ಪಣಜಿ, ಸೆಪ್ಟೆಂಬರ್ 7(ವಾರ್ತೆ.) – ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸನ ಶ್ರೀಗಣೇಶ ಮೂರ್ತಿಯ ಮೇಲೆ ನಿರ್ಬಂಧ ಹೇರಲಾಗಿದೆ; ಆದರೆ ಇಂತಹ ಮೂರ್ತಿಗಳು ರಾಜ್ಯದಲ್ಲಿಲ್ಲ ಎಂದು ಖಡಾಖಂಡಿತವಾಗಿ ಹೇಳುವುದು ಕಠಿಣವಾಗಿದೆ; ಏಕೆಂದರೆ ಗೋವಾ ರಾಜ್ಯ ಮಾಲಿನ್ಯ ಮಂಡಳಿಯು ರಾಜ್ಯದಾದ್ಯಂತ ಮೂರ್ತಿಗಳ ಮಾದರಿಯನ್ನು ಸಂಗ್ರಹಿಸಿಲ್ಲ. ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸನ ಶ್ರೀಗಣೇಶ ಮೂರ್ತಿಯ ಮಾರಾಟವಾಗಿರುವ ಬಗ್ಗೆ ಇನ್ನೂ ಯಾವುದೇ ದೂರು ಬಂದಿಲ್ಲ ಎಂದು ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹೇಳಿದೆ. (ದೂರು ಬಂದ ನಂತರವೇ ಮಾಲಿನ್ಯ ನಿಯಂತ್ರಣ ಮಂಡಳಿಯು ತಪಾಸಣೆ ಮಾಡಲಿದೆಯೇ ? ಇಂತಹ ಕಾರ್ಯಾಚರಣೆಯಿಂದ ಮಾಲಿನ್ಯವನ್ನು ಹೇಗೆ ತಡೆಯಬಹುದು? ಲಂಚ ಕೊಡುವವನು ಲಂಚ ತೆಗೆದುಕೊಳ್ಳುವವರ ಬಗ್ಗೆ ದೂರು ನೀಡುವುದಿಲ್ಲ, ಹಾಗೆಯೇ ಪ್ಲಾಸ್ಟರ್ ಆಫ್ ಪ್ಯಾರಿಸಿನ ಶ್ರೀಗಣೇಶಮೂರ್ತಿಯನ್ನು ಖರೀದಿಸುವವರು ಮತ್ತು ಅದರ ಮಾರಾಟಗಾರರು ಸುಮ್ಮನಿರುತ್ತಾರೆ !- ಸಂಪಾದಕರು)
ರಾಜ್ಯ ಸರಕಾರವು ಪ್ಲಾಸ್ಟರ್ ಆಫ್ ಪ್ಯಾರಿಸನಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಗುರುತಿಸಿ ‘ಪರಿಸರ ಸಂರಕ್ಷಣಾ ಕಾಯಿದೆ 1986’ಯ ಮೂಲಕ ಪ್ಲಾಸ್ಟರ್ ಆಫ್ ಪ್ಯಾರಿಸನ ಶ್ರೀಗಣೇಶ ಮೂರ್ತಿಯ ಮಾರಾಟದ ಮೇಲೆ ನಿರ್ಬಂಧ ಹೇರಿದೆ. ಈ ಕಾಯಿದೆಯನ್ನು ಉಲ್ಲಂಘಿಸುವವರಿಗೆ 1 ಲಕ್ಷ ರೂಪಾಯಿಗಳ ದಂಡ ಮತ್ತು ಐದು ವರ್ಷಗಳ ಶಿಕ್ಷೆಯಾಗಬಹುದು. ಈ ನಿರ್ಬಂಧದ ಆದೇಶದ ಮೇರೆಗೆ ಕಠೋರ ಕಾರ್ಯಾಚರಣೆ ಮಾಡುವುದಾಗಿ ಸರಕಾರವು ಈ ಹಿಂದೆ ಘೋಷಿಸಿತ್ತು. ಕಳೆದ ಅನೇಕ ವರ್ಷಗಳಿಂದ ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿಜ್ಞಾನ ತಂತ್ರಜ್ಞಾನ ಮತ್ತು ಪರ್ಯಾವರಣ ಖಾತೆ ಹಾಗೂ ಗೋವಾ ಹಸ್ತಕಲಾ ಮಹಾಮಂಡಳಿಯು ಒಟ್ಟಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ ಜೇಡಿಮಣ್ಣಿನಿಂದ ಶ್ರೀಗಣೇಶ ಮೂರ್ತಿಯನ್ನು ತಯಾರಿಸಲು ಪ್ರೋತ್ಸಾಹಿಸಿವೆ. ಈ ಬಗ್ಗೆ ಮೂರ್ತಿಕಾರರಲ್ಲಿ ಜಾಗೃತಿಯಾಗಿರುವುದರಿಂದ ಇನ್ನು ಮುಂದೆ ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಶ್ರೀಗಣೇಶ ಮೂರ್ತಿಗಳು ಯಾವುದೇ ಚಿತ್ರಶಾಲೆಯಲ್ಲಿ ಕಂಡುಬರುವುದಿಲ್ಲ ಹಾಗೂ ಭಕ್ತರು ಇದರ ಪೂಜೆಯನ್ನು ಮಾಡುವುದಿಲ್ಲ ಎಂದು ಸರಕಾರದ ಅಪೇಕ್ಷೆಯಿದೆ.
ಗೋವಾ ಹಸ್ತಕಲಾ ಮಹಾಮಂಡಳಿಯ ಮಹಾವ್ಯವಸ್ಥಾಪಕ ಡಾಮ್ನಿಕ ಫರ್ನಾಂಡಿಸ್ ಇವರು ‘ಸದ್ಯ ಗೋವಾ ಹಸ್ತಕಲಾ ಮಹಾಮಂಡಳಿಯು ಶ್ರೀಗಣೇಶ ಮೂರ್ತಿಯನ್ನು ಬೇರೆ ಬೇರೆ ಸ್ಥಳಗಳಲ್ಲಿ ಹೋಗಿ ನೋಡುತ್ತಿದೆ ಮತ್ತು ಮಹಾಮಂಡಳಿಗೆ ಇಲ್ಲಿಯವರೆಗೆ ಕೇವಲ ಜೇಡಿಮಣ್ಣಿನ ಶ್ರೀಗಣೇಶಮೂರ್ತಿಗಳು ಕಂಡುಬಂದಿವೆ. ಪ್ಲಾಸ್ಟರ್ ಆಫ್ ಪ್ಯಾರಿಸನ ಮೂರ್ತಿಗಳು ಕಂಡುಬಂದಿಲ್ಲ’ ಎಂದು ಹೇಳಿದ್ದಾರೆ. ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಗಣೇಶ ಶೇಟಗಾವಕರ ಇವರು ‘ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣೇಶ ಮೂರ್ತಿಯ ಬಗ್ಗೆ ಪೊಲೀಸರ ಬಳಿ ಇನ್ನೂ ಒಂದು ದೂರೂ ಬಂದಿಲ್ಲ. ಇಂತಹ ಮೂರ್ತಿಗಳು ಮಾರಾಟಕ್ಕೆ ಬಂದರೆ ಪೊಲೀಸರು ಅವರನ್ನು ವಶಕ್ಕೆ ಪಡೆದು ಮಹಾಮಂಡಳಕ್ಕೆ ಕಳಿಸುತ್ತಾರೆ’ ಎಂದು ಹೇಳಿದರು.