ಶುದ್ಧ ಅಂತಃಕರಣದಿಂದ ಮಾಡಿದ ಸೇವೆಯು ಗುರುಚರಣಗಳಲ್ಲಿ ಸಮರ್ಪಣೆಯಾಗುತ್ತದೆ – ಪೂಜ್ಯ ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಪೂ. ರಮಾನಂದ ಗೌಡ

ಮಂಗಳೂರು : ‘ನಿರ್ಮಲ ಮನಸ್ಸಿನಲ್ಲಿ ಭಗವಂತನು ವಾಸ ಮಾಡುತ್ತಾನೆ. ಅಂತಃಕರಣದಲ್ಲಿರುವ ನಮ್ಮ ದೋಷ ಅಹಂಗಳು ನಷ್ಟವಾದರೆ ನಮ್ಮ ಮನಸ್ಸು ಶುದ್ಧವಾಗುತ್ತದೆ. ಶುದ್ಧ ಅಂತಃಕರಣದಿಂದ ಮಾಡಿದ ಸೇವೆಯು ಗುರುಚರಣಗಳಲ್ಲಿ ಸಮರ್ಪಣೆಯಾಗುತ್ತದೆ’ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು.

ಅವರು ಇತ್ತೀಚೆಗೆ ಆಯೋಜಿಸಲಾಗಿದ್ದ ‘ಜ್ಞಾನಶಕ್ತಿಯ ಪ್ರಸಾರವನ್ನು ನಮ್ಮ ಸಾಧನೆಯೆಂದು ಹೇಗೆ ಮಾಡಬಹುದು ?’ ಎಂಬ ವಿಷಯದಲ್ಲಿ ‘ಆನ್‌ಲೈನ್’ ಮೂಲಕ ಮಾಡಿದ ಮಾರ್ಗದರ್ಶನದಲ್ಲಿ ಮಾತನಾಡುತ್ತಿದ್ದರು. ಸುಮಾರು ೧೩೪೨ ಮಂದಿ ಈ ಮಾರ್ಗದರ್ಶನದ ಲಾಭವನ್ನು ಪಡೆದರು. ಅದೇ ರೀತಿ ಸನಾತನ ನಿರ್ಮಿತ ಗ್ರಂಥಗಳನ್ನು ಮನೆಮನೆಗೆ ತಲುಪಿಸುವ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದಲ್ಲಿ ಇಲ್ಲಿಯ ತನಕ ಆಗಿರುವ ಪ್ರಯತ್ನಗಳ ವರದಿಯನ್ನು ಹಿಂದೂ ಜಾನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ವಿಜಯ ರೇವಣಕರ್ ಇವರು ತಿಳಿಸಿದರು. ಸತ್ಸಂಗದ ಉದ್ದೇಶವನ್ನು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಕಾಶಿನಾಥ ಪ್ರಭು ಅವರು ಹೇಳಿದರು.

ಪೂಜ್ಯ ರಮಾನಂದ ಗೌಡ ಇವರು ಮಾರ್ಗದರ್ಶನದಲ್ಲಿ ಮಂಡಿಸಿದ ಮಹತ್ವದ ಅಂಶಗಳು

ಸನಾತನ ನಿರ್ಮಿತ ಗ್ರಂಥಗಳೆಂದರೆ ಕಲಿಯುಗದ ಭಗವದ್ಗೀತೆಯಾಗಿದೆ. ಶಬ್ದಜನ್ಯ ಜ್ಞಾನವನ್ನು ಬುದ್ಧಿಯಿಂದ ಗ್ರಹಣ ಮಾಡಬಹುದು. ಆದರೆ ಪರಾತ್ಪರ ಗುರು ಡಾ. ಆಠವಲೆಯವರ ಜ್ಞಾನಶಕ್ತಿಯು ಬುದ್ಧಿಅಗಮ್ಯವಾಗಿದೆ. ಅಂದರೆ ಬುದ್ಧಿಯ ಆಚೆಗಿದ್ದು ಅದು ಶಬ್ದಾತೀತ ಕಾರ್ಯವನ್ನು ಮಾಡುತ್ತದೆ. ಸನಾತನ ಗ್ರಂಥವನ್ನು ಯಾರು ಅಧ್ಯಯನ ಮಾಡುತ್ತಾರೋ ಅವರಿಗೆ ಈ ಗ್ರಂಥದಲ್ಲಿರುವ ಜ್ಞಾನ ಮತ್ತು ಚೈತನ್ಯದಿಂದಾಗಿ ಅವರ ಮುಂದಿನ ಸಾಧನೆಯ ಮಾರ್ಗಕ್ರಮಣವು ವೇಗವಾಗಿ ಆಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ಗ್ರಂಥಗಳು ದೈವೀಸ್ರೋತದಂತೆ ಕಾರ್ಯಮಾಡುತ್ತದೆ. ಇದು ಕೇವಲ ಗ್ರಂಥವಾಗಿರದೆ ಈಶ್ವರನ ವಾಣಿಯಾಗಿದೆ. ಅದರಲ್ಲಿ ಈಶ್ವರೀ ಚೈತನ್ಯವೇ ತುಂಬಿರುತ್ತದೆ. ಸಮಾಜಕ್ಕೆ ಜ್ಞಾನವನ್ನು ನೀಡುವುದರ ಮೂಲಕ ಸಮಾಜದಲ್ಲಿರುವ ಅಂಧಃಕಾರವನ್ನು ದೂರ ಮಾಡಿ ಜೀವವನ್ನು ಪ್ರಕಾಶದೆಡೆಗೆ ಕರೆದುಕೊಂಡು ಹೋಗುತ್ತದೆ. ಕಾಲ ಮಹಿಮೆಗನುಸಾರ ಜ್ಞಾನಶಕ್ತಿ ಪ್ರಸಾರ ಮಾಡುವುದು ಎಂದರೆ ಗುರುಗಳ ಸ್ತುತಿ ಮಾಡುವುದೇ ಆಗಿದೆ. ಆದುದರಿಂದ ಈ ಗ್ರಂಥಗಳನ್ನು ನಾವು ಆದಷ್ಟು ಹೆಚ್ಚೆಚ್ಚು ಜನರಿಗೆ ತಲುಪಿಸುವ ಸೇವೆಯನ್ನು ಮಾಡೋಣ.

ಅಲ್ಲದೇ ಸನಾತನ ನಿರ್ಮಿತ ಗ್ರಂಥಗಳನ್ನು ಹೆಚ್ಚೆಚ್ಚು ಜನರವರೆಗೆ ತಲುಪಿಸಿ ಅದರ ಲಾಭ ಪಡೆಯಬೇಕೆಂದೂ ಕರೆ ನೀಡಿದರು.