ತಮ್ಮ ಮೇಲಿನ ಅಪರಾಧದ ಮಾಹಿತಿಯನ್ನು ಮುಚ್ಚಿಟ್ಟ ಕಾರಣದಿಂದ ಯಾರನ್ನೂ ನೌಕರಿಯಿಂದ ತೆಗೆಯಲು ಸಾಧ್ಯವಿಲ್ಲ !- ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ತಮ್ಮ ಮೇಲಿನ ಅಪರಾಧದ ಮಾಹಿತಿಯನ್ನು ಮುಚ್ಚಿಟ್ಟ ಕಾರಣದಿಂದ ಯಾರನ್ನೂ ಹಿಂದೆಮುಂದೆ ಯೋಚಿಸದೇ ನೌಕರಿಯಿಂದ ತೆಗೆದು ಹಾಕುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಖಂಡಪೀಠವು ತೀರ್ಪು ನೀಡಿದೆ. ಈ ಸಂದರ್ಭದಲ್ಲಿ ದೆಹಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಪಡಿಸಿದೆ.

1. ನ್ಯಾಯಾಲಯವು ಹೇಳಿರುವುದೇನೆಂದರೆ, ಯಾವುದೇ ವ್ಯಕ್ತಿಯು ಪ್ರಕರಣದಲ್ಲಿ ದೋಷಿಯೆಂದು ನಿರ್ಧರಿಸಲ್ಪಟ್ಟಿದ್ದಾನೆಯೋ ಅಥವಾ ಇಲ್ಲವೋ ಎನ್ನುವ ವಿಚಾರವನ್ನು ಮಾಡದೇ ಕೇವಲ ಅವರ ವಿರುದ್ಧದ ಅಪರಾಧದ ಮಾಹಿತಿಯನ್ನು ಮುಚ್ಚಿಟ್ಟಿರುವುದರಿಂದ ಯಾರನ್ನೂ ಕೇವಲ ನಾಲ್ಕು ಸಾಲು ಬರೆದು ನೌಕರಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ. ಆದರೆ ನೌಕರಿಗೆ ಸೇರುವ ಮುನ್ನ ಪ್ರತಿಯೊಬ್ಬರೂ ತಮ್ಮ ಚಾರಿತ್ರ್ಯದ ವಿಷಯದಲ್ಲಿ ಸ್ವಂತ ಮಾಹಿತಿ ಮತ್ತು ವಿವರಗಳನ್ನು ಹಾಜರು

ಪಡಿಸುವ ಆವಶ್ಯಕತೆಯಿದೆ. ನೌಕರಿಗೆ ಸೇರುವ ಮೊದಲು ಯಾವುದೇ ವ್ಯಕ್ತಿ ತನ್ನ ಮೇಲಿನ ದೂರಿನ ವಿಷಯದ ಮಾಹಿತಿಯನ್ನು ಮುಚ್ಚಿಟ್ಟಿದ್ದರೂ, ಅವನ ಚಾರಿತ್ರ್ಯದ ವಿಷಯದ ಪೂರ್ವಪೀಠಿಕೆ ಮತ್ತು ತಥ್ಯವನ್ನು ಅರಿತುಕೊಂಡು ಅವನನ್ನು ಸೇವೆಯಲ್ಲಿ ಇಟ್ಟುಕೊಳ್ಳುವುದೋ ಅಥವಾ ಯಾವ ರೀತಿಯ ಕೆಲಸವನ್ನು ಕೊಡುವುದು ಎನ್ನುವ ವಿಷಯದಲ್ಲಿ ನೌಕರಿ ನೀಡುವವನು ಸೇವಾ ನಿಯಮಗಳಿಗನುಸಾರ ನಿರ್ಣಯವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.

2. ಪವನಕುಮಾರ ಹೆಸರಿನ ವ್ಯಕ್ತಿ ರೇಲ್ವೆ ರಕ್ಷಣಾ ದಳದಲ್ಲಿ ಸಿಪಾಯಿಯೆಂದು ಆಯ್ಕೆಯಾಗಿದ್ದನು. ಪ್ರಶಿಕ್ಷಣ ನಡೆದಿರುವಾಗಲೇ ಅವನನ್ನು ತಕ್ಷಣವೇ ನೌಕರಿಯಿಂದ ತೆಗೆದುಹಾಕಿರುವುದಾಗಿ ರೇಲ್ವೆ ರಕ್ಷಣಾ ದಳದ ಆಡಳಿತ ವರ್ಗವು ಆದೇಶ ಹೊರಡಿಸಿತು. ಭರ್ತಿಯಾಗುವ ಮೊದಲು ಅವನು ತನ್ನ ಮೇಲಿನ ಅಪರಾಧದ ಮಾಹಿತಿಯನ್ನು ಮುಚ್ಚಿಟ್ಟಿದ್ದರಿಂದ ಅವನ ವಿರುದ್ಧ ಕ್ರಮ ಜರುಗಿಸಲಾಗಿದೆಯೆಂದು ಆಡಳಿತವರ್ಗವು ನ್ಯಾಯಾಲಯಕ್ಕೆ ಸ್ಪಷ್ಟೀಕರಣವನ್ನು ನೀಡಿತ್ತು.

3. ಇದಕ್ಕೆ ನ್ಯಾಯಾಲಯವು ಹೇಳಿರುವುದೇನೆಂದರೆ, ಪವನಕುಮಾರನ ವಿರುದ್ಧದ ದೂರಿನ ಸ್ವರೂಪ ಅತ್ಯಂತ ಸೌಮ್ಯರೂಪದ್ದಾಗಿದೆ. ತಪ್ಪುಕಲ್ಪನೆಯಿಂದ ಆ ದೂರನ್ನು ದಾಖಲಿಸಲಾಗಿತ್ತು. ಇದರಿಂದ ಅವನನ್ನು ಸೇವೆಯಿಂದ ತೆಗೆದು ಹಾಕುವ ಆಡಳಿತ ವರ್ಗದ ನಿರ್ಣಯ ಸಮರ್ಪಕವಲ್ಲ. ಆ ನಿರ್ಣಯ ಸಮರ್ಪಕವಾಗಿದೆಯೆಂದು ನಿರ್ಧರಿಸಿದ ತೀರ್ಪು ಕೂಡ ತಪ್ಪಾಗಿದೆ. ಆದ್ದರಿಂದ ಅದನ್ನು ರದ್ದುಪಡಿಸುತ್ತಿದ್ದೇವೆ ಎಂದು ತಿಳಿಸಿದೆ.