ಸಂಸ್ಕೃತ ಭಾಷೆಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡುವಂತೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿತು

ಸಂಸತ್ತಿನಲ್ಲಿ ಈ ಕುರಿತು ಚರ್ಚಿಸಲು ಸಲಹೆ !

ನವ ದೆಹಲಿ – ಸಂಸ್ಕೃತ ಭಾಷೆಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡುವ ಬಗ್ಗೆ ನ್ಯಾಯವಾದಿ ಕೆ.ಜಿ.ವಂಜಾರಾ ಇವರು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ‘ಈ ಅರ್ಜಿಯಲ್ಲಿ ದಾಖಲಿಸಲಾಗಿದ್ದ ಅಂಶಗಳ ಕುರಿತು ಚರ್ಚಿಸಲು ಮತ್ತು ವಿಚಾರ ಮಾಡಲು ಸಂಸತ್ತು ಸೂಕ್ತ ಸ್ಥಳವಾಗಿದೆ. ನ್ಯಾಯಾಲಯದಲ್ಲಿ ಈ ವಿಷಯದಲ್ಲಿ ನಿರ್ಣಯ ನೀಡುವುದು ಸೂಕ್ತವಲ್ಲ’, ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿತು. ಈ ಅರ್ಜಿಯಲ್ಲಿ ‘ಕೇಂದ್ರಸರಕಾರವು ಸಂಸ್ಕೃತ ಭಾಷೆಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡುವ ವಿಷಯದಲ್ಲಿ ನ್ಯಾಯಾಲಯ ನಿರ್ದೇಶನ ನೀಡಬೇಕು’, ಎಂದು ಅವರು ಕೋರಿದ್ದರು. ‘ಈ ರೀತಿಯ ನಿರ್ದೇಶನಗಳಿಂದ ಸಂವಿಧಾನಾತ್ಮಕ ಪ್ರಕ್ರಿಯೆಯಲ್ಲಿ ಯಾವುದೇ ಉಲ್ಲಂಘನೆಯಾಗುವುದಿಲ್ಲ. ಅಲ್ಲದೇ ಹಿಂದಿ ಮತ್ತು ಆಂಗ್ಲ ಭಾಷೆಯಂತೆಯೇ ಸಂಸ್ಕೃತ ಭಾಷೆಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡಬೇಕು’, ಎಂದು ಇದರಲ್ಲಿ ನಮೂದಿಸಲಾಗಿತ್ತು.


ನ್ಯಾಯಾಲಯವು ಆಲಿಕೆಯ ಸಮಯದಲ್ಲಿ, ಈ ವಿಷಯದಲ್ಲಿ ನ್ಯಾಯಾಲಯ ಏಕೆ ನೊಟೀಸ್ ಜಾರಿಗೊಳಿಸಬೇಕು ಅಥವಾ ಪ್ರಚಾರದ ವಿಷಯದಲ್ಲಿ ಏಕೆ ಘೋಷಣೆ ಮಾಡಬೇಕು? ನಾವು ನಿಮ್ಮ ವಿಚಾರಗಳನ್ನು ಕೇಳಿಸಿಕೊಳ್ಳಬಹುದು; ಆದರೆ ಈ ಕುರಿತು ಚರ್ಚೆ ಅಥವಾ ನಿರ್ಣಯ ತೆಗೆದುಕೊಳ್ಳಲು ಸಂಸತ್ತು ಸೂಕ್ತ ಸ್ಥಳವಾಗಿದೆ. ಇಂತಹ ಸ್ಥಾನಮಾನ ನೀಡುವ ಕುರಿತು ಸಂವಿಧಾನದಲ್ಲಿ ಸುಧಾರಣೆ ಮಾಡುವ ಆವಶ್ಯಕತೆಯಿದೆ. ಈ ವಿಷಯದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮುಂದೆ ಈ ಅಂಶಗಳನ್ನು ತಿಳಿಸುವ ಸ್ವಾತಂತ್ರ್ಯ ನಿಮಗೆ ಇದೆಯೆಂದು ಹೇಳಿದೆ.

ಸಂಪಾದಕೀಯ ನಿಲುವು

ಮೂಲದಲ್ಲಿ ಜನರಿಗೆ ಇಂತಹ ಬೇಡಿಕೆ ಮಾಡಬೇಕಾಗುವ ಸಮಯ ಬರಬಾರದು. ಕೇಂದ್ರದ ಭಾಜಪ ಸರಕಾರ ಈ ಕುರಿತು ಚರ್ಚಿಸಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಬೇಕು, ಎಂದೇ ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !