ಶ್ರೀಲಂಕಾದ ರಾಷ್ಟ್ರಪತಿ ಗೊಟಾಬಾಯ ರಾಜಪಕ್ಷೆ ಜುಲೈ ೧೩ ರಂದು ರಾಜೀನಾಮೆ ನೀಡಲಿದ್ದಾರೆ !

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾದ ರಾಷ್ಟ್ರಪತಿ ಗೊಟಾಬಾಯ ರಾಜಪಕ್ಷೆ ಅವರ ನಿವಾಸದ ಮೇಲೆ ಪ್ರತಿಭಟನಾಕಾರರು ನಿಯಂತ್ರಣ ಪಡೆದ ನಂತರ ಅಲ್ಲಿ ದೊಡ್ಡ ಮೊತ್ತದ ಹಣ ದೊರೆತಿದೆ. ಮತ್ತೊಂದೆಡೆ, ಜುಲೈ ೧೩ ರಂದು ರಾಜಪಕ್ಷೆ ರಾಜೀನಾಮೆ ಘೋಷಿಸಿದ್ದಾರೆ. ಅವರು ಪ್ರಸ್ತುತ ನೌಕಾಪಡೆಯ ಒಂದು ಹಡಗಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಸಚಿವರಾದ ಧಮ್ಮಿಕಾ ಪರೇರಾ, ಹಿರೆನ ಫರ್ನಾಂಡೊ ಮತ್ತು ಮನುಷಾ ನಯಕಾರಾ ಕೂಡಾ ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ಶಾಂತಿ ನೆಲೆಸಲು ಭದ್ರತಾ ಪಡೆಗಳು ಮತ್ತು ಪೊಲೀಸರೊಂದಿಗೆ ಸಹಕರಿಸುವಂತೆ ಸೇನಾ ಮುಖ್ಯಸ್ಥ ಶೈವೇಂದ್ರ ಸಿಲ್ವಾ ಜನತೆಗೆ ಮನವಿ ಮಾಡಿದ್ದಾರೆ. ಜುಲೈ ೯ ರ ರಾತ್ರಿ ಪ್ರಧಾನಿ ರನಿಲ ವಿಕ್ರಮಸಿಂಘೆ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ಆ ಬಳಿಕ ವಿಕ್ರಮ ಸಿಂಘೆ ತಕ್ಷಣವೇ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸರು ಹಲವು ಪ್ರಾಂತ್ಯಗಳಲ್ಲಿ ಕರ್ಫ್ಯೂ ವಿಧಿಸಿದ್ದಾರೆ.