾರ ಸೇರಿದಂತೆ ಅನೇಕ ಅಹಿತಕರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಎದುರಿಸಲು ಕೇವಲ ಶಾರೀರಿಕ ಮತ್ತು ಮಾನಸಿಕ ಬಲದಿಂದ ಸಾಧ್ಯವಿಲ್ಲದೆ ಆಧ್ಯಾತ್ಮಿಕ ಬಲದ ಅವಶ್ಯಕತೆ ಇದೆ, ಆಧ್ಯಾತ್ಮಿಕ ಬಲವು ನಮಗೆ ಸಂತರ ಮಾರ್ಗದರ್ಶನದಿಂದಲೆ ಸಿಗಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಮನ್ವಯಕರಾದ ಶ್ರೀ. ವಿಜಯ್ ಕುಮಾರ್ ಇವರು ಹೇಳಿದರು. ಅವರು 6 ಜನವರಿ ಶುಕ್ರವಾರದಂದು ಹಿಂದೂ ಜನಜಾಗೃತಿ ಸಮಿತಿಯು ಸಿದ್ದಾಪುರದ ಶ್ರೀ ದಶಭುಜ ಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ವ್ಯಾಖ್ಯಾನದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂಜ್ಯ ರಮಾನಂದ ಗೌಡ ಇವರೂ ಉಪಸ್ಥಿತರಿದ್ದರು.

ಪೂಜ್ಯ ರಮಾನಂದ ಗೌಡ ಇವರು ಮಾತನಾಡಿ ಧರ್ಮವೇ ನಮ್ಮ ದೇಶದ ಮೂಲವಾಗಿದೆ, ಇಂದು ಹಿಂದೂಗಳಿಗೆ ಧರ್ಮಶಿಕ್ಷಣ ಲಭಿಸದೆ, ಸಮಾಜವು ಅದೋಗತಿಯೆಡೆಗೆ ಸಾಗುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬ ಹಿಂದೂವೂ ಧರ್ಮಶಿಕ್ಷಣ ಪಡೆದು ಧರ್ಮಚರಣೆಯನ್ನು ಮಾಡುವ ಮೂಲಕ ಆಧ್ಯಾತ್ಮಿಕ ಬಲ ಹೆಚ್ಚಿಸಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಟ್ಟಿಬದ್ಧರಾಗಬೇಕಿದೆ, ಹಿಂದೆ ಗುರುವಿನ ಮೂಲಕ ಜ್ಞಾನವನ್ನು ಪಡೆದು ಶಿಷ್ಯರು ಸಾಧನೆಯನ್ನು ಮಾಡುತ್ತಿದ್ದರು. ಭಾರತದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಹಕ್ಕ ಬುಕ್ಕರು ಸಹ ತಮ್ಮ ರಾಜ್ಯ ಸ್ಥಾಪನೆಯನ್ನು ಮಾಡುವಾಗ ಗುರುಗಳ ಮಾರ್ಗದರ್ಶನ ಪಡೆದು ಮಾಡಿದರು. ಇದರಿಂದಾಗಿ ಅವರ ಧರ್ಮಸಂಸ್ಥಾಪನೆಯ ಕಾರ್ಯವು ಪೂರ್ಣವಾಯಿತು. ಪ್ರಸ್ತುತ ಕಾಲದಲ್ಲಿ ಅನೇಕ ದಾರ್ಶನಿಕರು, ಸಂತರು ಮತ್ತು ಸ್ವತಃ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರೂ ಸಹ ಭಾರತ 2025 ಕ್ಕೆ ಹಿಂದೂ ರಾಷ್ಟ್ರವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಹಾಗಾಗಿ ನಾವು ಈ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಹಭಾಗಿ ಆಗಬೇಕಾದರೆ ಗುರುಗಳ ಮಾರ್ಗದರ್ಶನ ಪಡೆದು ಕಾರ್ಯ ಮಾಡಿದರೆ ಯಶಸ್ಸು ಖಂಡಿತ ಸಿಗುವುದು ಎಂದರು. ಕೊನೆಗೆ ಅವರು “ಧರ್ಮೋ ರಕ್ಷತಿ ರಕ್ಷಿತಃ” ಅಂದರೆ ಧರ್ಮ ಉಳಿಯಬೇಕಾದರೆ ನಾವೆಲ್ಲ ಹಿಂದೂಗಳು ಧರ್ಮಚರಣೆಯನ್ನು ಮಾಡಬೇಕು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಹೆಚ್ಚಿಸಬೇಕು ಎಂದರು.

ಕೊನೆಯಲ್ಲಿ ಶ್ರೀ. ವಿಜಯ್ ಕುಮಾರ್ ಇವರು ನಮ್ಮ ದೇಶದಲ್ಲಿ ಬೆಳೆಯುತ್ತಿರುವ ಹೊಸ ಪೀಳಿಗೆಗಳಿಗೆ ಧರ್ಮದ ಕುರಿತು ಜ್ಞಾನ ಸಿಗದಿರುವುದೇ ಈ ಅಧರ್ಮಾಚರಣೆಗೆ ಮೂಲ ಕಾರಣವೆಂದು ತೋರುತ್ತಿದೆ. ಅನ್ಯ ಧರ್ಮೀಯರಿಗೆ ಅವರ ಶೈಕ್ಷಣಿಕ ಸಂಸ್ಥೆಗಳಲ್ಲಿ ಧರ್ಮದ ಶಿಕ್ಷಣ ಪಡೆಯುವ ಅವಕಾಶವಿದೆ, ಆದರೆ ಹಿಂದೂಗಳಿಗೆ ಎಲ್ಲಿಯೂ ಧರ್ಮಶಿಕ್ಷಣ ಸಿಗದ ಕಾರಣ ಅವರು ಧರ್ಮದಿಂದ ದೂರವಾಗುತ್ತಿದ್ದಾರೆ. ಈ ಕೊರತೆಯನ್ನು ನೀಗಿಸಲು ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ ದೇಶದಾದ್ಯಂತ ಉಚಿತ ಧರ್ಮಶಿಕ್ಷಣ ವರ್ಗಗಳನ್ನು ನಡೆಸುತ್ತಿದ್ದು ಹಳ್ಳಿ ಹಳ್ಳಿಗಳಲ್ಲಿ ಹಿಂದುಗಳಲ್ಲಿ ಧರ್ಮದ ಆಚರಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವಾರ ನಡೆಯುವ ಈ ವರ್ಗಗಳಲ್ಲಿ ಕುಂಕುಮ ಹೇಗೆ ಮತ್ತು ಏಕೆ ಇಡಬೇಕು, ದೇವಸ್ಥಾನದ ದರ್ಶನ ಹೇಗೆ ಮಾಡಬೇಕು ? ಇಂತಹ ಧರ್ಮಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಲಿವೆ. ಆದ್ದರಿಂದ ಸಿದ್ದಾಪುರದಲ್ಲಿಯೂ ಈ ಧರ್ಮಶಿಕ್ಷಣ ವರ್ಗಗಳನ್ನು ಪ್ರಾರಂಭಿಸುವವರಿದ್ದು ಆಸಕ್ತರು ಸಹಭಾಗಿ ಆಗಬಹುದು ಎಂದು ಕರೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿಯ ಉಚಿತ ಧರ್ಮ ಶಿಕ್ಷಣ ವರ್ಗವನ್ನು ತಮ್ಮ ಕ್ಷೇತ್ರದಲ್ಲೂ ಆಯೋಜನೆ ಮಾಡಬೇಕಿದ್ದರೆ ಅಥವಾ ತಾವು ಸ್ವತಃ ಇದರಲ್ಲಿ ಪಾಲ್ಗೊಳ್ಳಬೇಕಿದ್ದರೆ ದಯವಿಟ್ಟು ಸಂಪರ್ಕಿಸಿ – 7204082658.