‘ಮದರಸಾ’ ಪದಕ್ಕೆ ಈಗ ಅಂತ್ಯ ಹಾಡಬೇಕು ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ

ನವದೆಹಲಿ : ‘ಮದರಸಾ’ ಎಂಬ ಪದಕ್ಕೆ ಈಗ ಅಂತ್ಯ ಹಾಡಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಎಲ್ಲ ಶಾಲೆಗಳಲ್ಲಿ ಸಾಮಾನ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದೂ ಕೂಡ ಅವರು ಹೇಳಿದರು.

ಸರಮಾ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, “ಮದರಸಾ” ಎಂಬ ಪದವು ಇರುವವರೆಗೂ ವಿದ್ಯಾರ್ಥಿಗಳು ಆಧುನಿಕ ವೈದ್ಯರು (ಡಾಕ್ಟರ), ಇಂಜಿನಿಯರ್‌ಗಳಾಗುವ ಬಗ್ಗೆ ಯೋಚಿಸುವುದಿಲ್ಲ. ಮುಸ್ಲಿಮರು ತಮ್ಮ ಮಕ್ಕಳಿಗೆ ಕುರಾನ್ ಕಲಿಸಬೇಕು; ಆದರೆ ಅವರ ಸ್ವಂತ ಮನೆಯಲ್ಲಿ. ಮದರಸಾಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸುವುದು ಅವರ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಜೀವಶಾಸ್ತ್ರ, ಸಸ್ಯಶಾಸ್ತ್ರ ಇತ್ಯಾದಿಗಳನ್ನು ಕಲಿಯಲು ಆಸಕ್ತಿ ಹೊಂದಿರಬೇಕು. ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರಾಗಿದ್ದಾರೆ. ಅವರಿಗೆ ಕುರಾನ್‌ನಲ್ಲಿ ಪ್ರತಿಯೊಂದು ಪದಗಳು ಬಾಯಿಪಾಠವಿರುತ್ತದೆ. ಭಾರತದಲ್ಲಿರುವ ಎಲ್ಲಾ ಮುಸ್ಲಿಮರು ಹಿಂದೆ ಹಿಂದೂಗಳಾಗಿದ್ದರು. ಭಾರತದಲ್ಲಿ ಯಾವ ಮುಸಲ್ಮಾನರೂ ಹುಟ್ಟಿಲ್ಲ. ಭಾರತದಲ್ಲಿ ಎಲ್ಲರೂ ಹಿಂದೂಗಳೇ ಆಗಿದ್ದರು. ಹಾಗಾಗಿ ಮುಸ್ಲಿಂ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದರೆ, ನಾನು ಅವರ ಹಿಂದೂ ಪೂರ್ವಜರಿಗೆ ಸ್ವಲ್ಪ ಮನ್ನಣೆ ನೀಡುತ್ತೇನೆ.” ಎಂದು ಹೇಳಿದರು.

೨೦೨೦ ರಲ್ಲಿ, ಜಾತ್ಯತೀತ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಪಾದಿಸುವ ಅಸ್ಸಾಂ ಸರಕಾರವು ರಾಜ್ಯದ ಎಲ್ಲಾ ಸರಕಾರಿ ಮದರಸಾಗಳನ್ನು ಮುಚ್ಚಲು ಮತ್ತು ಒಂದು ವರ್ಷದೊಳಗೆ ಅವುಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸಲು ನಿರ್ಧರಿಸಿತು. ಗುವಾಹಟಿ ಉಚ್ಚನ್ಯಾಯಾಲಯವೂ ಕೂಡ ಅಸ್ಸಾಂ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

ಸಂಪಾದಕೀಯ ನಿಲುವು

ಭಾಜಪ ಆಡಳಿತವಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಅಂತಹ ಖಂಡತುಂಡ ನಿಲುವನ್ನು ತಾಳಿ ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಸಾಧಿಸಬೇಕು !