ಸರ್ವಧರ್ಮ ಸಮಭಾವವನ್ನು ನಂಬುವ ಅನೇಕ ಮಠಾಧೀಶರು ಹಿಂದೂಗಳ ಪರವಾಗಿ ನಿಲ್ಲುವುದಿಲ್ಲ ! – ಕಾಳಿಕಾ ಯುವಸೇನೆಯ ಸಂಸ್ಥಾಪಕ ಹಾಗೂ ಕರ್ನಾಟಕ ರಾಜ್ಯಾಧ್ಯಕ್ಷ ಋಷಿಕುಮಾರ ಸ್ವಾಮಿ

ಚಿತ್ರದುರ್ಗ – ಬಲಿಷ್ಠ ಹಿಂದೂ ರಾಷ್ಟ್ರವನ್ನು ನಿರ್ಮಿಸಲೇ ಬೇಕು. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಒಂದಾಗಬೇಕು; ಆದರೆ, ಸರ್ವಧರ್ಮಸಮಭಾವವನ್ನು ನಂಬುವ ಅನೇಕ ಮಠಾಧೀಶರು ಹಿಂದೂಗಳ ಪರವಾಗಿ ನಿಲ್ಲುವುದಿಲ್ಲ. ದೇಶದ ಹಿಂದೂ ಸಂಘಟನೆಗಳು ಜಾಗೃತರಾಗದೇ ಇದ್ದಲ್ಲಿ ಅವರು ಕೂಡ ಉಳಿಯುವುದಿಲ್ಲ ಎಂದು ಕಾಳಿಕಾ ಯುವಸೇನೆಯ ಸಂಸ್ಥಾಪಕ ಮತ್ತು ಕರ್ನಾಟಕ ರಾಜ್ಯಾಧ್ಯಕ್ಷ ಋಷಿಕುಮಾರ ಸ್ವಾಮಿ ಎಚ್ಚರಿಸಿದರು. ಅವರು ಇಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಭೆಗೆ ರಾಷ್ಟ್ರೀಯ ದಲಿತ ಸಂಘದ ಓಬಳೇಶ್ ಉಗ್ರನರಸಿಂಹ, ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಉಸ್ತುವಾರಿ ಸಚಿವ ಗಂಗಾಧರ್, ವಂದೇ ಮಾತರಂ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಮಾಲ್ತೇಶ್ ಅರಸ್, ಸಮಸ್ತ ವಿಶ್ವ ಧರ್ಮರಕ್ಷಾ ಸೇನೆಯ ಸಂಸ್ಥಾಪಕ ಯೋಗಿ ಸಂಜಿತ್ ಸುವರ್ಣ ಇತ್ಯಾದಿ ಮಾನ್ಯವರರು ಉಪಸ್ಥಿತರಿದ್ದರು.

ಋಷಿಕುಮಾರ ಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ, ರಾಜ್ಯದಲ್ಲಿ ದಿನನಿತ್ಯ ಮತಾಂತರಗಳು ನಡೆಯುತ್ತಿವೆ. ಮೊದಲು ದಲಿತರು ಮಾತ್ರ ಆಕರ್ಷಿತರಾಗಿದ್ದರು. ಈಗ ಮತಾಂತರಕ್ಕೆ ಪ್ರಯತ್ನಿಸುವವರು ಎಲ್ಲಾ ಜಾತಿಗಳಲ್ಲಿ ನುಸುಳಿದ್ದಾರೆ. ಇದು ಹೀಗೆ ಮುಂದುವರಿದರೆ, ಹಿಂದೂಗಳ ಅಸ್ತಿತ್ವ ನಾಶವಾಗುತ್ತದೆ ಮತ್ತು ಅವರು ಇನ್ನೊಂದು ಧರ್ಮದ ಮುಂದೆ ತಲೆಬಾಗಬೇಕಾಗುತ್ತದೆ. ಆದ್ದರಿಂದ ಹಿಂದೂ ಸಂಘಟನೆಗಳು ಈಗ ಒಂದಾಗಬೇಕಿದೆ. ಹಿಂದೂ ಧರ್ಮದಲ್ಲಿ ಐಕ್ಯತೆಯ ಅಭಾವದ ಲಾಭವನ್ನು ಇತರ ಧರ್ಮದವರು ಪಡೆದುಕೊಳ್ಳುತ್ತಿವೆ.

೬೪ ಹಿಂದುತ್ವನಿಷ್ಠ ಸಂಘಟನೆಗಳನ್ನು ಒಗ್ಗೂಡಿಸುವ ಪ್ರಯತ್ನ ! – ಕಾಳಿಕಾ ಯುವಸೇನೆಯ ಸಂಸ್ಥಾಪಕ ಮುಖ್ಯಸ್ಥ ಡಿ.ಎಸ್. ಸುರೇಶಬಾಬು

ಕಾಳಿಕಾ ಯುವಸೇನೆಯ ಸಂಸ್ಥಾಪಕ ಡಿ.ಎಸ್. ಸುರೇಶಬಾಬು ಮಾತನಾಡುತ್ತಾ, ‘ಭಾರತವು ಹಿಂದೂ ರಾಷ್ಟ್ರವಾಗಲೇಬೇಕು’ ಎಂಬ ಪರಿಕಲ್ಪನೆಯೊಂದಿಗೆ ಈ ಮಹತ್ಕಾರ್ಯದ ನೇತೃತ್ವ ವಹಿಸಲಾಗಿದೆ. ಅನೇಕರ ಗುರಿ ಒಂದೇ ಇದ್ದರೂ, ಸಂಘಟನೆಗಳು ವಿಭಿನ್ನವಾಗಿವೆ. ಮೊದಲ ಹಂತದಲ್ಲಿ ನಾವು ರಾಜ್ಯದ ೬೪ ಹಿಂದುತ್ವನಿಷ್ಠ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.