ವಿಶ್ವದ ಆರಂಭದಿಂದ ಭೂಮಿಯ ಮೇಲಿರುವ ಸನಾತನ ವೈದಿಕ ಧರ್ಮ (ಹಿಂದೂ ಧರ್ಮ), ಹಿಂದೂಗಳ ಧರ್ಮಗ್ರಂಥಗಳು, ದೇವತೆಗಳು, ಧಾರ್ಮಿಕ ವಿಧಿಗಳು, ಅಧ್ಯಾತ್ಮ ಮುಂತಾದವುಗಳನ್ನು ಅನೇಕರು ಟೀಕಿಸುತ್ತಾರೆ. ಕೆಲವು ಜನರಿಗೆ ಈ ಟೀಕೆಗಳು ನಿಜವೆನಿಸುತ್ತವೆ ಮತ್ತು ಅನೇಕರಿಗೆ ‘ಈ ಟೀಕೆಗಳು ಸರಿಯಲ್ಲ, ಎಂಬುದು ಗಮನಕ್ಕೆ ಬಂದರೂ ಟೀಕೆಗಳನ್ನು ಖಂಡಿಸಲು ಸಾಧ್ಯವಾಗುವುದಿಲ್ಲ. ಕೆಲವು ವಿದ್ವಾಂಸರಿಂದ ಅಥವಾ ಅಧ್ಯಯನಕಾರರಿಂದಲೂ ಅಜ್ಞಾನದಿಂದ ಅಯೋಗ್ಯ ವಿಚಾರಗಳನ್ನು ಮಂಡಿಸಲಾಗುತ್ತದೆ.
ಇಂತಹ ಎಲ್ಲ ಅಯೋಗ್ಯ ವಿಚಾರ ಮತ್ತು ಟೀಕೆಗಳಿಗೆ ಯೋಗ್ಯ ಪ್ರತ್ಯುತ್ತರವನ್ನು ನೀಡದಿರುವುದರಿಂದ ಹಿಂದೂಗಳ ಶ್ರದ್ಧೆಯು ಡೋಲಾಯಮಾನವಾಗುತ್ತದೆ. ಇದರಿಂದ ಧರ್ಮಹಾನಿಯಾಗುತ್ತದೆ. ಈ ಧರ್ಮಹಾನಿಯನ್ನು ತಡೆಗಟ್ಟಲು ಹಿಂದೂಗಳಿಗೆ ಬೌದ್ಧಿಕ ಬಲ ಸಿಗಬೇಕೆಂದು ಅಯೋಗ್ಯ ವಿಚಾರ ಮತ್ತು ಟೀಕೆಗಳ ಖಂಡನೆಯನ್ನು ಈ ಲೇಖನದಲ್ಲಿ ಕೊಡಲಾಗಿದೆ.
೧. ಶ್ರಾದ್ಧವಿಧಿಯು ಬ್ರಾಹ್ಮಣರ ಹೊಟ್ಟೆ ತುಂಬಿಸಿಕೊಳ್ಳುವ ಪಿತೂರಿ ಎಂಬ ಟೀಕೆ !
ಟೀಕೆ : ಶ್ರಾದ್ಧವು ಬ್ರಾಹ್ಮಣರ ಪಿತೂರಿಯಾಗಿದೆ. ಬ್ರಾಹ್ಮಣರು ಇದನ್ನು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ.
ಖಂಡನೆ
ಅ. ಶ್ರಾದ್ಧವಿಧಿಯು ಲಕ್ಷಗಟ್ಟಲೆ ವರ್ಷಗಳಿಂದ ನಡೆದು ಬಂದಿರುವ ವಿಧಿಯಾಗಿದೆ : ಸಂಪೂರ್ಣ ಹಿಂದೂಸ್ಥಾನದಲ್ಲಿ ಲಕ್ಷಗಟ್ಟಲೆ ವರ್ಷಗಳಿಂದ ಇಂದಿನವರೆಗೆ ಊರೂರುಗಳಲ್ಲಿ, ಮನೆಮನೆಗಳಲ್ಲಿ ಎಲ್ಲ ಕಡೆಗಳಲ್ಲಿ ಶ್ರಾದ್ಧವನ್ನು ಮಾಡುತ್ತಾರೆ. ‘ನೀವು ಎಲ್ಲರನ್ನೂ ಎಲ್ಲ ಸಮಯದಲ್ಲಿಯೂ ಮೂರ್ಖರನ್ನಾಗಿ ಮಾಡಲಾರಿರಿ (You can’t fool all the people all the time), ಎಂಬ ಒಂದು ಪ್ರಸಿದ್ಧ ವಚನವಿದೆ. ಒಂದು ವೇಳೆ ಶ್ರಾದ್ಧವಿಧಿಯು ಬ್ರಾಹ್ಮಣರ ಪಿತೂರಿಯಾಗಿದ್ದರೆ, ಅದು ಸಮಾಜ ವನ್ನು ಇಷ್ಟು ವರ್ಷಗಳವರೆಗೆ ಮೋಸಗೊಳಿಸಬಹುದಿತ್ತೇ ? ಇಂದಿಗೂ ಗಯಾ, ತ್ರ್ಯಂಬಕೇಶ್ವರ, ರಾಮಟೇಕ, ಪ್ರಯಾಗ, ಗೋಕರ್ಣ, ನೃಸಿಂಹವಾಡಿ ಇತ್ಯಾದಿ ಪವಿತ್ರ ಸ್ಥಳಗಳಲ್ಲಿ ಶ್ರಾದ್ಧಕರ್ಮಗಳು ನಡೆಯುತ್ತವೆ.
ಆ. ಕಲಿಯುಗದಿಂದಾಗಿ ಇತರೆಡೆಗಳಲ್ಲಿ ಹಣವನ್ನು ದುಂದುವೆಚ್ಚ ಮಾಡುವವರಿಗೆ ತಮ್ಮ ಪಿತೃಗಳಿಗಾಗಿ ಬ್ರಾಹ್ಮಣರಿಗೆ ಭೋಜನ ನೀಡುವುದು ಅಪ್ರಸ್ತುತವೆನಿಸುತ್ತದೆ : ಬಹುಶಃ ಇದು ಕಲಿಯುಗವಾಗಿರುವುದರಿಂದ ಜನರು ಬಹಳ ಸ್ವಾರ್ಥಿಗಳಾಗಿದ್ದಾರೆ. ಜನರು ಮಿತ್ರರಿಗಾಗಿ ಮದ್ಯಪಾನದ ದೊಡ್ಡ ದೊಡ್ಡ ಕೂಟಗಳನ್ನು (ಪಾರ್ಟಿ) ಏರ್ಪಡಿಸುತ್ತಾರೆ. ಅದಕ್ಕಾಗಿ ದುಂದುವೆಚ್ಚ ಮಾಡುತ್ತಾರೆ. ಅವರಿಗೆ ಅದರಲ್ಲಿಯೇ ಆನಂದವಿದೆ ಎಂದು ಅನಿಸುತ್ತದೆ; ಆದರೆ ಯಾವ ತಂದೆ-ತಾಯಿಯರ ಸೇವೆಯನ್ನು ಆಯುಷ್ಯಪೂರ್ತಿ ಮಾಡಿದರೂ ಅವರ ಋಣ ತೀರಿಸಲು ಸಾಧ್ಯವಾಗುವುದಿಲ್ಲವೋ, ಅವರ ಮೃತ್ಯುವಿನ ನಂತರ ಅವರ ಋಣದಿಂದ ಮುಕ್ತರಾಗಲು ಶಾಸ್ತ್ರವಿಧಿಗನುಸಾರ ಅವರ ಪ್ರೀತ್ಯರ್ಥ ಓರ್ವ ಬ್ರಾಹ್ಮಣನಿಗೆ (ಆ ಬ್ರಾಹ್ಮಣನು ಆ ಪಿತೃವಿನ ಪ್ರತಿನಿಧಿಯಾಗಿರುತ್ತಾನೆ) ಭೋಜನ ಕೊಡಲೂ ಎಂಬ ವಿಷಯವೂ ಬಹಳ ಆಶ್ಚರ್ಯಕರವಾಗಿದೆ. ಮನುಷ್ಯನು ಎಷ್ಟೇ ಶ್ರೀಮಂತನಾಗಿದ್ದರೂ ಮುಖ್ಯ ಶ್ರಾದ್ಧವಿಧಿಯಲ್ಲಿ ಒಬ್ಬನನ್ನು ದೇವರಿಗಾಗಿ ಮತ್ತು ಇನ್ನೊಬ್ಬನನ್ನು ಪಿತೃವಿಗಾಗಿ ಹೀಗೆ ಕೇವಲ ಇಬ್ಬರು ಬ್ರಾಹ್ಮಣರನ್ನು ಕರೆಯುವುದು ಆವಶ್ಯಕವಾಗಿರುತ್ತದೆ. ಹೆಚ್ಚೆಂದರೆ ಐದು ಜನ ಬ್ರಾಹ್ಮಣರನ್ನು ಕರೆಯುತ್ತಾರೆ.
ಇ. ಅತಿಥಿಗೆ ಭೋಜನ ಕೊಡುವುದು : ‘ಶ್ರಾದ್ಧದ ಸಮಯದಲ್ಲಿ ಬಂದ ಅತಿಥಿಗೆ ಭೋಜನ ಕೊಡುವುದೆಂದರೆ ಪಿತೃಗಳನ್ನು ತೃಪ್ತಗೊಳಿಸುವುದು; ಏಕೆಂದರೆ ಯೋಗಿಗಳು, ಸಿದ್ಧಪುರುಷರು ಮತ್ತು ದೇವತೆಗಳು ಪೃಥ್ವಿಯ ಮೇಲೆ ಶ್ರಾದ್ಧವಿಧಿಗಳನ್ನು ನೋಡಲು ತಿರುಗಾಡುತ್ತಿರುತ್ತಾರೆ, ಎಂದು ಪುರಾಣದಲ್ಲಿ ಹೇಳಲಾಗಿದೆ. (ಆದುದರಿಂದಲೇ ‘ಅತಿಥಿ ದೇವೋ ಭವ |, ಎಂದು ಹೇಳಲಾಗಿದೆ.)
ಈ. ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿರುವ ನಿರ್ಧನ ಮನುಷ್ಯನಿಗೂ ಶಾಸ್ತ್ರದಲ್ಲಿ ಸುಲಭ ಉಪಾಯವನ್ನು ಹೇಳಲಾಗಿದೆ : ಎಲ್ಲ ರೀತಿಯಿಂದ ಅಸಮರ್ಥನಾದ ಮನುಷ್ಯನು ನಿರ್ಜನವಾದ ಅರಣ್ಯಕ್ಕೆ ಹೋಗಿ ಕೈಗಳನ್ನು ಮೇಲೆತ್ತಿ ದೊಡ್ಡಸ್ವರದಲ್ಲಿ ಮತ್ತು ಭಾವಪೂರ್ಣವಾಗಿ ‘ನಾನು ನಿರ್ಧನ ಮತ್ತು ಅನ್ನವಿರಹಿತನಾಗಿದ್ದೇನೆ. ನನ್ನನ್ನು ಪಿತೃಋಣದಿಂದ ಮುಕ್ತಗೊಳಿಸಿರಿ, ಎಂದು ಹೇಳಿದರೂ ಶ್ರಾದ್ಧ ಮಾಡಿದ ಪುಣ್ಯವು ಲಭಿಸುತ್ತದೆ.
ಉ. ತಮ್ಮ ಪರಿಸ್ಥಿತಿ ಸರಿ ಇಲ್ಲದಿದ್ದಲ್ಲಿ ದಕ್ಷಿಣಕ್ಕೆ ಮುಖ ಮಾಡಿ ಅಳುವುದು, ಶ್ರಾದ್ಧ ವಿಧಿಯೇ ಆಗಿದೆ. ಹೀಗಿದ್ದಾಗ ‘ಶ್ರಾದ್ಧವಿಧಿಯು ಬ್ರಾಹ್ಮಣರ ಹೊಟ್ಟೆಪಾಡಿಗೆ ಮಾಡಿದ ಕಪಟವಾಗಲು ಸಾಧ್ಯವಿದೆಯೇನು ?
೨. ಶ್ರಾದ್ಧ ಮಾಡುವುದು ಅನಾಗರಿಕವಾಗಿದೆ ಮತ್ತು ದಾನಕೊಡುವುದು ಅಥವಾ ಸಾಮಾಜಿಕ ಸಂಸ್ಥೆಗಳಿಗೆ ದೇಣಿಗೆ ಕೊಡುವುದು ಯೋಗ್ಯವಾಗಿದೆ ಎಂದು ಟೀಕಿಸುವುದು !
ಟೀಕೆ : ಶ್ರಾದ್ಧವಿಧಿಯು ಅನಾಗರಿಕವಾಗಿದೆ. ತಂದೆ-ತಾಯಿಯರ ತಿಥಿಗೆ ಅವರ ಛಾಯಾಚಿತ್ರವನ್ನಿಟ್ಟು ಹೂವುಗಳನ್ನು ಅರ್ಪಿಸಿ ಧೂಪ-ದೀಪ ಹಚ್ಚುವುದು, ಹಾಗೆಯೇ ಆ ನಿಮಿತ್ತದಿಂದ ಯಾವುದಾದರೊಂದು ಸಾಮಾಜಿಕ ಸಂಸ್ಥೆ ಅಥವಾ ಅನಾಥಾಲಯಕ್ಕೆ ಧಾನ್ಯ ಮುಂತಾದವುಗಳನ್ನು ದಾನ ಕೊಡುವುದೇ ಯೋಗ್ಯವಾಗಿದೆ.
ಖಂಡನೆ
ಅ. ಶ್ರಾದ್ಧವಿಧಿಯು ಶಾಸ್ತ್ರೋಕ್ತ ಪದ್ಧತಿಯಿಂದ ಮಂತ್ರಸಹಿತ ಪೂರ್ಣ ಶ್ರದ್ಧೆಯಿಂದ ಮಾಡಿದ ವಿಧಿಯಾಗಿರುವುದರಿಂದ ಪಿತೃಗಳು ಪ್ರಸನ್ನರಾಗುತ್ತಾರೆ : ಶ್ರಾದ್ಧವಿಧಿಯೆಂದು ಕೇವಲ ದಾನಧರ್ಮ ಮಾಡುವುದನ್ನೇ, ಯೋಗ್ಯವೆಂದು ಭಾವಿಸುವುದೆಂದರೆ ‘ಯಾವುದಾದರೊಂದು ರೋಗಕ್ಕೆ ಮಾಡಬೇಕಾದ ನಿರ್ದಿಷ್ಟ ಉಪಚಾರವನ್ನು ಬಿಟ್ಟು ಬೇರೆ ಉಪಚಾರವನ್ನು ಮಾಡಿದಂತಾಗುವುದಿಲ್ಲವೇ ? ಶ್ರಾದ್ಧವಿಧಿಯೆಂದರೆ ಶಾಸ್ತ್ರೋಕ್ತ ಪದ್ಧತಿಯಿಂದ ಮಂತ್ರಸಹಿತ ಪೂರ್ಣ ಶ್ರದ್ಧೆಯಿಂದ ಮಾಡಿದ ವಿಧಿಯಾಗಿದೆ. ಶ್ರಾದ್ಧವನ್ನು ಮಾಡದೇ ಭಾವನೆಯಿಂದ ದಾನ ಮಾಡಿದರೆ, ಅದರಿಂದ ಪಿತೃಗಳು ಪ್ರಸನ್ನರಾಗುವುದಿಲ್ಲ; ಏಕೆಂದರೆ ಆ ದಾನದ ಫಲವು ಪಿತೃಗಳಿಗೆ ದೊರೆಯುವುದಿಲ್ಲ.
ಆ. ಶ್ರಾದ್ಧವಿಧಿಯನ್ನು ಮಾಡದಿದ್ದರೆ ಅತೃಪ್ತ ಪಿತೃಗಳು ರಕ್ತವನ್ನು ಕುಡಿಯುವುದರಿಂದ ಶಾರೀರಿಕ ದೋಷ ನಿರ್ಮಾಣವಾಗಿ ಅದು ಸಂತತಿಯ ಮೇಲೆ ಪರಿಣಾಮ ಬೀರುವುದು : ‘ಅತರ್ಪಿತಾಃ ಪಿತರಃ ರುಧಿರಂ ಪಿಬಂತಿ | ಅಂದರೆ ಯಾವನ ‘ಶ್ರಾದ್ಧವನ್ನು ಮಾಡುವುದಿಲ್ಲವೋ, ಅವನು ಶ್ರಾದ್ಧ ವಿಧಿ ಮಾಡದಿರುವವನ ರಕ್ತವನ್ನು ಕುಡಿಯುತ್ತಾನೆ. ಪಿತೃಗಳು ರಕ್ತದ ಅಧಿಷ್ಠಾತ್ರಿ ದೇವತೆಗಳಾಗಿದ್ದಾರೆ. ಶಾಸ್ತ್ರಕ್ಕನುಸಾರ ಶ್ರಾದ್ಧ ಇತ್ಯಾದಿ ವಿಧಿಗಳನ್ನು ಮಾಡದಿದ್ದರೆ, ಅವರು ರಕ್ತದಲ್ಲಿ ಅತೀ ಸೂಕ್ಷ್ಮದೋಷವನ್ನು ನಿರ್ಮಿಸುತ್ತಾರೆ. ರಕ್ತದೋಷದಿಂದಾಗಿ ವೀರ್ಯ ದುರ್ಬಲವಾಗುತ್ತದೆ, ಇದರಿಂದ ಸಂತತಿಯು ದುರ್ಬಲ, ಅಂಗವಿಕಲ ಮತ್ತು ರೋಗಗ್ರಸ್ತ ಕೂಡಿರುತ್ತದೆ.
ಇ. ಶ್ರಾದ್ಧಾದಿ ಶಾಸ್ತ್ರಕರ್ಮಗಳಿಂದ ಮೃತ ಪಿತೃಗಳಿಗೆ ಶಕ್ತಿ ಪ್ರಾಪ್ತವಾಗುವುದು : ಶ್ರಾದ್ಧಾದಿ ಶಾಸ್ತ್ರಕರ್ಮಗಳಿಂದ ಪಿತೃಗಳ ವಾಯುರೂಪ ಸೂಕ್ಷ್ಮದೇಹಕ್ಕೆ ಶಕ್ತಿ ಸಿಗುತ್ತದೆ. ಮೃತ್ಯುವಿನ ನಂತರ ಇನ್ನೊಂದು ದೇಹವನ್ನು (ಯಾತನಾದೇಹ) ಧರಿಸಿ ಜೀವವು ಪರಲೋಕಕ್ಕೆ ಹೋಗುತ್ತದೆ. ಅದು ಪ್ರೇತರೂಪಿ, ಅಶರೀರವಾಗಿರುತ್ತದೆ, ಅಂದರೆ ಅದಕ್ಕೆ ದೇಹವಿರುವುದಿಲ್ಲ. ಅದಕ್ಕೆ ಹೊಸ ದೇಹ ಪ್ರಾಪ್ತವಾಗಬೇಕೆಂದು, ಶ್ರಾದ್ಧ ಮತ್ತು ಔರ್ಧ್ವಐಹಿಕ ಕ್ರಿಯೆಗಳು ಆವಶ್ಯಕವಾಗಿವೆ. ಇದರಿಂದ, ಶ್ರಾದ್ಧವಿಧಿಯೆಂದು ಕೇವಲ ದಾನಧರ್ಮ ಮಾಡುವುದು ಅಯೋಗ್ಯವಾಗಿದೆ, ಎಂಬುದು ಗಮನಕ್ಕೆ ಬಂದಿರಬಹುದು ! – ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ಡಿಸೆಂಬರ್ ೨೦೦೮ ಮತ್ತು ಜನವರಿ ೨೦೦೯)
೩. ಜೀವಂತವಿರುವ ತಂದೆ, ಅಜ್ಜ ಮುಂತಾದವರನ್ನು ಸತ್ಕರಿಸುವುದೆಂದರೆ ಶ್ರಾದ್ಧವೆಂದು ಹೇಳುವುದು !
ಟೀಕೆ : ‘ಬದುಕಿರುವ ತಂದೆ, ಕೀರ್ತಿಶಾಲಿ ಅಜ್ಜ, ಮುತ್ತಜ್ಜ ಮುಂತಾದವರ ಸತ್ಕಾರ ಮಾಡುವುದೆಂದರೆ ಶ್ರಾದ್ಧ. – ದಯಾನಂದ ಸ್ವಾಮಿ, ಸ್ಥಾಪಕರು, ಆರ್ಯ ಸಮಾಜ
ಖಂಡನೆ
ಅ. ಶ್ರಾದ್ಧವನ್ನು ಕೇವಲ ಮೃತ ವ್ಯಕ್ತಿಗಾಗಿ ಮಾಡುತ್ತಾರೆ : ಜೀವಂತವಿರುವ ತಂದೆ, ಅಜ್ಜ ಮುಂತಾದವರ ಸತ್ಕಾರವೆಂದರೆ ಶ್ರಾದ್ಧ, ಎಂಬುದರ ಬಗ್ಗೆ ಸ್ವಾಮಿ ದಯಾನಂದರು ಮನುವಿನ ಯಾವ ಶ್ಲೋಕಗಳ ಸಂದರ್ಭವನ್ನು ಕೊಟ್ಟಿದ್ದಾರೆಯೋ, ಅವುಗಳಿಂದ ತಂದೆ ಜೀವಂತವಿರುವಾಗ ಅವನ ಶ್ರಾದ್ಧವನ್ನು ಮಾಡುವುದು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಶ್ರಾದ್ಧವನ್ನು ಕೇವಲ ಮೃತ ವ್ಯಕ್ತಿಗಾಗಿ ಮಾತ್ರ ಮಾಡುತ್ತಾರೆ.
ಆ. ಶ್ರಾದ್ಧದಿಂದಾಗುವ ಲಾಭಗಳು : ಪೃಥ್ವಿಯ ಮೇಲೆ (ದಕ್ಷಿಣ ದಿಕ್ಕಿಗೆ ಭೂಮಿಯನ್ನು ಕೆದರಿ ಅಲ್ಲಿ ದರ್ಭೆಗಳನ್ನು ಹರಡಿ ಮೂರು ಪಿಂಡಗಳನ್ನು ಇಡುವುದು) ಮೂರು ಪಿಂಡಗಳನ್ನು ದಾನ ಮಾಡಿದರೆ, ನರಕದಲ್ಲಿರುವ ಪಿತೃಗಳ ಉದ್ಧಾರವಾಗುತ್ತದೆ. ಪುತ್ರನು ಮೃತ ತಂದೆಯ ಶ್ರಾದ್ಧವನ್ನು ಎಲ್ಲ ಪ್ರಯತ್ನಗಳಿಂದ ಮಾಡಬೇಕು. ಅವರ ಹೆಸರು ಮತ್ತು ಗೋತ್ರವನ್ನು ವಿಧಿವತ್ತಾಗಿ ಉಚ್ಚರಿಸಿ ಪಿಂಡದಾನ ಮುಂತಾದವುಗಳನ್ನು ಮಾಡುವುದರಿಂದ ಅವರಿಗೆ ಬೇಕಾಗಿರುವುದು ಸಿಗುತ್ತದೆ. ಇದರಿಂದ ಅವರ ಅತೃಪ್ತ ವಾಸನೆಗಳು ಪೂರ್ಣವಾಗುವುದರಿಂದ ಆ ತೃಪ್ತಾತ್ಮವು ಆ ಕುಟುಂಬಕ್ಕೆ ತೊಂದರೆಗಳನ್ನು ಕೊಡುವುದಿಲ್ಲ. ಇಷ್ಟೇ ಅಲ್ಲ, ಅವರಿಗೆ ಗತಿ ದೊರಕಿ ಮುಂದಿನ ಲೋಕಕ್ಕೆ ಹೋಗುತ್ತಾರೆ. ‘ಶ್ರಾದ್ಧವನ್ನು ಮಾಡುವುದರಿಂದ ಅದರ ಪರಿಣಾಮ ಒಳ್ಳೆಯದಾಗುತ್ತದೆ, ಎಂಬುದು ಪ್ರಯೋಗದಿಂದಲೂ ಸಿದ್ಧವಾಗಿದೆ. ಇದರಿಂದಾಗಿ ಆರ್ಯ ಸಮಾಜದ ದಯಾನಂದರ ಮತ್ತು ಆಧುನಿಕರ ಮೇಲಿನ ವಿಚಾರವು ತಪ್ಪಾಗಿದೆ, ಎಂಬುದು ಕಂಡು ಬರುತ್ತದೆ; ಹಾಗೇನಾದರೂ ಕಾರಣವಿದ್ದರೆ, ಶ್ರಾದ್ಧದಲ್ಲಿರುವ ದೊಡ್ಡ ವಿಧಿ-ವಿಧಾನಗಳ ಆವಶ್ಯಕತೆಯಾದರೂ ಏನಿತ್ತು ? – ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ಡಿಸೆಂಬರ್ ೨೦೦೮ ಮತ್ತು ಜನವರಿ ೨೦೦೯) (ಆಧಾರ – ಸನಾತನ ನಿರ್ಮಿತ ಗ್ರಂಥ ‘ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ)
ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.
ಶ್ರಾದ್ಧ ಈ ಪದದ ವ್ಯುತ್ಪತ್ತಿ ಮತ್ತು ಅರ್ಥ
‘ಶ್ರದ್ಧೆ ಎಂಬ ಶಬ್ದದಿಂದ ‘ಶ್ರಾದ್ಧ ಶಬ್ದವು ನಿರ್ಮಾಣವಾಗಿದೆ. ಈ ಲೋಕವನ್ನು ತ್ಯಜಿಸಿರುವ ನಮ್ಮ ಹಿರಿಯರು ನಮಗಾಗಿ ಏನೇನು ಮಾಡಿದ್ದಾರೆಯೋ, ಅದನ್ನು ನಮಗೆ ಹಿಂದಿರುಗಿಸಲು ಸಾಧ್ಯವಿಲ್ಲ. ಅವರಿಗಾಗಿ ಪೂರ್ಣ ಶ್ರದ್ಧೆಯಿಂದ ಮಾಡುವ ಕೃತಿಗಳಿಗೆ ಶ್ರಾದ್ಧ ಎನ್ನುತ್ತಾರೆ. (ಆಧಾರ ಸನಾತನ ನಿಮಿತ ಗ್ರಂಥ ‘ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ)