ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಾತ್ಮಶಾಸ್ತ್ರವನ್ನು ಸೇರ್ಪಡೆಗೊಳಿಸುವುದು’ ಈ ವಿಷಯದಲ್ಲಿ ವೆಬಿನಾರ್

ವೈದ್ಯಕೀಯ ಚಿಕಿತ್ಸೆಯಲ್ಲಿ ಅಧ್ಯಾತ್ಮಶಾಸ್ತ್ರವನ್ನು ಜೋಡಿಸಿದರೆ ರೋಗದ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು! – ಡಾ. (ಶ್ರೀಮತಿ) ಜ್ಯೋತಿ ಖೋದನಾಪುರ, ಹಿಂದೂ ಜನಜಾಗೃತಿ ಸಮಿತಿ

ಬೆಳಗಾವಿ – ಆಧ್ಯಾತ್ಮಿಕ ಶಕ್ತಿ ಇದ್ದರೆ, ನಂತರ ಸೂಕ್ಷ್ಮ ಜ್ಞಾನವು ವಿಕಸಿತವಾಗುತ್ತದೆ. ಇದರಿಂದ ರೋಗದ ಮೂಲ ಕಾರಣ ಹುಡುಕಲು, ರೋಗವನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗಿಸುತ್ತದೆ. ಇದಕ್ಕಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ವೈದ್ಯಕೀಯ ಚಿಕಿತ್ಸೆಯಲ್ಲಿ ಆಧ್ಯಾತ್ಮಿಕತೆಯನ್ನು ಸೇರಿಸಿಕೊಂಡರೆ, ರೋಗದ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಹಿಂದೂ ಜನಜಾಗೃತಿ ಸಮಿತಿಯ ಡಾ. (ಸೌ.) ಜ್ಯೋತಿ ಖೋದನಾಪುರ ಇವರು ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯು ಇತ್ತೀಚೆಗೆ ‘ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಾತ್ಮಶಾಸ್ತ್ರವನ್ನು ಸೇರ್ಪಡೆಗೊಳಿಸುವುದು’ (ಇಂಟೆಗ್ರೇಟಿಂಗ್ ಸ್ಪಿರಿಚ್ಯುವಾಲಿಟೀ ವಿಥ ಮೆಡಿಸಿನ್) ಕುರಿತು ವೆಬಿನಾರ್ (ಆನ್‌ಲೈನ್ ಕಾರ್ಯಕ್ರಮ) ಆಯೋಜಿಸಿತ್ತು. ಅವರು ಆ ಸಮಯದಲ್ಲಿ ಮಾತನಾಡುತ್ತಿದ್ದರು.

ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ೧೬೮ ವೈದ್ಯರು ‘ಆನ್‌ಲೈನ್’ ಮೂಲಕ ಪಾಲ್ಗೊಂಡಿದ್ದರು  ಮತ್ತು ೩೬೩ ಜನರು ಯೂಟ್ಯೂಬ್‌ನಲ್ಲಿ ನೇರಪ್ರಸಾರ ವೀಕ್ಷಿಸಿದರು. ವೈದ್ಯ (ಕು.) ರಂಜಿತಾ ದಾನಪ್ಪಗೌಡರ್ ಅವರು ಈ ಕಾರ್ಯಕ್ರಮದ  ನಿರೂಪಣೆಯನ್ನು ಮಾಡಿದರು.

ಡಾ. (ಸೌ.) ಜ್ಯೋತಿ ಖೋದನಾಪುರ ಅವರು ತಮ್ಮ ಮಾರ್ಗದರ್ಶನದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಸ್ಥಾಪಕರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು (ಡಾ) ಜಯಂತ ಆಠವಲೆ ಅವರ ಸಾಧನೆಯ ಪ್ರವಾಸ ಮತ್ತು ಅವರು ಮಾಡಿದ ಆಧ್ಯಾತ್ಮಿಕ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಿದರು.

ಡಾ. (ಸೌ.) ಜ್ಯೋತಿ ಖೋದನಾಪುರ ಅವರು ಮುಂದಿನ ವಿಷಯವನ್ನು ಮಂಡಿಸಿದರು,

೧. ಪ್ರಸ್ತುತ ವೈದ್ಯಕೀಯ ಶಿಕ್ಷಣದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನದ ಅಭಾವವಿದೆ. ವೈದ್ಯಕೀಯ ಕ್ಷೇತ್ರವು ಕಾಲಕ್ರಮೇಣ ವ್ಯಾಪಾರಿಕರಣವಾಗುತ್ತಾ ಹೋದ ಹಾಗೆ ಆಧ್ಯಾತ್ಮಿಕ ದೃಷ್ಟಿಕೋನವು ಕಣ್ಮರೆಯಾಗುತ್ತಿದೆ. ರೋಗವನ್ನು ಪತ್ತೆಹಚ್ಚಲು ಹಲವು ಬಾರಿ ಅಡೆತಡೆಗಳು ಬರುತ್ತವೆ, ನಿಮಗೂ ಇದರ ಅನುಭವಿದೆ. ರೋಗವನ್ನು ಪತ್ತೆಹಚ್ಚುವಲ್ಲಿ ಬರುವ ಅಡೆತಡೆಗಳ ಹಿಂದೆ ಆಧ್ಯಾತ್ಮಿಕ ಕಾರಣವಿದೆಯೇ ಎಂದು ವಿಚಾರ ಮಾಡುವ ಆವಶ್ಯಕತೆಯಿದೆ.

೨. ಈಗ ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನೇ ಹೇಳುತ್ತಿದೆ. ರೋಗಿಯು ಶಾರೀರಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಹೀಗೆ ಎಲ್ಲ ಸ್ತರಗಳಲ್ಲಿ ಆರೋಗ್ಯವಂತ ರಾಗಿದ್ದರೆ ಮಾತ್ರ ಅವನು ಸಂಪೂರ್ಣವಾಗಿ ಆರೋಗ್ಯವಂತನೆಂದು ಹೇಳಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಆಧುನಿಕ ವೈದ್ಯರು (ಡಾಕ್ಟರರು) ಆಧ್ಯಾತ್ಮಿಕ ಶಕ್ತಿ ಮತ್ತು ಸೂಕ್ಷ್ಮ ಜ್ಞಾನವನ್ನು ವಿಕಸಿತಗೊಳಿಸುವುದು ಆವಶ್ಯಕವಾಗಿದೆ.

೩. ‘ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಲೇವರೇ | ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ ||’

ಅರ್ಥ : ದೇಹವು ಕಾಯಿಲೆಗಳಿಂದ ಬಳಲುತ್ತಿರುವಾಗ, ಗಂಗೋದಕವೇ ನಿಜವಾದ ಔಷಧಿ ಮತ್ತು ಭಗವಾನ ವಿಷ್ಣುವೇ ನಿಜವಾದ ವೈದ್ಯ. ನಾವೆಲ್ಲರೂ ಇದನ್ನು ಕೇಳಿದ್ದೇವೆ ಮತ್ತು ಓದಿ ತಿಳಿದುಕೊಂಡಿದ್ದೇವೆ. ಹಿಂದಿನ ಕಾಲದಲ್ಲಿ ರೋಗಿಗಳನ್ನು ಪರೀಕ್ಷಿಸುವಾಗ ಶಾರೀರಿಕ ಮತ್ತು ಮಾನಸಿಕ ರೋಗಲಕ್ಷಣಗಳ ಆಧಾರದಲ್ಲಿ ಮಾತ್ರವಲ್ಲ, ‘ಇದರ ಹಿಂದೆ ದೈವೀ ಕಾರಣವಿದೆಯೇ ?’, ಎಂಬುದರ ವಿಚಾರವನ್ನು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.

‘ಕರ್ಮಜಾ ವ್ಯಾಧಯಃ ಕೆಚಿತ್ ದೋಷಜಾ ಸನ್ತಿ ಚಾಪರೆ |’

ಅರ್ಥ : ಕೆಲವು ಕಾಯಿಲೆಗಳು ಕರ್ಮದಿಂದ ಉಂಟಾದರೆ, ಕೆಲವು ಕಾಯಿಲೆಗಳು ದೋಷಗಳಿಂದ ಉಂಟಾಗುತ್ತವೆ.

ಸುಶ್ರುತ ಸಂಹಿತೆಯಲ್ಲಿಯೂ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಕುರಿತಾದ ಪ್ರಾಚೀನ ಸಂಸ್ಕೃತಪಾಠವಿದೆ, ಅದರ ಅರ್ಥವೆಂದರೆ ಕಾಯಿಲೆಗಳಲ್ಲಿ ಮೂರು ವಿಧಗಳಿವೆ. ಮೊದಲ ವಿಧದಲ್ಲಿ, ರೋಗವು ಭಾಗ್ಯ-ಕರ್ಮದಿಂದ ಅಂದರೆ ಪೂರ್ವಜನ್ಮದ ಕರ್ಮ ಮತ್ತು ಈ ಜನ್ಮದ ಕರ್ಮದಿಂದಾಗುತ್ತದೆ, ಎರಡನೆಯ ವಿಧದಲ್ಲಿ, ರೋಗವು ವಾತ, ಪಿತ್ತ ಮತ್ತು ಕಫದ ಇವುಗಳ ಅಸಮತೋಲನದಿಂದ ಉಂಟಾಗುತ್ತದೆ ಹಾಗೂ ಮೂರನೇ ವಿಧದ ರೋಗವು ಮೇಲಿನ ಎರಡೂ ಕಾರಣಗಳು ಅಂದರೆ ಸ್ವಲ್ಪ ಪ್ರಮಾಣದಲ್ಲಿ ಭಾಗ್ಯದಿಂದ ಮತ್ತು ಸ್ವಲ್ಪ ಪ್ರಮಾಣದಲ್ಲಿ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ (ಪ್ರಾರಬ್ಧದಿಂದ ಅಥವಾ ಅಯೋಗ್ಯ ಕರ್ಮದಿಂದಾಗಿದೆ)ದಿಂದ ಆಗುತ್ತದೆ. ಇದನ್ನು ಪತ್ತೆಹಚ್ಚಿ ಅದಕ್ಕನುಗುಣವಾಗಿ ಅದಕ್ಕೆ ಚಿಕಿತ್ಸೆ ಅಥವಾ ಉಪಾಯ ಮಾಡಲಾಗುತ್ತಿತ್ತು.

೪. ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಾತ್ಮಶಾಸ್ತ್ರದ ಅಧ್ಯಯನದ ಒಲವು ವಿಶ್ವದಾದ್ಯಂತ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ೧೯೯೨ ರ ಅಂಕಿಅಂಶಕ್ಕನುಸಾರ ಮಾನ್ಯತೆ ಪಡೆದ ಅಮೆರಿಕನ್ ವೈದ್ಯಕೀಯ ೧೨೬ ಮಹಾವಿದ್ಯಾಲಯಗಳಲ್ಲಿ ಒಂದೇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ‘ಆಧ್ಯಾತ್ಮಿಕತೆ ಮತ್ತು ಚಿಕಿತ್ಸೆ’ ಈ ವಿಷಯಗಳ ಕುರಿತು ಪಠ್ಯಕ್ರಮ ನಡೆಯುತ್ತಿತ್ತು. ಅನಂತರ ೨೦೧೪ ನೆ ಇಸ್ವಿಯಲ್ಲಿ ಇದರ ಸಂಖ್ಯೆಯನ್ನು ನೋಡಿದರೆ, ಈ ಪಠ್ಯಕ್ರಮವನ್ನು ಮಾನ್ಯತೆ ಪಡೆದ ೧೪೭ ಅಮೇರಿಕನ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರಾರಂಭಿಸಲಾಗಿದೆ. ಅಷ್ಟೇ ಅಲ್ಲ, ‘ಧರ್ಮ, ಆಧ್ಯಾತ್ಮಿಕತೆ ಮತ್ತು ಆರೋಗ್ಯ’ ಕುರಿತಾದ ಲೇಖನಗಳು ಮುದ್ರಣವಾಗುವ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಇದರರ್ಥ ವೈದ್ಯಕೀಯ ಕ್ಷೇತ್ರದಲ್ಲಿಯೂ ಧರ್ಮ ಮತ್ತು ಅಧ್ಯಾತ್ಮಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ, ಎಂದೇ ಹೇಳಬೇಕಾಗುವುದು.

ವೈಶಿಷ್ಟ್ಯಪೂರ್ಣ ಗಮನಾರ್ಹ ಅಂಶಗಳು

ಅ. ‘ವೈದ್ಯಕೀಯ ಚಿಕಿತ್ಸೆಯ ಆಧ್ಯಾತ್ಮಿಕ ಸಂಶೋಧನೆ’ ಕುರಿತು ಮಾಹಿತಿ ನೀಡಿದ ನಂತರ ಡಾ. ರಂಗನಾಥ ನಾಯಕ್ ಇವರು ‘ಸ್ಪಿರಿಚ್ಯುವಲ್ ಸೈನ್ಸ್ ರೀಸರ್ಚ್ ಫೌಂಡೇಶನ್’ನ (ಎಸ್.ಎಸ್.ಆರ್.ಎಫ್.) ಜಾಲತಾಣದ ಮಾಹಿತಿಯನ್ನು ವಿಚಾರಿಸಿಕೊಂಡರು. ಈ ಸಮಯದಲ್ಲಿ, ಡಾ. ನಾಯಕ್ ಅವರು ಕಳೆದ ೧೦ ವರ್ಷಗಳಿಂದ ತಾನು ಸಹ ವೈದ್ಯಕೀಯ ಚಿಕಿತ್ಸೆಯಲ್ಲಿ ವಿವಿಧ ನಾಮಜಪ ಇತ್ಯಾದಿ ಚಿಕಿತ್ಸೆಗಳನ್ನು ಸೇರಿಸಿದ್ದೇನೆ ಎಂದು ಹೇಳಿದರು.

ಆ. ಸಂದೇಹನಿವಾರಣೆಯ ಭಾಗ ನಡೆಯುವಾಗ ಓರ್ವ ಡಾಕ್ಟರರು ತಮ್ಮ ಪ್ರಯತ್ನವನ್ನು ಹೇಳಿದರು. ಕುಲದೇವತೆಯ ಉಪಾಸನೆ ಮತ್ತು ಇತರ ತೊಂದರೆಗಳ ನಿವಾರಣೆಗಾಗಿ ‘ಶ್ರೀ ಗುರುದೇವ ದತ್ತ |’ ಈ ನಾಮಜಪ ಮಾಡಿದ್ದರಿಂದ ಅವರ ವ್ಯವಸಾಯದಲ್ಲಿ ಆಗುತ್ತಿರುವ ಲಾಭದ ಬಗ್ಗೆ ಹೇಳಿದರು.

‘ವೆಬಿನಾರ್’ ನಡೆಯುವಾಗ ಮತ್ತು ಆದ ನಂತರ ಡಾಕ್ಟರರು ವ್ಯಕ್ತಪಡಿಸಿದ ಅಭಿಪ್ರಾಯ

೧. ಡಾ. ರಂಗನಾಥ ನಾಯಕ್ : ಡಾ. ಜ್ಯೋತಿ ಖೋದನಾಪುರ ಬಹಳ ಸರಳ ಮತ್ತು ಸುಲಭ ಭಾಷೆಯಲ್ಲಿ ಮಾಹಿತಿಯನ್ನು ನೀಡುತ್ತಿದ್ದರು. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!

೨. ಡಾ. ಸುಮನ್ ಕುಲಕರ್ಣಿ : ಇಂತಹ ಆಧ್ಯಾತ್ಮಿಕ ಸಂಶೋಧನೆಗಳ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

೩. ಡಾ. ನಾಗವೇಣಿ ಅಸಪಾಲಿ : ೮ ರಿಂದ ೧೦ ದಿನಗಳ ಇಂತಹ ಪ್ರಾಯೋಗಿಕ ಶಿಬಿರವನ್ನು ಆಯೋಜಿಸಬೇಕು, ಇದನ್ನು ನಾವು ಕೃತಿಯ ಸ್ತರದಲ್ಲಿ ಆಯೋಜಿಸಬಹುದು ಮತ್ತು ದೈನಂದಿನ ಚಟುವಟಿಕೆಗಳ ವರದಿಯನ್ನು ಸಹ ಕೊಡಬಹುದು. ಆಧ್ಯಾತ್ಮಿಕ ಉನ್ನತಿಯ ದೃಷ್ಟಿಯಿಂದ ನಾವು ಈ ಆಧ್ಯಾತ್ಮಿಕ ಶಕ್ತಿಯ ಪ್ರಯೋಜನವನ್ನು ಪಡೆಯಬಹುದು.

೪. ಡಾ. ಸಮೀರಾ : ನಾನು ಕಳೆದ ೫ ವರ್ಷಗಳಿಂದ ಅಧ್ಯಾತ್ಮಶಾಸ್ತ್ರದ ಆಚರಣೆ ಮಾಡುತ್ತಿದ್ದೇನೆ. ಇಂದಿನ ಕಾರ್ಯಕ್ರಮ ನನ್ನ ವೈಯಕ್ತಿಕ ಮತ್ತು ವ್ಯವಹಾರ ಕ್ಷೇತ್ರಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ನನಗೆ ಖಾತ್ರಿಯಿದೆ.

೫. ಡಾ. ಶಾರದಾ : ವೈದ್ಯರು ಹೆಚ್ಚಾಗಿ ರೋಗಿಗಳಿಂದ ಬರುವ ನಕಾರಾತ್ಮಕ ಶಕ್ತಿಯನ್ನು  ಎದುರಿಸಬೇಕಾಗುತ್ತದೆ. ಇದು ಆಗಾಗ ಕೆಲವು ಆಧ್ಯಾತ್ಮಿಕ ತೊಂದರೆ ಅಥವಾ ಅಕಾಲಿಕ ಸಾವಿಗೆ ಕಾರಣವಾಗುತ್ತದೆ. ಅಂತಹ ಸಮಯದಲ್ಲಿ ಆತ್ಮಶಕ್ತಿಯನ್ನು ಪ್ರಬಲವಾಗಿರಿಸುವುದು ಒಂದು ಸವಾಲಾಗಿದೆ. ಆದ್ದರಿಂದ ‘ಈ ವೆಬಿನಾರ್’ ಡಾಕ್ಟರರಿಗಾಗಿ ಅತ್ಯಂತ ಉಪಯುಕ್ತವಾಗಿದೆ.

ಈ ವೆಬಿನಾರ್‌ಗೆ ಉಪಸ್ಥಿತರಿದ್ದವರಲ್ಲಿ ೫೩ ಮಂದಿ ಆನ್‌ಲೈನ್ ‘ಅಭಿಪ್ರಾಯ ಪತ್ರ’ವನ್ನು ತುಂಬಿಸಿದ್ದಾರೆ. ಅದರಲ್ಲಿ ೪೩ ಜನರು ‘ವೆಬ್‌ನಾರ್’ಅನ್ನು ತುಂಬಾ ಇಷ್ಟವಾಯಿತು’ ಎಂದು ಹೇಳಿದರು ಮತ್ತು ೪೨ ಜನರು ‘ಇಂತಹ ವೆಬಿನಾರ್‌ಗೆ ಯಾವಾಗಲೂ ಉಪಸ್ಥಿತರಿರುತ್ತೇವೆ’ ಎಂದು ಹೇಳಿದರು.

ವಾಚಕರಲ್ಲಿ ವಿನಂತಿ : ಈ ವೆಬಿನಾರ್ ‘ಯೂ ಟ್ಯೂಬ್’ನಲ್ಲಿ ನೋಡಲು https://youtu.be/G3cpMG1w1sc ಈ ಲಿಂಕ್‌ನಲ್ಲಿ ಲಭ್ಯವಿದೆ