ಸಿಡ್ನಿ (ಆಸ್ಟ್ರೇಲಿಯಾ) ದಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಜನಾಂಗೀಯ ದ್ವೇಷದಿಂದ ಚಾಕುವಿನಿಂದ ಮಾರಣಾಂತಿಕ ಹಲ್ಲೆ

ಸಿಡ್ನಿ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾದಲ್ಲಿ ಶಿಕ್ಷಣಕ್ಕಾಗಿ ಹೋಗಿದ್ದ ೨೮ ವರ್ಷದ ಭಾರತೀಯ ವಿದ್ಯಾರ್ಥಿ ಶುಭಂ ಗರ್ಗನ ಮೇಲೆ ಜನಾಂಗೀಯ ದ್ವೇಷದ ಕಾರಣ ೧೧ ಬಾರಿ ಚಾಕುವಿನಿಂದ ಇರಿಯಲಾಗಿದೆ. ಆತನ ಮುಖ, ಎದೆ, ಹೊಟ್ಟೆಯ ಮೇಲೆ ಗಂಭೀರ ಗಾಯಗಳಾಗಿವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯ ಶುಭಂ ಮೇಲೆ ಸಿಡ್ನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಅವನ ಸ್ಥಿತಿ ಚಿಂತಾಜನಕವಾಗಿದೆ. ಶುಭಂ ಅವರ ಕುಟುಂಬ ಆಗ್ರಾದಲ್ಲಿ ನೆಲೆಸಿದೆ. ಈ ಪ್ರಕರಣದಲ್ಲಿ ಪೊಲೀಸರು ೨೭ ವರ್ಷದ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ಶುಭಂ ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಹೋಗಿದ್ದನು.

೧. ಶುಭಂ ಗರ್ಗ ಸಿಡ್ನಿಯ ‘ಯುನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್’ನಲ್ಲಿ ‘ಮೆಕ್ಯಾನಿಕಲ್ ಎಂಜಿನಿಯರಿಂಗ್’ನಲ್ಲಿ ‘ಪಿ.ಎಚ್.ಡಿ.’ಯ ವ್ಯಾಸಂಗ ಮಾಡುತ್ತಿದ್ದನು. ಶುಭಂ ಐ.ಐ.ಟಿ. ಮದ್ರಾಸ್‌ನಲ್ಲಿ ಬಿ.ಟೆಕ್. ಮತ್ತು ಎಮ್.ಎಸ್.ಸಿ. ಮುಗಿಸಿ ಮುಂದಿನ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಗೆ ಹೋದನು.

೨. ಈ ಘಟನೆಗೆ ಸಂಬಂಧಿಸಿದಂತೆ ಶುಭಂ ತಂದೆ ರಾಮನಿವಾಸ ಗರ್ಗ ಅವರು, ಶುಭಂ ಅಥವಾ ಆತನ ಸ್ನೇಹಿತರಿಗೆ ದಾಳಿಕೋರನ ಪರಿಚಯವಿರಲಿಲ್ಲ. ಇದು ಜನಾಂಗೀಯ ದಾಳಿ ಎಂದು ತೋರುತ್ತದೆ. ನಮಗೆ ಸಹಾಯ ಮಾಡಲು ನಾವು ಭಾರತ ಸರಕಾರವನ್ನು ಕೋರುತ್ತೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತ ಸರಕಾರವು ಅಮೇರಿಕಾ, ಯುರೋಪ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಭಾರತೀಯರ ಮೇಲಿನ ದಾಳಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ರಕ್ಷಣೆಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು!