ಪ್ರಪಂಚದ ಜನಸಂಖ್ಯೆ ೮೦೦ ಕೋಟಿ !

೨೪ ವರ್ಷಗಳಲ್ಲಿ ೨೦೦ ಕೋಟಿ ಜನಸಂಖ್ಯೆ ಹೆಚ್ಚಳ !

ನವ ದೆಹಲಿ – ವಿಶ್ವದ ಜನಸಂಖ್ಯೆ ೮೦೦ ಕೋಟಿ ತಲುಪಿದೆ. ನವೆಂಬರ್ ೧೫ ರಂದು ಮಧ್ಯಾಹ್ನ ೧:೩೦ ಕ್ಕೆ ಒಂದು ಮಗುವಿನ ಜನನದ ನಂತರ ವಿಶ್ವದ ಜನಸಂಖ್ಯೆಯು ೮೦೦ ಕೋಟಿ ತಲುಪಿದೆ ಎಂದು ವಿಶ್ವದ ಜನಸಂಖ್ಯೆಯ ಮಾಹಿತಿಯನ್ನು ಒದಗಿಸುವ ಜಾಲತಾಣವು ತಿಳಿಸಿದೆ. ಕುತೂಹಲಕಾರಿಯಾಗಿ, ಕಳೆದ ಕೇವಲ ೨೪ ವರ್ಷಗಳಲ್ಲಿ ವಿಶ್ವದ ಜನಸಂಖ್ಯೆಯು ಸುಮಾರು ೨೦೦ ಕೋಟಿಗಳಷ್ಟು ಹೆಚ್ಚಾಗಿದೆ.

೧. ೧೯೯೮ ರಲ್ಲಿ ವಿಶ್ವದ ಜನಸಂಖ್ಯೆ ೬೦೦ ಕೋಟಿ ಇತ್ತು. ೨೦೧೦ ರಲ್ಲಿ ೭೦೦ ಕೋಟಿಗೆ ಏರಿತು. ಮುಂದಿನ ೧೨ ವರ್ಷಗಳಲ್ಲಿ, ಅಂದರೆ ೨೦೨೨ ರಲ್ಲಿ, ಜನಸಂಖ್ಯೆಯು ಇನ್ನೂ ೧೦೦ ಕೋಟಿ ಹೆಚ್ಚಾಯಿತು.

೨. ಯೇಸುಕ್ರಿಸ್ತನ ಜನನದ ನಂತರದಿಂದ ಅಂದರೆ ಕಳೆದ ೨ ಸಾವಿರ ವರ್ಷಗಳಿಂದ ವಿಶ್ವಾದ್ಯಂತ ಜನಸಂಖ್ಯೆಯ ಅಂಕಿಅಂಶಗಳು ಲಭ್ಯವಿವೆ. ಆಗ ಜಗತ್ತಿನ ಜನಸಂಖ್ಯೆಯು ಕೇವಲ ೨೦ ಕೋಟಿಯಿತ್ತು. ಆ ನಂತರ ಅದು ೧೦೦ ಕೋಟಿಗೆ ತಲುಪಲು ಸುಮಾರು ೧ ಸಾವಿರದ ೮೦೦ ವರ್ಷಗಳು ತಗುಲಿದವು.

೩. ಕೈಗಾರಿಕಾ ಕ್ರಾಂತಿಯ ಜೊತೆಯಲ್ಲಿಯೇ ಆರೋಗ್ಯ ಸೇವೆಗಳೂ ಸುಧಾರಿಸಿದವು. ಇದರಿಂದ ಜನಿಸುವ ಮಕ್ಕಳ ಹಾಗೂ ಹೆರಿಗೆಯ ಸಮಯದಲ್ಲಿ ಸಾಯುವ ಮಹಿಳೆಯರ ಸಂಖ್ಯೆಯು ಕಡಿಮೆಯಾಯಿತು. ಇದರಿಂದ ಜನಸಂಖ್ಯೆಯಲ್ಲಿ ತ್ವರಿತ ಹೆಚ್ಚಳವಾಯಿತೆಂದು ಹೇಳಲಾಯಿತು.

ಸಂಪಾದಕೀಯ ನಿಲುವು

ಒಂದೆಡೆ, ವಿಶ್ವದ ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ, ಮತ್ತೊಂದೆಡೆ ಆಹಾರ-ನೀರಿನ ಕೊರತೆಯಿಂದಾಗಿ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಅರೆಹೊಟ್ಟೆಯಲ್ಲಿ ಬದುಕುತ್ತಿದ್ದಾರೆ. ಜನಸಂಖ್ಯೆಯು ಹೀಗೆ ಬೆಳೆಯುತ್ತಲೇ ಹೋದರೆ ಮುಂದೊಂದು ದಿನ ಇಡೀ ಪ್ರಪಂಚದಲ್ಲಿ ನೀರು ಮತ್ತು ಆಹಾರಗಳ ವಿಷಯಕ್ಕೆ ಅರಾಜಕತೆ ಉಂಟಾದರೂ ಆಶ್ಚರ್ಯವಿಲ್ಲ ! ಈ ಪರಿಸ್ಥಿತಿ ಬರುವ ಮೊದಲೇ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ಅವಶ್ಯಕ !