ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ ಮನೆಯ ಮೇಲೆ ದಾಳಿ

ವಾಹನಗಳನ್ನು ಧ್ವಂಸಗೊಳಿಸಿ ಮನೆಯೊಳಗೆ ನುಗ್ಗಲು ಪ್ರಯತ್ನ

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ

ನವದೆಹಲಿ – ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ ಅವರ ಮನೆಯ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿ ಅವರ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಇದರಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಈ ಮಾಹಿತಿಯನ್ನು ಸ್ವತಃ ಸ್ವಾತಿ ಮಾಲಿವಾಲ ಇವರು ಟ್ವೀಟ್ ಮಾಡಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರಿಗೆ ದೂರು ನೀಡುತ್ತಿದ್ದೇನೆ ಎಂದು ಸ್ವಾತಿ ಮಾಲಿವಾಲ ಹೇಳಿದ್ದಾರೆ.

ಸ್ವಾತಿ ಮಾಲಿವಾಲ ಅವರು ಅಕ್ಟೋಬರ್ ೧೭ ರ ಬೆಳಗ್ಗೆ ಟ್ವೀಟ್ ಮಾಡಿ, ‘ಕೆಲ ಸಮಯದ ಹಿಂದೆ ಕೆಲವರು ನನ್ನ ಮನೆಗೆ ನುಗ್ಗಿ ದಾಳಿ ನಡೆಸಿದರು. ಅವರು ನನ್ನ ಮತ್ತು ನನ್ನ ತಾಯಿಯ ವಾಹನವನ್ನು ಧ್ವಂಸಗೊಳಿಸಿದರು. ಅದೃಷ್ಟವಶಾತ್ ನಾನು ಮತ್ತು ಅಮ್ಮ ಇಬ್ಬರೂ ಮನೆಯಲ್ಲಿರಲಿಲ್ಲ, ಇಲ್ಲದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ! ನೀವು ಏನು ಬೇಕಾದರೂ ಮಾಡಿ, ನಾನು ಹೆದರುವುದಿಲ್ಲ’ ಎಂದು ಮಾಹಿತಿ ನೀಡಿದರು

ಸಾಜಿದ ಖಾನ ವಿರುದ್ಧ ಧ್ವನಿ ಎತ್ತಿದಾಗಿನಿಂದ ಬೆದರಿಕೆಗಳು

ಸ್ವಾತಿ ಮಾಲಿವಾಲ ಇವರು, ‘ಚಿತ್ರ ನಿರ್ಮಾಪಕ ಮತ್ತು ಬಿಗ್ ಬಾಸ್ ಸ್ಪರ್ಧಿ ಸಾಜಿದ ಖಾನ ವಿರುದ್ಧ ನಾನು ಧ್ವನಿ ಎತ್ತಿದಾಗಿನಿಂದ ನನಗೆ ವಿವಿಧ ಬೆದರಿಕೆಗಳು ಬರುತ್ತಿವೆ.’ ಎಂದು ಆರೋಪಿಸಿದ್ದಾರೆ.
ದೆಹಲಿ ಮಹಿಳಾ ಆಯೋಗವು ಸಾಜಿದ ಖಾನ ಅವರನ್ನು ಬಿಗ್ ಬಾಸ್ ಶೋನಿಂದ ತೆಗೆದುಹಾಕುವಂತೆ ಒತ್ತಾಯಿಸಿತ್ತು. ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ ಮಾತನಾಡಿ, ಸಾಜಿದ ಖಾನ ವಿರುದ್ಧ ೧೦ ಕ್ಕೂ ಹೆಚ್ಚು ಮಹಿಳೆಯರ ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆಯ ಆರೋಪವಿದೆ ಎಂದು ಹೇಳಿದರು. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಈ ಘಟನೆಯು, ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯ ದುಸ್ಥಿತಿಯ ನಿದರ್ಶನವಾಗಿದೆ ! ಕೇಂದ್ರ ಸರಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು !