‘ಲವ್ ಜಿಹಾದ್ ಒಂದು ಧರ್ಮಸಂಕಟ

‘ಮತಾಂತರಕ್ಕಾಗಿ ಮದುವೆ (ಲವ್ ಜಿಹಾದ್) ಕುರಿತಾದ ಚರ್ಚೆ ಈಗ ಪುನಃ ಆರಂಭವಾಗಿದೆ. ‘ಮತಾಂತರ ಉದ್ದೇಶದ ಮದುವೆಗಳನ್ನು ನಿರ್ಬಂಧಿಸಲು ಕಾನೂನು ರೂಪಿಸುವುದಾಗಿ, ಕರ್ನಾಟಕ ಸೇರಿದಂತೆ ಭಾಜಪ ಆಡಳಿತದ ಕೆಲವು ರಾಜ್ಯಗಳು ಹೇಳಿಕೊಂಡಿವೆ. ‘ಲವ್ ಜಿಹಾದ್ ಪದ ಉಗ್ರ ಬಹುಸಂಖ್ಯಾತವಾದದ ಸೃಷ್ಟಿಯಾಗಿದ್ದು, ಹಿಂದೂ ಧಾರ್ಮಿಕ ಅತಿರೇಕಗಳಿಂದ ಪ್ರೇರಿತವಾಗಿದೆ ಎಂಬ ವಾದ ಕೂಡ ಅಷ್ಟೇ ಬಲವಾಗಿ ಕೇಳಿಬರುತ್ತಿದೆ. ಭಾಜಪ ಆಡಳಿತದ ಸರಕಾರಗಳ ನಡೆಯನ್ನು ಸ್ವಾತಂತ್ರ್ಯ, ಮುಕ್ತತೆ, ಘನತೆ, ಸ್ವಾಯತ್ತತೆ ಮೇಲಿನ ‘ಕಾನೂನು ದಾಳಿ ಎಂದೂ ಅರ್ಥೈಸಲಾಗುತ್ತಿದೆ. ನಿಜಕ್ಕೂ ‘ಮತಾಂತರಕ್ಕಾಗಿ ಮದುವೆ ಎಂದರೇನು ? ಇದರ ಬಗ್ಗೆ ಭಾಜಪದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ಭಾಜಪ ಯುವಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ ವ್ಯಾಖ್ಯಾನದ ಕೆಲವು ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ.

‘ಲವ್ ಜಿಹಾದ್ ಅಂದರೆ ಒಂದು ಧರ್ಮವನ್ನು ಇನ್ನೊಬ್ಬರ ಮೇಲೆ ಹೇರುವ ಸಂಚು

ಮುಸ್ಲಿಮೇತರ ಹೆಣ್ಣುಮಕ್ಕಳು ಮುಸ್ಲಿಂ ಸಂಗಾತಿಯನ್ನು ಮದುವೆಯಾಗಲು ಬಯಸಿದರೆ ಕಡ್ಡಾಯವಾಗಿ ಮತಾಂತರವಾಗ ಬೇಕಾದ ಪ್ರಕ್ರಿಯೆಯು ಈಗ ಭಾರತೀಯ ಸಮಾಜಕ್ಕೆ ದೊಡ್ಡ ಪಿಡುಗಾಗಿ ಕಾಡುತ್ತಿದೆ. ಈ ಪಿಡುಗು ಎಂತಹದ್ದು ಎಂದರೆ ನಮ್ಮ ಸಮಾಜವು ಇದುವರೆಗೆ ಕಾಪಾಡಿಕೊಂಡು ಬಂದ ಸೌಖ್ಯವನ್ನೇ ಅದು ಅಳಿಸಿ ಹಾಕುವಂತಹದ್ದಾಗಿದೆ. ಮಹಿಳೆಯರ ಬಹುತೇಕ ಪ್ರಕರಣಗಳಲ್ಲಿ ಯುವತಿಯರ ಹಾಗೂ ಒಂದಷ್ಟು ಸಲ ಬಾಲಕಿಯರ ಧಾರ್ಮಿಕ ನಂಬಿಕೆಯನ್ನು ಬಲವಂತವಾಗಿ ಪರಿವರ್ತಿಸುವ ಈ ಪಿಡುಗು, ಮೇಲ್ನೋಟಕ್ಕೆ ‘ಅಂತರಧರ್ಮೀಯ ಮದುವೆ ಎಂಬ ಮುಖವಾಡವೆಂದು ಕಾಣಿಸಿದರೂ  ಅದರ ಪರಿಣಾಮಗಳು ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಆಳವಾಗಿದೆ.

‘ಲವ್ ಜಿಹಾದ್ ಎಂದು ವ್ಯಂಗ್ಯದ ಧಾಟಿಯಲ್ಲಿ ಕರೆಯಲಾಗುವ ಈ ಮದುವೆಯ ಪ್ರಕ್ರಿಯೆಯನ್ನು, ಒಬ್ಬರ ಧಾರ್ಮಿಕ ನಂಬಿಕೆಯನ್ನು ಇನ್ನೊಬ್ಬರ ಮೇಲೆ ಹೇರುವ ಅಥವಾ ಒಂದು ಧಾರ್ಮಿಕ ನಂಬಿಕೆಯನ್ನು ಅನುಸರಿಸುವವರ ಸಂಖ್ಯೆಯನ್ನು ದೇಶದಾದ್ಯಂತ ವಿಸ್ತರಿಸುವ ಪಿತೂರಿ ಎಂದಷ್ಟೇ ವ್ಯಾಖ್ಯಾನಿಸಿ ಸುಮ್ಮನಾಗುವಂತಿಲ್ಲ. ಮುಸ್ಲಿಮೇತರ ಯುವತಿಯರು ಮತಾಂತರಗೊಂಡು ಮುಸ್ಲಿಂ ಕುಟುಂಬಗಳ ಜತೆ ಮದುವೆ ಸಂಬಂಧ ಹೊಂದುವ ಈ ವಿದ್ಯಮಾನ, ಸಾಮಾಜಿಕ ಸೌಖ್ಯ ಹಾಗೂ ಲಿಂಗ ಸಮಾನತೆಗೆ ಹೇಗೆ ಕಂಟಕವಾಗಿದೆ ಎಂಬುದನ್ನು ತುಂಬಾ ಗಂಭೀರವಾಗಿ ಆಲೋಚಿಸಬೇಕು.

ಕೇರಳ ಮತ್ತು ಅಲಾಹಾಬಾದ್‌ದಲ್ಲಿ ಉಚ್ಚ ನ್ಯಾಯಾಲಯವು ಲವ್ ಜಿಹಾದ್ ಪ್ರಕರಣಗಳತ್ತ ಗಮನ ಹರಿಸುವುದು

ಮುಸ್ಲಿಮೇತರ ಯುವತಿಯರನ್ನು ಬಲವಂತವಾಗಿ ಮತಾಂತರಿಸುವ ಹಾಗೂ ಮದುವೆ ಮಾಡಿಸುವ ಪ್ರಕರಣಗಳು ಪಾಕಿಸ್ತಾನದಲ್ಲಂತೂ ದಿನನಿತ್ಯದ ಬೆಳವಣಿಗೆಗಳಾಗಿದೆ. ಇತ್ತೀಚೆಗೆ ವರದಿಯಾದ ಅಲ್ಲಿನ ಘಟನೆಯನ್ನೇ ಉದಾಹರಿಸುವುದಾದರೆ, ಆರ್ಝೂ ರಾಜಾ ಎಂಬ ೧೩ ವರ್ಷದ ಕ್ರಿಶ್ಚಿಯನ್ ಬಾಲಕಿಯನ್ನು ಅಪಹರಿಸಿ, ಬಲವಂತವಾಗಿ ಮತಾಂತರಿಸಿ ೪೪ ವರ್ಷ ವಯಸ್ಸಿನ ಅಝರ್ ಅಲಿಯೊಂದಿಗೆ ವಿವಾಹ ಮಾಡಿಕೊಡಲಾಯಿತು. ದುರದೃಷ್ಟವಶಾತ್, ಭಾರತದಲ್ಲಿ ಸಹ ಈ ತೆರನಾದ ಘಟನೆಗಳು ವರದಿಯಾಗುತ್ತಿವೆ. ಅದರಲ್ಲೂ ಕೇರಳ, ಉತ್ತರಪ್ರದೇಶ, ಪಶ್ಚಿಮ ಬಂಗಾಲ, ಹರಿಯಾಣ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಈ ಸಾಮಾಜಿಕ ಪಿಡುಗು ಎಷ್ಟೊಂದು ಅತಿರೇಕಕ್ಕೆ ಹೋಗಿದೆಯೆಂದರೆ ಅದು ಕೇರಳ ಹಾಗೂ ಅಲಹಾಬಾದ್ ಉಚ್ಚ ನ್ಯಾಯಾಲಯಗಳ ಗಮನವನ್ನೂ ಸೆಳೆದಿದೆ.

ಏನಿದು ಲವ್ ಜಿಹಾದ್ ಕಾನೂನು ?

ಮದುವೆಯ ವಯಸ್ಸು ತಲುಪಿದ ಇಬ್ಬರು ವಯಸ್ಕ ಪ್ರಜೆಗಳು ‘ವಿಶೇಷ ವಿವಾಹ ಕಾಯ್ದೆಗನುಸಾರ, ಸಕಲ ಕಾನೂನು ವಿಧಿವಿಧಾನಗಳನ್ನು ಪೂರೈಸಿ ಮದುವೆಯನ್ನು ಆಗಬಹುದು. ಹಾಗೆ ಮದುವೆ ನೋಂದಣಿ ಮಾಡಿಸುವ ೩೦ ದಿನಗಳ ಪೂರ್ವದಲ್ಲಿ ಸಾರ್ವಜನಿಕ ನೋಟಿಸ್ ಹೊರಡಿಸಬೇಕು. ಸರಕಾರ ನೀಡಿರುವ ಯಾವುದೇ ಅಧಿಕೃತ ಗುರುತಿನ ಚೀಟಿ, ಛಾಯಾಚಿತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಮದುವೆಯ ನೋಂದಣಿಗಾಗಿ ಒದಗಿಸಬೇಕು. ಸರಕಾರ ನೇಮಕ ಮಾಡಿದ ಅಧಿಕಾರಿಗಳು ಮಾತ್ರ ಇಂತಹ ಮದುವೆಯನ್ನು ನೋಂದಣಿ ಮಾಡಿಕೊಳ್ಳುವರು. ಈ ವಿವರಗಳನ್ನೆಲ್ಲ ನೋಡಿದಾಗ ಮದುವೆಗೆಂದು ಒಬ್ಬರು ತಮ್ಮ ಧಾರ್ಮಿಕ ನಂಬಿಕೆಯನ್ನು ತ್ಯಜಿಸಿ ಇನ್ನೊಬ್ಬರ ಧರ್ಮವನ್ನು ಒಪ್ಪಿಕೊಳ್ಳುವ ಪ್ರಮೇಯವೇ ಬರುವುದಿಲ್ಲ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.

ಅಲಹಾಬಾದ್ ಉಚ್ಚ ನ್ಯಾಯಾಲಯದ ತೀಕ್ಷ್ಣ ಅವಲೋಕನದಲ್ಲಿ ಈ ಅಂಶ ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ. ‘ಕೇವಲ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮತಾಂತರವನ್ನು ಒಪ್ಪಲಾಗದು ಎಂದು ನ್ಯಾಯಾಲಯವು ಹೇಳಿದೆ. ‘ಪ್ರಿಯಾಂಶಿ ವಿರುದ್ಧ ಕೆ.ಎಂ.ಶಮ್ರೀನ್ ವಿರುದ್ಧ ಉತ್ತರಪ್ರದೇಶ ಸರಕಾರ, ‘ನೂರ್‌ಜಹಾನ್ ಬೇಗಂ ಊರ್ಫ್ ಅಂಜಲಿ ಮಿಶ್ರಾ ವಿರುದ್ಧ ಉತ್ತರಪ್ರದೇಶ ಸರಕಾರ ಪ್ರಕರಣಗಳಲ್ಲಿ ನ್ಯಾಯಾಲಯ ಇದನ್ನು ತುಂಬಾ ಸ್ಪಷ್ಟವಾಗಿ ಹೇಳಿದೆ.

ಲವ್ ಜಿಹಾದ್ ಕಾನೂನಿನ ಕುರಿತು ಕೆಲವು ಸಲಹೆಗಳು

ಅಂತರಧರ್ಮೀಯ ವಿವಾಹ ಕುರಿತಂತೆ ಸಂವಿಧಾನಬದ್ಧವಾಗಿ ನೀಡಲಾದ ಮೌಲ್ಯಗಳನ್ನು ಎತ್ತಿಹಿಡಿಯುವುದು ಹಾಗೂ ಲಿಂಗ ಸಮಾನತೆಯ ನ್ಯಾಯವನ್ನು ಪುರಸ್ಕರಿಸುವುದು ಈಗ ಅಗತ್ಯವಾಗಿದೆ. ಆ ಕುರಿತಂತೆ ಕಾನೂನಿನಲ್ಲಿ ಏನೆಲ್ಲ ಇರಬೇಕು ಎಂಬ ಕೆಲವು ಸಲಹೆಗಳು ಇಲ್ಲಿವೆ.

೧. ವ್ಯಕ್ತಿಯೊಬ್ಬನ ವಯಸ್ಸು ೧೮ ವರ್ಷ ಆಗುವವರೆಗೂ ಮತಾಂತರಕ್ಕೆ ಸಂಪೂರ್ಣ ನಿಷೇಧ ವಿಧಿಸುವುದು. (ಯಾವುದೇ ವಯಸ್ಸಿನ ವ್ಯಕ್ತಿಯ ಮತಾಂತರಕ್ಕೆ ದೇಶಾದ್ಯಂತ ನಿಷೇಧ ಇರಬೇಕು ! – ಸಂಪಾದಕರು)

೨. ‘ವಿಶೇಷ ವಿವಾಹ ಕಾಯ್ದೆಯ ಮಾದರಿಯಲ್ಲೇ ಮತಾಂತರವಾಗಲು ಸ್ಪಷ್ಟ ಪ್ರಕ್ರಿಯೆ ರೂಪಿಸುವುದು. ಅಂದರೆ, ಯಾವ ಉದ್ದೇಶಕ್ಕಾಗಿ ಈ ಮತಾಂತರವಾಗಿದೆ ಎಂಬುದನ್ನು ಪ್ರಕಟಿಸಿ ೩೦ ದಿನಗಳ ಅವಧಿಯ ಸಾರ್ವಜನಿಕ ಕಾಲಾವಕಾಶ ಕೊಡುವುದು. ಇದಕ್ಕೆ ಮೂಲ ಮತದಲ್ಲಿರುವ ೨೫ ವರ್ಷ ವಯಸ್ಸಿಗೂ ಮೇಲ್ಪಟ್ಟ ಇಬ್ಬರು ಸಾಕ್ಷಿದಾರರು ಇರಬೇಕು. ಈ ಘೋಷಣೆಯನ್ನು ಆ ವ್ಯಕ್ತಿಯ ಪೂರ್ಣ ಹೆಸರು, ಸ್ವೀಕರಿಸುವ ಧರ್ಮದ ಹೊಸ ಹೆಸರು, ಪಾಲಕರ ಹೆಸರು, ಅಧಿಕೃತ ಗುರುತಿನ ಚೀಟಿ ಸಂಖ್ಯೆ ಸಮೇತ ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ರೂಪದಲ್ಲಿ ಪ್ರಕಟಿಸಬೇಕು.

೩. ವಿಶೇಷ ವಿವಾಹ ಕಾಯ್ದೆಯನ್ನು ಹೊರತುಪಡಿಸಿ ಯಾವುದೇ ವೈಯಕ್ತಿಕ ಕಾಯ್ದೆಗಳ ಅಡಿಯಲ್ಲೂ ಅಂತರಧರ್ಮೀಯ ವಿವಾಹಗಳು ನೋಂದಣಿಗೊಳ್ಳಬಾರದು.

೪. ಮತಾಂತರಗೊಂಡ ಎರಡು ವರ್ಷಗಳ ಬಳಿಕವಷ್ಟೇ ವಿವಾಹಕ್ಕೆ ಅವಕಾಶ ಮಾಡಿಕೊಡಬೇಕು. ಇದರಿಂದ ಮತಾಂತರದ ಉದ್ದೇಶಗಳಿಗೆ ಮದುವೆಯಾಗಿ ವಂಚಿಸುವ ಪರದಾಟ ತಪ್ಪುವುದು.

೫. ಅಂತರಧರ್ಮೀಯ ಮದುವೆಯನ್ನು ಕಡ್ಡಾಯವಾಗಿ ‘ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಬೇಕು. ನೋಂದಾಣಿಯಾಗದ ಮದುವೆಯನ್ನು ಅನುರ್ಜಿತ ಎಂದೇ ಪರಿಗಣಿಸಬೇಕು.

೬. ಅಂತರಧರ್ಮೀಯ ಮದುವೆಗಳು ಮತ್ತು ಕುಟುಂಬಗಳು ‘ಭಾರತೀಯ ಉತ್ತರಾಧಿಕಾರ ಕಾಯ್ದೆಗನುಸಾರ ನಿಗಾದಲ್ಲಿ ಒಳಪಡಬೇಕೇ ಹೊರತು ಯಾವುದೇ ಧರ್ಮದ ವೈಯಕ್ತಿಕ ಕಾಯ್ದೆಗಳ ಪ್ರಕಾರ ಅಲ್ಲ ಎಂಬ ಅಂಶವನ್ನೂ ಕಡ್ಡಾಯಗೊಳಿಸಬೇಕು. ಈ ತೆರನಾದ ಬದಲಾವಣೆ ಮಾಡಿದರೆ, ಮತಾಂತರಗೊಂಡ ವ್ಯಕ್ತಿಯು ವಿಶೇಷ ವಿವಾಹ ಕಾಯ್ದೆಗನುಸಾರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ. ಸಮಾನ ನಾಗರಿಕ ಸಂಹಿತೆ ಜಾರಿಗಾಗಿ ನಾವಿನ್ನೂ ಕಾಯುತ್ತಿದ್ದು, ವಿವಾಹಕ್ಕಾಗಿಯೇ ಇಸ್ಲಾಂಗೆ ಮತಾಂತರಗೊಂಡು ಅದರ ಪರಿಣಾಮ ಎದುರಿಸುತ್ತಿರುವ ಯುವತಿಯರ ಹಿತಾಸಕ್ತಿಯನ್ನು ಜವಾಬ್ದಾರಿಯುತ ಸರಕಾರಗಳು ಈ ಮಾರ್ಗದಿಂದಲಾದರೂ ರಕ್ಷಿಸಬೇಕಿದೆ. ಈ ಸುಧಾರಣೆಗಳನ್ನು ಯಾರಾದರೂ ವಿರೋಧಿಸುತ್ತಿದ್ದಾರೆ ಎಂದರೆ, ಅವರಿಗೆ ನಮ್ಮ ಯುವತಿಯರ ಹಿತಾಸಕ್ತಿ ರಕ್ಷಿಸುವ ಉದ್ದೇಶ ಇಲ್ಲವೆಂದೇ ಅರ್ಥ.

– ಶ್ರೀ. ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಘಟಕದ ಅಧ್ಯಕ್ಷ (ಕೃಪೆ : ‘ಪ್ರಜಾವಾಣಿ ಜಾಲತಾಣ)