ರಾಜಧಾನಿ ದೆಹಲಿಯು ಮಹಿಳೆಯರಿಗೆ ಅತ್ಯಧಿಕ ಅಸುರಕ್ಷಿತ ನಗರ ! – ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೋದ ವರದಿ

ಇದು ಭಾರತೀಯರಿಗೆ ಲಜ್ಜಾಸ್ಪದ !

ನವ ದೆಹಲಿ – ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೋದ ಹೊಸ ವರದಿಗನುಸಾರ ರಾಜಧಾನಿ ದೆಹಲಿ ನಗರವು ಮಹಿಳೆಯರಿಗೆ ಅತ್ಯಧಿಕ ಅಸುರಕ್ಷಿತ ನಗರವಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ದೆಹಲಿಯಲ್ಲಿ ಪ್ರತಿದಿನ ಇಬ್ಬರು ಅಪ್ರಾಪ್ತ ಹುಡುಗಿಯರ ಮೇಲೆ ಬಲಾತ್ಕಾರವಾಯಿತು, ಅವುಗಳಲ್ಲಿ ಅನೇಕ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ.


೧. ಎನ್.ಸಿ.ಆರ್.ಬಿ.ಯ ಅಂಕಿಅಂಶಗಳಿಗನುಸಾರ ದೆಹಲಿಯಲ್ಲಿ ೨೦೨೧ ರಲ್ಲಿ ೧೩ ಸಾವಿರದ ೮೯೨ ಮಹಿಳೆಯರ ಮೇಲೆ ನಡೆದ ಅಪರಾಧಗಳು ದಾಖಲಾಗಿವೆ. ಈ ಸಂಖ್ಯೆಯು ೨೦೨೦ ರ ತುಲನೆಯಲ್ಲಿ ಶೇ. ೪೦ ರಷ್ಟು ಹೆಚ್ಚಾಗಿತ್ತು. ೨೦೨೦ ರಲ್ಲಿ ಈ ಸಂಖ್ಯೆಯು ೯ ಸಾವಿರದ ೭೮೨ ಕ್ಕೆ ತಲುಪಿತ್ತು.
೨. ಈ ವರದಿಗನುಸಾರ ದೇಶದ ಎಲ್ಲ ೧೯ ಮಹಾನಗರಗಳ ಪೈಕಿ ಶೇ. ೩೨.೨೦ ರಷ್ಟು ಮಹಿಳೆಯರ ಮೇಲಿನ ಅಪರಾಧಗಳು ಕೇವಲ ದೆಹಲಿಯಲ್ಲಿಯೆ ನಡೆದಿವೆ.
೩. ದೆಹಲಿಯಲ್ಲಿ ೨೦೨೧ ರಲ್ಲಿ ಮಹಿಳೆಯರ ಅಪಹರಣದ ೩ ಸಾವಿರದ ೯೪೮, ಗಂಡನಿಂದ ಅಮಾನವೀಯ ವರ್ತನೆಗೀಡಾದ ೪ ಸಾವಿರದ ೬೭೪ ಹಾಗೂ ಹುಡುಗಿಯರ ಮೇಲಿನ ಬಲಾತ್ಕಾರದ ೮೩೩ ಅಪರಾಧಗಳನ್ನು ದಾಖಲಿಸಲಾಗಿದೆ.
೪. ದೆಹಲಿಯ ನಂತರ ಮುಂಬಯಿಯ ಕ್ರಮಾಂಕ ಬರುತ್ತದೆ. ಇಲ್ಲಿ ಮಹಿಳೆಯರ ಅತ್ಯಾಚಾರಗಳ ೫ ಸಾವಿರದ ೫೪೩ ಪ್ರಕರಣಗಳನ್ನು ದಾಖಲಿಸಲಾಗಿದೆ.
೫. ಮೂರನೇ ಕ್ರಮಾಂಕದಲ್ಲಿ ಬೆಂಗಳೂರು ಇದೆ. ಇಲ್ಲಿ ೩ ಸಾವಿರದ ೧೨೭ ಪ್ರಕರಣಗಳನ್ನು ದಾಖಲಿಸಲಾಗಿದೆ. ೧೯ ಮಹಾನಗರಗಳಲ್ಲಿನ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಮುಂಬಯಿ ಹಾಗೂ ಬೆಂಗಳೂರಿನ ಪಾಲು ಅನುಕ್ರಮವಾಗಿ ಶೇ. ೧೨.೭೬ ಮತ್ತು ೭.೨ ರಷ್ಟಿದೆ.