ಸಾಧಕರಿಗೆ ಸೂಚನೆ ಮತ್ತು ಓದುಗರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ನಮ್ರ ವಿನಂತಿ !

ಮನೆಯಲ್ಲಿದ್ದುಕೊಂಡೇ ಆರ್ಥಿಕ ಲಾಭವನ್ನು ಪಡೆಯುವ ಆಮಿಷಗಳನ್ನೊಡ್ಡುವ ಯೋಜನೆಗಳಿಗೆ ಬಲಿಯಾಗದಿರಿ, ಹಾಗೆಯೇ ಇಂತಹ ಯೋಜನೆಗಳ ಮಾಹಿತಿಯನ್ನು ಇತರರಿಗೆ ಕಳುಹಿಸಿ ಅವರ ದಾರಿ ತಪ್ಪಿಸಬೇಡಿ !

ಸದ್ಯ ಕೊರೋನಾ ಮಹಾಮಾರಿಯಿಂದ ಅನೇಕ ಕಂಪನಿಗಳು ಮುಚ್ಚಿದ್ದು, ಎಲ್ಲೆಡೆ ನಿರುದ್ಯೋಗ ಹೆಚ್ಚಾಗಿದೆ. ಇದರಿಂದ ಸಾಮಾನ್ಯ ಕುಟುಂಬಗಳ ಉದರನಿರ್ವಹಣೆ ಕಠಿಣವಾಗಿದೆ. ಈ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಆರ್ಥಿಕ ಆಮಿಷಗಳನ್ನೊಡ್ಡುವ ಯೋಜನೆಗಳನ್ನು (ಸ್ಕೀಮ್) ತಯಾರಿಸಿ ಅವುಗಳನ್ನು ಎಲ್ಲೆಡೆ ಪ್ರಸಾರ ಮಾಡುತ್ತಿದ್ದಾರೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ನಾಗರಿಕರು ಆರ್ಥಿಕವಾಗಿ ಮೋಸ ಹೋಗುವ ಸಾಧ್ಯತೆಯಿದೆ.

೧. ನಾಗರಿಕರನ್ನು ಮೋಸ ಮಾಡುವ ಒಂದು ವಿಡಿಯೋ ಪ್ರಸಾರ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವುದು

ಸದ್ಯ ಸಾಮಾಜಿಕ ಪ್ರಸಾರ ಮಾಧ್ಯಮಗಳ ಮುಖಾಂತರ ಆರ್ಥಿಕ ಲಾಭವನ್ನು ಪಡೆಯುವ ಯೋಜನೆಯ (ಸ್ಕೀಮ್) ಸಂದರ್ಭದಲ್ಲಿ ಒಂದು ವಿಡಿಯೋ ಪ್ರಸಾರವಾಗುತ್ತಿದೆ. ಅದರಲ್ಲಿ ಕೆಲವು ಆಪ್‌ಗಳು ಮತ್ತು ಅವುಗಳನ್ನು ಅಭಿವೃದ್ಧಿ ಪಡಿಸಿರುವ ಹೆಸರಾಂತ ಕಂಪನಿಗಳ ಉಲ್ಲೇಖವಿದ್ದು, ಒಂದು ಆಪ್ ‘ಡೌನಲೋಡ್ ಮಾಡಿಕೊಳ್ಳುವಂತೆ ಕರೆ ನೀಡಲಾಗಿದೆ. ಇದರಿಂದ ನಾಗರಿಕರು ಮೋಸ ಹೋಗುವ ಸಾಧ್ಯತೆಯಿದೆ.

೨. ‘ಒಂದು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಅಧಿಕ ಮೊತ್ತವನ್ನು ಭರಿಸಿ ಯೋಜನೆಯಲ್ಲಿ ಭಾಗವಹಿಸಿರಿ ಹಾಗೂ ವಿಡಿಯೋಗಳನ್ನು ಕಳುಹಿಸುವುದು, ಜಾಹೀರಾತುಗಳನ್ನು ನೋಡುವುದು, ಇಷ್ಟೇ ಮಾಡಿ ಮನೆಯಲ್ಲಿದ್ದುಕೊಂಡೇ ಹಣ ಸಂಪಾದಿಸಿರಿ, ಎಂದು ವಿಡಿಯೋದ ಮುಖಾಂತರ ಕರೆ ನೀಡಲಾಗಿದೆ.

ಈ ವಿಡಿಯೋದಲ್ಲಿ ‘೨೦೧೬ ರಿಂದ ‘ಅಪ್ಲಿಕೇಶನ್ ಕ್ಷೇತ್ರದಲ್ಲಿ ಕಾರ್ಯನಿರತವಾಗಿರುವ ಒಂದು ಕಂಪನಿಯು ಒಂದು ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಭಾಗವಹಿಸಲು ನಾಗರಿಕರು ಒಂದು ಜಾಲತಾಣಕ್ಕೆ ಭೇಟಿ ನೀಡಬೇಕು ಮತ್ತು ೧ ಸಾವಿರ ರೂಪಾಯಿಗಳನ್ನು ಅಥವಾ ಅದಕ್ಕಿಂತ ಅಧಿಕ ಮೊತ್ತವನ್ನು ಆನ್‌ಲೈನ್ ಮೂಲಕ ಭರಿಸಬೇಕು. ಈ ಕಂಪನಿಯ ಆಪ್ ಡೌನಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಸಂಚಾರವಾಣಿ ಕ್ರಮಾಂಕವನ್ನು ನೋಂದಣಿ (ರಿಜಿಸ್ಟರ್) ಮಾಡಿಕೊಳ್ಳಬೇಕು. ತದನಂತರ ಇದನ್ನು ಉಪಯೋಗಿಸುವವರು (ಯೂಸರ್) ವಿಡಿಯೋಗಳನ್ನು ಶೇರ್ ಮಾಡುವುದು ಹಾಗೂ ಜಾಹೀರಾತುಗಳನ್ನು ನೋಡುವುದು, ಇಷ್ಟು ಮಾಡಿದರೆ ಅವರು ಮನೆಯಲ್ಲಿ ಕುಳಿತುಕೊಂಡೇ ಹಣಗಳಿಸಬಹುದು. ಈ ಯೋಜನೆಯಲ್ಲಿ ಸಾಧ್ಯವಾದಷ್ಟು ಅಧಿಕ ಜನರನ್ನು ಭಾಗವಹಿಸುವಂತೆ ಮಾಡಿದರೆ ಅಧಿಕ ಹಣ ಮರಳಿ ದೊರೆಯುವುದು. ಮುಂದೆ ಲಕ್ಷಾಂತರ ಮತ್ತು ಕೋಟ್ಯಂತರ ರೂಪಾಯಿಗಳು ಸಿಗುತ್ತವೆ ಎಂದು ಹೇಳಲಾಗಿದೆ.

೩. ಇಂತಹ ವಿಡಿಯೋ ಇತರರಿಗೆ ಕಳುಹಿಸಬಾರದು |

ಕೆಲವು ಜನರು ಮೇಲಿನ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಈ ವಿಡಿಯೋವನ್ನು ಇತರರಿಗೆ ಕಳುಹಿಸುತ್ತಿದ್ದಾರೆ. ಹೀಗೆ ಮಾಡುವುದರಿಂದ ‘ಹಣ ಹೂಡಿಕೆ ಮಾಡಲು ಇತರರನ್ನು ಪ್ರೋತ್ಸಾಹಿಸಿದ್ದಾರೆ, ಎಂದು ಮೋಸ ಹೋಗಿರುವ ನಾಗರಿಕರು ಭವಿಷ್ಯದಲ್ಲಿ ವಿಡಿಯೋ ಕಳುಹಿಸುವವರಿಗೆ ಪ್ರಶ್ನಿಸಬಹುದು. ಆದುದರಿಂದ ಇಂತಹ ವಿಡಿಯೋಗಳನ್ನು ಇತರರಿಗೆ ಕಳುಹಿಸಬಾರದು. ಹಣವನ್ನು ದುಪ್ಪಟ್ಟು ಮಾಡಿಕೊಡುವ ಯೋಜನೆಗಳ ಹೆಸರಿನಡಿಯಲ್ಲಿ ಇಲ್ಲಿಯವರೆಗೆ ಸಾವಿರಾರು ಜನರು ಮೋಸ ಹೋಗಿದ್ದಾರೆ. ಆದುದರಿಂದ ಎಲ್ಲರೂ ಸಮಯವಿರುವಾಗಲೇ ಜಾಗೃತಗೊಂಡು ಆರ್ಥಿಕ ಆಮಿಷಗಳ ಯಾವುದೇ ಜಾಹೀರಾತುಗಳಿಗೆ ಬಲಿಯಾಗಬಾರದು !