ಇಂಡಿಯಾ ಗೇಟ್’ನಲ್ಲಿರುವ ‘ಅಮರ ಜವಾನ್ ಜ್ಯೋತಿ’ಯು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯಲ್ಲಿ ವಿಲೀನ !

ನವ ದೆಹಲಿ : ರಾಜಧಾನಿ ದೆಹಲಿಯ ‘ಇಂಡಿಯಾ ಗೇಟ್’ನಲ್ಲಿರುವ ‘ಅಮರ ಜವಾನ್ ಜ್ಯೋತಿ’ಯನ್ನು ಜನವರಿ ೨೧ ರಂದು ಹತ್ತಿರದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಯಿತು. ಅಮರ ಜವಾನ ಜ್ಯೋತಿಯನ್ನು ಮಧ್ಯಾಹ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತಂದ ನಂತರ ಅದನ್ನು ಏರ್ ಮಾರ್ಷಲ್ ಬಲಭದ್ರ ರಾಧಾಕೃಷ್ಣ ಅವರ ಕೈಯಿಂದ ಜ್ಯೋತಿಯಲ್ಲಿ ವಿಲೀನಗೊಳಿಸಲಾಯಿತು. ಅಮರ ಜವಾನ ಜ್ಯೋತಿ ಸ್ಮಾರಕವನ್ನು ೧೯೭೧ ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಹುತಾತ್ಮರಾದ ೩ ಸಾವಿರದ ೮೪೩ ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ನಿರ್ಮಿಸಲಾಗಿತ್ತು. ಇದನ್ನು ಮೊದಲು ೧೯೭೨ ರಲ್ಲಿ ಬೆಳಗಿಸಲಾಗಿತ್ತು. ಇದನ್ನು ೨೬ ಫೆಬ್ರವರಿ ೧೯೭೨ ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಉದ್ಘಾಟಿಸಿದ್ದರು.

ಕೇಂದ್ರದ ಭಾಜಪ ಸರಕಾರವು ೨೦೧೯ ರಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸಿತು. ದೇಶದ ಸ್ವಾತಂತ್ರ್ಯದ ನಂತರ ೧೯೪೭ ರಲ್ಲಿ ಹುತಾತ್ಮರಾದ ೨೬ ಸಾವಿರದ ೪೬೬ ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ಇದನ್ನು ನಿರ್ಮಿಸಲಾಗಿದೆ.

ಇಂಡಿಯಾ ಗೇಟ್‌ನ ಇತಿಹಾಸ !

೪೨ ಮೀಟರ್ ಎತ್ತರದ ‘ಇಂಡಿಯಾ ಗೇಟ್’ ಅನ್ನು ಬ್ರಿಟಿಷ್ ಸರಕಾರ ನಿರ್ಮಿಸಿತ್ತು. ೧೯೧೪ ಮತ್ತು ೧೯೨೧ ರ ನಡುವಿನ ಮೊದಲ ವಿಶ್ವ ಯುದ್ಧ ಮತ್ತು ಮೂರನೇ ಅಫ್ಘಾನ್ ಯುದ್ಧದ ಸಮಯದಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಹುತಾತ್ಮರಾದ ೮೪ ಸಾವಿರ ಭಾರತೀಯ ಸೈನಿಕರ ಸ್ಮರಣಾರ್ಥ ಇದನ್ನು ಬ್ರಿಟಿಷ್ ಸರಕಾರವು ನಿರ್ಮಿಸಿತ್ತು. ಆ ಸೈನಿಕರ ಹೆಸರನ್ನೂ ಸಹ ಅದರ ಮೇಲೆ ಕೆತ್ತಲಾಗಿದೆ.