75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯವರಿಂದ ಪಾಕಿಸ್ತಾನ ಮತ್ತು ಚೀನಾಕ್ಕೆ ಎಚ್ಚರಿಕೆ !

ಇದು ನವ ಭಾರತವಾಗಿದೆ, ಹಾಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲೆವು !

ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವ ದೆಹಲಿ : ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಗಳನ್ನು ನಡೆಸುವ ಮೂಲಕ ದೇಶವು ‘ಇದು ಹೊಸ ಭಾರತವಾಗಿದೆ’, ಎಂದು ತನ್ನ ಶತ್ರುಗಳಿಗೆ ತೋರಿಸಿದೆ. ಸಾಮ್ರಾಜ್ಯವಾದದ ಕುಟಿಲ ಕನಸುಗಳನ್ನು ಕಾಣುವವರಿಗೆ ಭಾರತವು ಎಚ್ಚರಿಕೆಯನ್ನು ನೀಡುತ್ತಾ `ಭಾರತವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲದು’, ಎಂಬ ಸಂದೇಶವನ್ನು ನೀಡಿದೆ, ಎಂದು ಪ್ರಧಾನಿ ಮೋದಿಯವರು ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಧ್ವಜಾರೋಹಣ ಮಾಡಿದ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಿ ಮೋದಿಯವರ ಮಾರ್ಗದರ್ಶನದ ಕೆಲವು ಪ್ರಮುಖ ಅಂಶಗಳು

1. ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿ ಮಾಡಲು, ಭಾರತೀಯ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಮತ್ತು ನಮ್ಮ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ನೀಡಲು ನಮ್ಮ ಪ್ರಯತ್ನ ನಡೆಯುತ್ತಿದೆ. ದೇಶದ ರಕ್ಷಣೆಗಾಗಿ ಸಿದ್ಧರಾಗಿರುವ ಸೇನೆಯ ಕೈಗಳನ್ನು ಬಲಪಡಿಸುವಂತಹ ಯಾವುದೇ ಅವಕಾಶಗಳನ್ನು ನಾವು ಬಿಟ್ಟು ಕೊಡುವುದಿಲ್ಲ. ಸ್ವದೇಶಿ ವಿಮಾನವಾಹಕ ನೌಕೆ `ವಿಕ್ರಾಂತ್’ ಅನ್ನು ಸಮುದ್ರದಲ್ಲಿ ಪರೀಕ್ಷಿಸಲಾಗುತ್ತಿದೆ. ಇಂದು ಭಾರತವು ತನ್ನದೇ ಆದ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುತ್ತಿದೆ.

2. ಕೊರೊನಾದ ಕಾಲದಲ್ಲಿ ಭಾರತದ ಪ್ರಯತ್ನಗಳನ್ನು ಜಗತ್ತು ನೋಡಿದೆ ಮತ್ತು ಪ್ರಶಂಸಿಸಿದೆ. ಇಂದು ಜಗತ್ತು ಭಾರತದತ್ತ ಹೊಸ ದೃಷ್ಟಿಕೋನದಿಂದ ನೋಡುತ್ತಿದೆ. ನಮ್ಮ ವಿಜ್ಞಾನಿಗಳು ಭಾರತಕ್ಕೆ ಲಸಿಕೆಗಳನ್ನು ಅಭಿವೃದ್ಧಿಪಡಿಸಿ ನೀಡಿದರು. ಇಂದು ನಮಗೆ ಲಸಿಕೆಗಳಿಗಾಗಿ ಯಾರನ್ನೂ ಅವಲಂಬಿಸಬೇಕಾಗಲಿಲ್ಲ.

3. ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ, ನಾನು ‘ನ್ಯಾಶನಲ್ ಹೈಡ್ರೋಜನ್ ಮಿಷನ್’ಅನ್ನು ಘೋಷಿಸುತ್ತೇನೆ. ಭಾರತವನ್ನು ‘ಗ್ರೀನ್ ಹೈಡ್ರೋಜನ್’ನ ಕೇಂದ್ರ(ಹಬ್)ವನ್ನಾಗಿಸಲು ಪ್ರಯತ್ನಿಸಬೇಕು. ಪರಿಸರವನ್ನು ರಕ್ಷಿಸಲು, ದೇಶದ ರೈಲ್ವೆಯನ್ನು ಶೇ. 100 ರಷ್ಟು ವಿದ್ಯುಚ್ಛಕ್ತಿಯಲ್ಲಿ ನಡೆಸುವ ಕೆಲಸ ನಡೆಯುತ್ತಿದೆ. 2030 ರ ವೇಳೆಗೆ ಈ ಗುರಿಯನ್ನು ಸಾಧಿಸಲಾಗುವುದು.

4. ಮುಂದಿನ ದಿನಗಳಲ್ಲಿ, ‘ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಯೋಜನೆ’ಯ ಅಡಿಯಲ್ಲಿ, 100 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳ ಮೂಲಕ ಯುವಕರಿಗೆ ಅನೇಕ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಇದು ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯ ಹಾಕುವ ಯೋಜನೆಯಾಗಿದೆ.

5. ಹೊಸ ‘ವಂದೇ ಭಾರತ’ ರೈಲುಗಳು ದೇಶದ ಮೂಲೆ ಮೂಲೆಯನ್ನು ಜೋಡಿಸಲಿವೆ.

6. ಜಮ್ಮು – ಕಾಶ್ಮೀರದಲ್ಲಿಯೂ ವಿಧಾನಸಭಾ ಚುನಾವಣೆಯ ಸಿದ್ಧತೆಯನ್ನು ಮಾಡಲಾಗುತ್ತಿದೆ. ಲಡಾಖ್‍ನಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. `ಸಿಂಧು ಸೆಂಟ್ರಲ್ ಯೂನಿವರ್ಸಿಟಿ’ಯಿಂದಾಗಿ ಲಡಾಖ್ ಉನ್ನತ ಶಿಕ್ಷಣದ ಕೇಂದ್ರವಾಗಲಿದೆ.

7. ಇದು ಕೇವಲ 75 ವರ್ಷದ ಸ್ವಾತಂತ್ರ್ಯದ ಆಚರಣೆಯಲ್ಲ, ಬದಲಾಗಿ ಈಗ ಪರಾಕಾಷ್ಠೆಯ ಪರಿಶ್ರಮ ಪಡುವ ಸಮಯವಾಗಿದೆ. ದೇಶದ ಅಭಿವೃದ್ಧಿಗಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ನಮಗೆ ಎಲ್ಲಾ ನಾಗರಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಧುನಿಕ ಭಾರತವನ್ನು ನಿರ್ಮಿಸಬೇಕಾಗಿದೆ.

8. ಎಲ್ಲಾ ಸೈನ್ಯ ಶಾಲೆಗಳ ಬಾಗಿಲುಗಳನ್ನು ಈಗ ಬಾಲಕಿಯರಿಗೂ ತೆರೆಯಲಾಗುವುದು. ಪ್ರಸ್ತುತ ದೇಶದಲ್ಲಿ 33 ಸೈನ್ಯ ಶಾಲೆಗಳಿವೆ.

‘ಗ್ರೀನ್ ಹೈಡ್ರೋಜನ್’ ಎಂದರೇನು ?

ಅಮೇರಿಕನ್ ಜಾಲತಾಣ `ಫೋಬ್ರ್ಸ್’ ಪ್ರಕಾರ, ಪ್ರಸ್ತುತ ವಿವಿಧ ಕಾರ್ಖಾನೆಗಳಲ್ಲಿ ಬಳಸಲಾಗುವ ಹೈಡ್ರೋಜನ್ ಇದು ‘ಗ್ರೇ ಹೈಡ್ರೋಜನ್’ ಎಂದು ಪ್ರಚಲಿತವಾಗಿದೆ. ಈ ಹೈಡ್ರೋಜನ್‍ಅನ್ನು ಉತ್ಪಾದಿಸುವಾಗ ಉತ್ಪಾದನೆಯಾದ ಹೈಡ್ರೋಜನ್‍ನ ಪ್ರಮಾಣಕ್ಕಿಂತ 9 ಪಟ್ಟು ಹೆಚ್ಚು ಹಾನಿಕರ `ಕಾರ್ಬನ್ ಡೈಆಕ್ಸೈಡ್’ ಅನ್ನು ಉತ್ಪಾದಿಸುತ್ತದೆ. ಈ ಹೈಡ್ರೋಜನ್‍ನ ಉತ್ಪಾದನೆಯಿಂದ ಮಾಲಿನ್ಯವು ಹೆಚ್ಚಾಗುತ್ತದೆ. ಇದಕ್ಕೆ ಪರಿಹಾರವೆಂದು ತಯಾರಿಸಲಾದ ಕಾರ್ಬನ್ ಡೈಆಕ್ಸೈಡ್ ಅನ್ನು ಪೃಥ್ವಿಯಲ್ಲಿ ಆಳದಲ್ಲಿ ಹೂಳುವ ದೃಷ್ಟಿಯಿಂದ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಕ್ರಿಯೆಯನ್ನು ಬಳಸಿಕೊಂಡು ತಯಾರಾದ ಹೈಡ್ರೋಜನ್ ಅನ್ನು ‘ಬ್ಲೂ ಹೈಡ್ರೋಜನ್’ ಎಂದು ಕರೆಯಲಾಗುತ್ತದೆ. ಹಾಗೂ ಹೈಡ್ರೋಜನ್ ಮತ್ತು ಆಕ್ಸಿಜನ್(ಪ್ರಾಣವಾಯು) ಸಂಯೋಜನೆಯಿಂದ ನೀರು ರೂಪುಗೊಳ್ಳುತ್ತದೆ. ‘ಇಲೆಕ್ಟ್ರೋಲಿಸಿಸ್’ ಈ ಪದ್ದತಿಯಿಂದ ನೀರಿನಲ್ಲಿನ ಹೈಡ್ರೋಜನ್ ಅನ್ನು ಆಮ್ಲಜನಕದಿಂದ ಬೇರ್ಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಯಾವುದೇ ಮಾಲಿನ್ಯವಿಲ್ಲದೆ ಹೈಡ್ರೋಜನ್ ಉತ್ಪಾದಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಇದನ್ನು ‘ಗ್ರೀನ್ ಹೈಡ್ರೋಜನ್’ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸಮಯದಲ್ಲಿ, ಅದರ ಮೌಲ್ಯವು ತುಂಬಾ ಹೆಚ್ಚಾಗಿದೆ. ಇದನ್ನು ಅಮೋನಿಯಾ, ರಾಸಾಯನಿಕ ಗೊಬ್ಬರ, ಹಾಗೂ ಪೆಟ್ರೋಲ್ ನಿಂದ ತಯಾರಿಸಿದ ಇತರ ರಾಸಾಯನಿಕಗಳ ಉತ್ಪಾದನೆಗೆ ಬಳಸಲಾಗುತ್ತದೆ.