ಶ್ರೀಲಂಕಾದ ೮ ತಮಿಳು ಹಿಂದೂ ಆರೋಪಿಗಳಿಗೆ ರಾಷ್ಟ್ರಪತಿಗಳಿಂದ ಕ್ಷಮಾದಾನ

‘ಲಿಬರೇಷನ್ ಟೈಗರ್ ಆಫ್ ತಮಿಳ್ ಈಲಂ’ (‘ಎಲ್‌ಟಿಟಿಇ’) ಯೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪ !

ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ

ಕೊಲಂಬೊ (ಶ್ರೀಲಂಕಾ) : ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ೮ ತಮಿಳು ಹಿಂದೂ ಸೆರೆಯಾಳುಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿದ್ದಾರೆ. ಇವರೆಲ್ಲರನ್ನು ‘ಲಿಬರೇಷನ್ ಟೈಗರ್ ಆಫ್ ತಮಿಳ್ ಈಲಂ’ (‘ಎಲ್‌ಟಿಟಿಇ’) ಯೊಂದಿಗೆ ನಂಟು ಹೊಂದಿದ್ದಕ್ಕಾಗಿ ಬಂಧಿಸಲಾಗಿತ್ತು. ಅವರೆಲ್ಲರೂ ಕೆಲವು ವರ್ಷಗಳ ಕಾಲ ಜೈಲಿನಲ್ಲಿದ್ದರು. ಅವರಲ್ಲಿ ೩ ಜನರು ಮಾಜಿ ಅಧ್ಯಕ್ಷೆ ಚಂದ್ರಿಕಾ ಭಂಡಾರನಾಯಕ ಕುಮಾರತುಂಗ ಅವರ ಹತ್ಯೆಗೆ ಯತ್ನಿಸಿದ ಆರೋಪ ಹೊತ್ತಿದ್ದರು. ಅವರು ಕಳೆದ ೨೨ ವರ್ಷಗಳಿಂದ ಜೈಲಿನಲ್ಲಿದ್ದರು. ತಮಿಳು ರಾಜಕೀಯ ಪಕ್ಷಗಳು ಮತ್ತು ಶ್ರೀಲಂಕಾದ ನಾಯಕರು ಅವರನ್ನು ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಡ ಹೇರುತ್ತಿದ್ದರು.

ಇತರ ಆರೋಪಿಗಳನ್ನು ಭಯೋತ್ಪಾದನಾ ನಿಯಂತ್ರಣ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಶ್ರೀಲಂಕಾದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಲಾಗುತ್ತಿದೆ. ೨೦೨೧ ರಲ್ಲಿ ಯುರೋಪಿಯನ್ ಸಂಸತ್ತು ಈ ಕಾನೂನನ್ನು ರದ್ದುಗೊಳಿಸುವಂತೆ ಹೇಳಿತ್ತು. ಆಗ ಶ್ರೀಲಂಕಾ ಸರಕಾರವು ಈ ಕಾಯ್ದೆಯನ್ನು ಬಳಸುವುದಿಲ್ಲ ಎಂದು ಈ ಸಂಸತ್ತಿಗೆ ಭರವಸೆ ನೀಡಿತ್ತು.