ಭಯೋತ್ಪಾದಕರೊಂದಿಗೆ ಸೆಣಸಾಡಿ ೨ ಗುಂಡುಗಳು ತಾಗಿದ ನಂತರವೂ ಹಿಂಜರಿಯದ ಭಾರತೀಯ ಸೇನೆಯ ‘ಜ಼ೂಮ್’ ಹೆಸರಿನ ನಾಯಿ !

ಗಾಯಗೊಂಡ ಜ಼ೂಮ್‌ಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಭಾರತೀಯ ಸೇನೆಯ ‘ಜ಼ೂಮ್’ ಹೆಸರಿನ ನಾಯಿ

ಅನಂತನಾಗ್ (ಜಮ್ಮು-ಕಾಶ್ಮೀರ) – ಇಲ್ಲಿನ ಕೋಕರನಾಗ ಪ್ರದೇಶದಲ್ಲಿ ಜಿಹಾದಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ‘ಜೂಮ್’ ಎಂಬ ನಾಯಿಯು ಗಾಯಗೊಂಡಿದೆ. ೨ ಗುಂಡುಗಳು ತಗುಲಿದ ನಂತರವೂ ಅದು ಉಗ್ರರ ವಿರುದ್ಧ ಹೋರಾಟವನ್ನು ಮುಂದುವರೆಸಿತು. ಪ್ರಸ್ತುತ ಅದು ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಜೂಮ್‌ನ ಸ್ಥಿತಿ ಈಗ ಸ್ಥಿರವಾಗಿದೆ.

ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಜೂಮ್‌ಗೆ ತರಬೇತಿ ನೀಡಲಾಗಿದೆ. ಸೇನೆಯ ಅನೇಕ ಕಾರ್ಯಾಚರಣೆಗಳಲ್ಲಿ ಜೂಮ್ ಭಾಗವಹಿಸುತ್ತದೆ. ಕೋಕರನಾಗನಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಭಯೋತ್ಪಾದಕರು ಅಡಗಿದ್ದ ಮನೆಯನ್ನು ತೆರವು ಮಾಡುವ ಕಾರ್ಯವನ್ನು ಜೂಮ್‌ಗೆ ವಹಿಸಲಾಯಿತು. ಭಯೋತ್ಪಾದಕರನ್ನು ಗುರುತಿಸಿದ ಜೂಮ್ ಅವರ ಮೇಲೆ ದಾಳಿ ಮಾಡಿತು. ಈ ವೇಳೆ ಉಗ್ರರು ಅದರ ಮೇಲೆ ಗುಂಡಿನ ದಾಳಿ ನಡೆಸಿದರು. ದಾಳಿಯಲ್ಲಿ ಅದಕ್ಕೆ ೨ ಗುಂಡುಗಳು ತಗುಲಿದವು. ಆದರೂ ಅದು ತನ್ನ ಕಾರ್ಯವನ್ನು ಮುಂದುವರೆಸಿತು. ಇದಾದ ಬಳಿಕ ಸೇನೆಯು ಅಲ್ಲಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಿತು.