ಮುಸಲ್ಮಾನ ಪುರುಷರಿಗೆ ಬಹುಪತ್ನಿತ್ವದ ಅನುಮತಿ ನೀಡಬಾರದು !- ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಸಾಂದರ್ಭಿಕ ಚಿತ್ರ

ನವ ದೆಹಲಿ – ಮುಸಲ್ಮಾನ ಪುರುಷರಿಗೆ ಅವರ ಮೊದಲ ಪತ್ನಿಯ ಅನುಮತಿಯಿಲ್ಲದೇ ಎರಡನೇ ಅಥವಾ ಬಹುವಿವಾಹ ಮಾಡಿಕೊಳ್ಳಲು ಅನುಮತಿಯನ್ನು ನೀಡಬಾರದು ಎಂದು ಕೋರಿ, ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ರೇಶ್ಮಾ ಹೆಸರಿನ 28 ವರ್ಷದ ಮುಸಲ್ಮಾನ ಮಹಿಳೆಯು ದಾಖಲಿಸಿದ್ದಾಳೆ. ಇದಕ್ಕೆ ಉತ್ತರಿಸಲು ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನೊಟೀಸು ಕಳುಹಿಸಿದೆ. ಈ ಪ್ರಕರಣದ ಮುಂದಿನ ಆಲಿಕೆ 23 ಅಗಸ್ಟ ನಡೆಯಲಿದೆ.

ಈ ಮನವಿಯಲ್ಲಿ,

1. ಇದು ಮಹಿಳೆಯರ ದೃಷ್ಟಿಯಿಂದ ಹಿಮ್ಮೆಟ್ಟುವಿಕೆ ಮತ್ತು ಅಪಮಾನಕಾರಿ ಪದ್ಧತಿಯಾಗಿದೆ. ಬಹುಪತ್ನಿತ್ವ ಸಂವಿಧಾನ ವಿರೋಧಿ, ಶರಿಯತ ವಿರೋಧಿ ಮತ್ತು ಅನಧಿಕೃತವಾಗಿದೆ, ಬಹುಪತ್ನಿತ್ವಕ್ಕೆ ಶರಿಯತ್ ನಲ್ಲಿ ಕೆಲವೊಂದು ಪರಿಸ್ಥಿತಿಯಲ್ಲಿ ಮಾತ್ರ ಒಪ್ಪಿಗೆಯನ್ನು ನೀಡಲಾಗಿದೆ.

2. ಮುಸಲ್ಮಾನ ಮಹಿಳೆಯರಿಗೆ ಸಂಬಂಧಿಸಿರುವ ಈ ಸವಾಲನ್ನು ಕಾನೂನಿನ ಮೂಲಕ ನಿಯಂತ್ರಿಸುವ ಆವಶ್ಯಕತೆಯಿದೆ. ಮುಸಲ್ಮಾನ ಪುರುಷರಿಗೆ ಒಂದು ವಿವಾಹದ ಬಳಿಕ ಪುನಃ ಮದುವೆಯಾಗಬೇಕಾಗಿದ್ದರೆ, ಮೊದಲ ಪತ್ನಿಯಿಂದ ಲಿಖಿತ ಅನುಮತಿಯನ್ನು ಮತ್ತು ಸರಕಾರಿ ಅಧಿಕಾರಿಯಿಂದ ಪ್ರಮಾಣೀಕರಿಸಿದ ಪ್ರಮಾಣಪತ್ರವನ್ನು ತೆಗೆದುಕೊಳ್ಳಬೇಕು. ಮತ್ತು ಎಲ್ಲ ಪತ್ನಿಯರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಅವನು ಸಕ್ಷಮನಾಗಿರಬೇಕು. ಮುಸಲ್ಮಾನ ಪುರುಷರು ವಿವಾಹವಾಗುವಾಗ ಅದರ ಹಿಂದಿರುವ ವಿವಾಹದ ಕಾರಣದ ಕುರಿತು ಮಾಹಿತಿಯನ್ನು ಘೋಷಿಸಬೇಕು. ಮುಸಲ್ಮಾನರ ವಿವಾಹದ ನೊಂದಣಿಯನ್ನು ಕ್ರಮಬದ್ಧಗೊಳಿಸಲು ಕಾನೂನು ನಿರ್ಮಿಸುವ ಆವಶ್ಯಕತೆಯಿದೆ ಎಂದು ಕೂಡ ಹೇಳಲಾಗಿದೆ.