ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ವಿಜಯಪುರದಲ್ಲಿ ಹಿಂದೂ ರಾಷ್ಟ್ರ ಅಧಿವೇಶನ
ವಿಜಯಪುರ : `ಕಳೆದ ಕೆಲವು ವರ್ಷಗಳ ಹಿಂದೆ ಹಿಂದೂಗಳು ಬಹಿರಂಗವಾಗಿ ಹಿಂದೂ ಧರ್ಮದ ಮಾತಾಡಿದರೆ ಅವರ ಮೇಲೆ ಪ್ರಕರಣಗಳು ದಾಖಲಿಸುವಂತ ಕಾಲವಿತ್ತು. ಅದೇ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯವರು 2023 ರಲ್ಲಿ ಈ ದೇಶ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳುತ್ತಿದ್ದರು. ಇದನ್ನು ಕೇಳಿದವರು ಇದು ಹೇಗೆ ಸಾಧ್ಯ ಎಂದು ಹಾಸ್ಯಾಸ್ಪದವಾಗಿ ಮಾತಾಡುವ ಕಾಲವಿತ್ತು. ಆದರೆ ಈಗ ನಾವೆಲ್ಲ ನೋಡುತ್ತಿರುವ ಹಾಗೆ ಜಗತ್ತು ನಿಧಾನವಾಗಿ ಹಿಂದೂ ರಾಷ್ಟ್ರದತ್ತ ಸಾಗುತ್ತಿದೆ, ಸದ್ಯ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಹಿಂದುತ್ವದ ಧೋರಣೆಯಿರುವ ಸರ್ಕಾರವಿದೆ ಎಂದು ಹಿಂದೂಗಳೂ ನಿದ್ರೆಯಲ್ಲಿರದೇ ಸದಾ ಜಾಗೃತರಾಗಿರಬೇಕು ಮತ್ತು ಸಂಘಟಿತರಾಗಬೇಕು ಇಲ್ಲದಿದ್ದರೆ ಘಜನಿ, ಬಾಬರ್‍ನ ಕಾಲ ಮತ್ತೆ ಬರಬಹುದು. ಕಳೆದ ಎರಡು ವರ್ಷಗಳಿಂದ ಕರೋನಾ ಮಹಾಮಾರಿಯಿಂದಾಗಿ ಈ ರೀತಿಯ ಕಾರ್ಯಕ್ರಮ ಮಾಡಲು ಸಾಧ್ಯವಾಗಲಿಲ್ಲ ಇಂದು ಹಿಂದೂ ಜನಜಾಗೃತಿ ಸಮಿತಿ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಿದ್ದು ತುಂಬಾ ಸಂತೋಷ ತಂದಿದೆ’, ಎಂದು ಜೇವರ್ಗಿಯ ಕರುಣೇಶ್ವರ ಮಠದ ಪೂ. ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು
ಅವರು ನಗರದ ಮಾಹೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಮಾರ್ಚ್ 27 ರ ಬೆಳಿಗ್ಗೆ 10.30ಕ್ಕೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ್ದ `ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು. ಪೂ. ಸಿದ್ದಲಿಂಗ ಮಹಾಸ್ವಾಮಿಯವರು ದೀಪ ಪ್ರಜ್ವಲನೆ ಮಾಡಿ ಅಧಿವೇಶನದ ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ವಿಜಯ ರೇವಣಕರ ಇವರು, `ಸದ್ಯ ರಾಷ್ಟ್ರ ಧರ್ಮದ ಮೇಲೆ ಆಗುತ್ತಿರುವ ಆಘಾತಗಳನ್ನು ತಡೆಗಟ್ಟಲು ಎಲ್ಲಾ ಹಿಂದೂ ಸಂಘಟನೆಗಳು ಸಂಘಟಿತರಾಗುವುದೇ ಏಕೈಕ ಪರಿಹಾರವಾಗಿದೆ. ಈ ಕಾರ್ಯದಲ್ಲಿ ಪ್ರತಿಯೊಬ್ಬ ಹಿಂದೂವೂ ತನು ಮನ ಧನದ ಮಾಧ್ಯಮದಿಂದ ಸಹಭಾಗಿಯಾಗಬೇಕಾಗಿದೆ ಎಂದು ಕರೆ ನೀಡಿದರು. ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಕಾಶಿನಾಥ ಪ್ರಭು ಇವರು ಮಾತನಾಡುತ್ತಾ, `ವಿಶ್ವಕಲ್ಯಾಣಕಾರಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಕೇವಲ ಶಾರೀರಿಕ, ಮಾನಸಿಕ, ಬೌದ್ಧಿಕ ಬಲವೊಂದಿದ್ದರೆ ಸಾಲುವುದಿಲ್ಲ ಅದರೊಂದಿಗೆ ಆಧ್ಯಾತ್ಮಿಕ ಬಲವಿರಬೇಕು. ಆದ್ದರಿಂದ ಎಲ್ಲರೂ ಆಧ್ಯಾತ್ಮಿಕ ಸಾಧನೆ ಮಾಡಬೇಕು’, ಎಂದು ಹೇಳಿದರು.
ಈ ಅಧಿವೇಶನದಲ್ಲಿ ದೇವದುರ್ಗ, ಮಾನವಿ, ಸಿಂಧನೂರು, ಬದಾಮಿ, ಮುದ್ದೇಬಿಹಾಳ, ಸಿಂದಗಿ, ಬಾಗಲಕೋಟ, ಕೆರೂರು, ವಿಜಯಪುರ ಹಾಗೂ ಇನ್ನೂ ಅನೇಕ ಕಡೆಗಳಿಂದ ಸುಮಾರು 50 ಕ್ಕೂ ಹೆಚ್ಚು ಹಿಂದೂಪರ ಸಂಘಟನೆಗಳ ಪ್ರತಿನಿಧಿಗಳು, ವಕೀಲರು, ಉದ್ಯಮಿಗಳು ಉಪಸ್ಥಿತರಿದ್ದರು.