ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಮುಖ್ಯಮಂತ್ರಿ !

ಬೆಂಗಳೂರು : ಬಿಜೆಪಿ ಮುಖಂಡ ಬಸವರಾಜ ಬೊಮ್ಮಯಿ ಅವರು ಜುಲೈ ೨೮ ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು ಕರ್ನಾಟಕದ ೨೩ ನೇ ಮುಖ್ಯಮಂತ್ರಿಯಾಗಿದ್ದಾರೆ. ರಾಜಭವನದ ಗ್ಲಾಸ್ ಹೌಸ್‌ನಲ್ಲಿ(ಗಾಜಿನ ಮನೆ) ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋತ ಇವರು ಬಸವರಾಜ ಬೊಮ್ಮಾಯಿಯವರಿಗೆ ಹುದ್ದೆ ಮತ್ತು ಗೌಪ್ಯತೆಯ ಬಗ್ಗೆ ಪ್ರಮಾಣವಚನ ನೀಡಿದರು.

ಈ ಸಮಯದಲ್ಲಿ ಹಿಂದಿನ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಉಪಸ್ಥಿತರಿದ್ದರು. ಯಡಿಯೂರಪ್ಪ ನವರು ರಾಜೀನಾಮೆ ನೀಡಿದ ನಂತರ ಈ ಹುದ್ದೆ ಖಾಲಿ ಆಗಿತ್ತು. ಪ್ರಮಾಣವಚನ ಸ್ವೀಕರಿಸುವ ಮೊದಲು, ಬೊಮ್ಮಾಯಿಯವರು ಮಾರುತಿ ದೇವಸ್ಥಾನಕ್ಕೆ ಹೋಗಿ ಶ್ರೀ ಮಾರುತಿಯ ದರ್ಶನವನ್ನು ಪಡೆದರು.

ಬೊಮ್ಮಾಯಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಿಂದ ಚುನಾಯಿತರಾಗಿದ್ದು, ಸ್ವಲ್ಪ ಕಾಲ ಜನತಾದಳದ ಜೊತೆಗೆ ಇದ್ದರು. ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಬೊಮ್ಮಾಯಿಯವರು ಗೃಹ ಸಚಿವರಾಗಿದ್ದರು.