ಆಪತ್ಕಾಲ ಎಂದರೇನು ಮತ್ತು ಆಪತ್ಕಾಲ ತಡೆಯಲು ಸಾಧ್ಯವಿದೆಯೇ ?

ಆಪತ್ಕಾಲ ಎಂದರೇನು ?

ಕಾಲವು ಅನಂತವಾಗಿರುವುದರಿಂದ ಅದನ್ನು ಯುಗಗಳಲ್ಲಿಯೇ ಎಣಿಸಬೇಕು. ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿ ಹೀಗೆ ನಾಲ್ಕು ಯುಗಗಳ ಒಂದು ಚಕ್ರವಿರುತ್ತದೆ. ಇಂತಹ ಚಕ್ರಗಳು ಅನಂತ ಕಾಲದಿಂದ ನಡೆಯುತ್ತಾ ಬಂದಿವೆ ಮತ್ತು ನಡೆಯುತ್ತಾ ಇರಲಿವೆ. ಕಾಲಾನುಸಾರ ಎಲ್ಲವೂ ಬದಲಾಗುತ್ತಿರುತ್ತದೆ. ಸೂರ್ಯೋದಯ, ಸೂರ್ಯಾಸ್ತ, ಗ್ರಹಣ ಕಾಲ ಇತ್ಯಾದಿ ಹೇಗೆ ಸಂಧಿಕಾಲವೋ, ಅದೇ ರೀತಿ ಈಗಿನ ಕಾಲವೂ ಕಲಿಯುಗಾಂತರ್ಗತ…(ಅನೇಕ ಚಕ್ರಗಳ)… ಕಲಿಯುಗದ ಕೊನೆಯಾಗಿ ಕಲಿಯುಗಾಂತರ್ಗತ… ಕಲಿಯುಗದ ಸಂಧಿಕಾಲವಾಗಿದೆ. ಅದು ಕೂಡ ೨೦೨೪ ರಲ್ಲಿ ಕೊನೆಗೊಳ್ಳಲಿದ್ದು, ಕಲಿಯುಗಾಂತರ್ಗತ… ಕಲಿಯುಗದ ಕೊನೆಯಾಗಿ ಕಲಿಯುಗಾಂತರ್ಗತ… ಸತ್ಯಯುಗವು ಪ್ರಾರಂಭವಾಗಲಿದೆ. ಅಲ್ಲಿಯವರೆಗಿನ ಸಮಯದಲ್ಲಿ ರಜ-ತಮದ ಪ್ರಭಾವವು ಹೆಚ್ಚಾಗುತ್ತಾ ಹೋಗುತ್ತದೆ. ಜನರು ಸಾಧನೆಯನ್ನು ಮಾಡುವುದಿಲ್ಲ. ಹಾಗಾಗಿ ಈ ರಜ-ತಮದಿಂದ ಅವರ ಮೇಲೆ ಸುಲಭವಾಗಿ ಪ್ರಭಾವವಾಗುತ್ತದೆ. ಜನರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯದ ಮೇಲೆಯೂ ಇದರ ಪ್ರಭಾವವಾಗುತ್ತದೆ. ಹೆಚ್ಚುವ ಅನೈತಿಕ ಕೃತಿಗಳಿಂದ, ಜೀವನಶೈಲಿಯಿಂದ ವಾತಾವರಣದಲ್ಲಿ ಇನ್ನಷ್ಟು ರಜ-ತಮದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಸಮಷ್ಟಿ ಪ್ರಾರಬ್ಧವೂ ಹೆಚ್ಚಾಗುತ್ತದೆ. ಇದರಿಂದಾಗಿ ಮುಂಬರುವ ಕಾಲದಲ್ಲಿ ಘಟಿಸುವ ದೊಡ್ಡ ಘಟನೆಗಳು (ಭೂಕಂಪ, ನೆರೆ, ಬರಗಾಲ, ಸಾಂಕ್ರಾಮಿಕ ರೋಗ) ನಮ್ಮ ದೇಶದ ಸಮಷ್ಟಿ ಪ್ರಾರಬ್ಧದ ಮೇಲೆ ಅವಲಂಬಿಸಿರುತ್ತವೆ. ಇದೇ ಆಪತ್ಕಾಲಕ್ಕೆ ಮೂಲ ಕಾರಣವಾಗಿದೆ.

ಆಪತ್ಕಾಲವನ್ನು ತಡೆಯಲು ಸಾಧ್ಯವಿದೆಯೇ ?

ಇಂದು ಕಾಲವು ಅತ್ಯಂತ ಭೀಕರವಾಗಿದೆ. ಇದನ್ನು ವಿಜ್ಞಾನ ಸಹ ಹೇಳುತ್ತಿದೆ. ನಾವು ಸಹ ಇದನ್ನು ನೋಡುತ್ತಿದ್ದೇವೆ ಮತ್ತು ಸಂತರು ಸಹ ಹೇಳಿದ್ದಾರೆ. ಈಗ ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆ ಏನೆಂದರೆ ಆಪತ್ಕಾಲವನ್ನು ತಡೆಯಲು ಸಾಧ್ಯವಿದೆಯೇ ? ಇದಕ್ಕೆ ಪರಿಹಾರವಿದೆಯೇ ? ದುರದೃಷ್ಟವಶಾತ್ ಇದರ ಉತ್ತರ ‘ಇಲ್ಲ ಎಂದೇ ಹೇಳಬೇಕು. ಕೆಲವರಿಂದಾದ ದುಷ್ಕರ್ಮಗಳು ಮತ್ತು ಅದನ್ನು ನೋಡಿಯೂ ನೋಡದಂತಿರುವ ಇತರ ಜನರಿಂದಾಗಿ ಇಂದು ಇಡೀ ಸಮಾಜವು ಈ ಆಪತ್ಕಾಲದ ಪರಿಣಾಮವನ್ನು ಭೋಗಿಸಬೇಕಾಗುತ್ತಿದೆ. ಮಾನವನು ಪ್ರಕೃತಿಯನ್ನು ಎಷ್ಟು ಅಸಮತೋಲನಗೊಳಿಸಿದ್ದಾನೆಂದರೆ ಈಗ ಪ್ರಕೃತಿಯೇ ತನ್ನ ಸಮತೋಲನವನ್ನು ಸರಿಪಡಿಸಿಕೊಳ್ಳಲಿದೆ. ಆದರೆ ಅದರ ಪರಿಣಾಮವನ್ನು ನಾವೆಲ್ಲರೂ ಭೋಗಿಸಬೇಕಾಗಿದೆ.

ಹಾಗಾದರೆ ನಾವೀಗ ಏನು ಮಾಡಬೇಕು ? ನಾವು ಆಪತ್ಕಾಲವನ್ನಂತೂ ತಡೆಯಲಾರೆವು. ಆದರೆ ಆ ಆಪತ್ತಿನ ಪರಿಣಾಮವನ್ನು ಸೌಮ್ಯಗೊಳಿಸಲು ಮತ್ತು ತನ್ನ ರಕ್ಷಣೆಗಾಗಿ ಖಂಡಿತವಾಗಿ ಪ್ರಯತ್ನಿಸಬಹುದು. ಆಪತ್ಕಾಲದಲ್ಲಿ ಆಗುವ ಭೀಕರ ಹಾನಿಯ ವಿಷಯವನ್ನು ತಿಳಿದು ಕೆಲವರಿಗೆ ದುಃಖವಾಗಬಹುದು, ಇನ್ನು ಕೆಲವರ ಮನಸ್ಸಿನಲ್ಲಿ ಈ ಹಾನಿಯನ್ನು ತಡೆಯಲು ಈಶ್ವರನು ಏನೂ ಮಾಡುವುದಿಲ್ಲವೇ ? ಎಂದು ಪ್ರಶ್ನೆಗಳು ಮೂಡಬಹುದು. ಈ ವಿಷಯದಲ್ಲಿ ನಾವು ಗಮನದಲ್ಲಿಡಬೇಕೇನೆಂದರೆ ಈ ಆಪತ್ಕಾಲವು ಸಂಪೂರ್ಣ ವಿಶ್ವದಲ್ಲಿ ಈಶ್ವರೀ ರಾಜ್ಯವನ್ನು ಸ್ಥಾಪಿಸುವ ದೃಷ್ಟಿಯಿಂದಾದ ಈಶ್ವರೀ ಆಯೋಜನೆಯಾಗಿದೆ. ಪೃಥ್ವಿಯಲ್ಲಿ ಹೆಚ್ಚಾಗಿರುವ ರಜ-ತಮವನ್ನು ಕಡಿಮೆಗೊಳಿಸಿ ಸತ್ತ್ವಗುಣದ ಪ್ರಭಾವವನ್ನು ಹೆಚ್ಚಿಸಲು ಈ ಆಪತ್ಕಾಲವು ಈಶ್ವರನು ರೂಪಿಸಿದ ಯೋಜನೆಯಾಗಿದೆ ಅರ್ಥಾತ್, ಸಜ್ಜನರಿಗಾಗಿ ಇದು ಆಪತ್ಕಾಲವು ‘ಇಷ್ಟಕಾಲ (ಸಂಪತ್ಕಾಲ)ವಾಗಿದೆ. ಹಾಗಾಗಿ ಹಿಂದೂ ಸಮಾಜವು, ‘ಆಪತ್ಕಾಲವು ಒಳ್ಳೆಯದೋ, ಕೆಟ್ಟದೋ ಎಂಬ ವಿಚಾರದಲ್ಲಿ ಮುಳುಗದೇ ಈ ಆಪತ್ಕಾಲವು ಸಾಧನೆಗಾಗಿ ಮತ್ತು ಹಿಂದೂಗಳ ರಕ್ಷಣೆ ಮಾಡಿ ಈಶ್ವರನ ಕೃಪೆಯನ್ನು ಪಡೆಯುವ ಸುವರ್ಣಾವಕಾಶವಾಗಿದೆ, ಎಂದು ತಿಳಿಯಬೇಕು.