ನಾಗರಿಕ ಅಣು ಒಪ್ಪಂದಕ್ಕಾಗಿ ಸೌದಿ ಅರೇಬಿಯಾ ಇಸ್ರೇಲ್ ಅನ್ನು ಒಪ್ಪಿಗೆ ನೀಡಬೇಕು ! : Recognize Israel

  • ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವಿನ ನಾಗರಿಕ ಅಣು ಒಪ್ಪಂದ ಮುನ್ನಡೆಸಲು ಟ್ರಂಪ್ ಷರತ್ತು

  • ಕಳೆದ ವರ್ಷ ಟ್ರಂಪ್ ಅವರಿಗೆ ಷರತ್ತು ಹಿಂಪಡೆಯಬೇಕಾಗಿ ಬಂದಿತ್ತು !

ವಾಷಿಂಗ್ಟನ್ (ಅಮೆರಿಕ) – ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವಿನ ಪ್ರಮುಖ ನಾಗರಿಕ ಅಣು ಸಹಕಾರ ಒಪ್ಪಂದವನ್ನು ಮುನ್ನಡೆಸಲು ಸೌದಿ ಅರೇಬಿಯಾ ಇಸ್ರೇಲ್ ಅನ್ನು ರಾಜತಾಂತ್ರಿಕವಾಗಿ ಗುರುತಿಸುವುದು ಒಂದು ಷರತ್ತಾಗಿರಲಿದೆ. ಸೌದಿ ಅರೇಬಿಯಾ ಇಸ್ರೇಲ್ ಅನ್ನು ಒಪ್ಪಿಗೆ ನೀಡದ ಹೊರತು ಈ ಒಪ್ಪಂದವು ಪೂರ್ಣಗೊಳ್ಳುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರುತ್ ಸೋಷಿಯಲ್’ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಟ್ರಂಪ್ ಆಡಳಿತವು ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ಕೆಲವೇ ಸಮಯದಲ್ಲಿ ಟ್ರಂಪ್ ಅವರಿಂದ ಈ ಹೇಳಿಕೆ ಬಂದಿದೆ. ಈ ಒಪ್ಪಂದದ ಮೂಲಕ ಸೌದಿ ಅರೇಬಿಯಾಗೆ ಶಾಂತಿಯುತ ಉದ್ದೇಶಗಳಿಗಾಗಿ ಅಣುಶಕ್ತಿ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ನೆರವು ನೀಡಲಾಗುವುದು. ವಿಶೇಷವೆಂದರೆ ಕಳೆದ ವರ್ಷ ಟ್ರಂಪ್ ಅವರು ಇಸ್ರೇಲ್ ಅನ್ನು ಒಪ್ಪಿಗೆ ನೀಡುವ ಷರತ್ತನ್ನು ಈ ಪ್ರಕ್ರಿಯೆಯಿಂದ ಹೊರಗಿಟ್ಟ ನಂತರವೇ ಈ ಒಪ್ಪಂದವು ಮುಂದೆ ಸಾಗಿತ್ತು.

ಟ್ರಂಪ್ ಮುಂದುವರಿದು ಮಾತನಾಡಿ, ಈ ಒಪ್ಪಂದಕ್ಕೆ ಸಮ್ಮತಿ ನೀಡಲಾಗಿದ್ದರೂ, ಅದು ಸಂಪೂರ್ಣವಾಗಿ ಸೌದಿ ಅರೇಬಿಯಾ ‘ಅಬ್ರಹಾಂ ಒಪ್ಪಂದ’ದಲ್ಲಿ (ಅಮೆರಿಕದ ಮುನ್ನೆಡೆಯಲ್ಲಿ ಇಸ್ರೇಲ್ ಮತ್ತು ಯುಎಇ, ಬಹರೇನ್, ಮೊರಾಕೊ ಹಾಗೆಯೇ ಸುಡಾನ್ ನಡುವೆ ಸಂಬಂಧಗಳನ್ನು ಸಹಜಗೊಳಿಸಲು ಮಾಡಿಕೊಳ್ಳಲಾದ ಒಪ್ಪಂದದಲ್ಲಿ) ಭಾಗವಹಿಸುವುದನ್ನು ಅವಲಂಬಿಸಿದೆ. ಈ ಒಪ್ಪಂದಗಳು ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸಹಕಾರದ ದೃಷ್ಟಿಯಿಂದ ಪ್ರಮುಖವಾಗಿದ್ದು, ಪ್ರಸ್ತಾಪಿತ ಅಣು ಸಹಕಾರ ಒಪ್ಪಂದವು ಕೇವಲ ಶಾಂತಿಯುತ ಮತ್ತು ಮಿಲಿಟರಿಯೇತರ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲದೆ ಇದರಡಿಯಲ್ಲಿ ಅಣು ವಸ್ತುವಿನ ಮರುಸಂಸ್ಕರಣೆ/ಸಮೃದ್ಧೀಕರಣ ಮಾಡಲಾಗುವುದಿಲ್ಲ.

ಇರಾನ್ ಪರಮಾಣು ಶಸ್ತ್ರಾಸ್ತ್ರ ಸಜ್ಜಿತವಾದರೆ ನಾವೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತೇವೆ! – ಮಹಮ್ಮದ್ ಬಿನ್ ಸಲ್ಮಾನ್

ಇಂಧನ ಮೂಲಗಳಲ್ಲಿ ವೈವಿಧ್ಯತೆಯನ್ನು ತರಲು ಸೌದಿ ಅರೇಬಿಯಾ ಸುದೀರ್ಘ ಕಾಲದಿಂದ ನಾಗರಿಕ ಅಣುಶಕ್ತಿ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ಯತ್ನಿಸುತ್ತಿದೆ. “ಇರಾನ್ ಪರಮಾಣು ಶಸ್ತ್ರಾಸ್ತ್ರಸಜ್ಜಿತ ರಾಷ್ಟ್ರವಾದರೆ ಸೌದಿ ಅರೇಬಿಯಾ ಕೂಡ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಯೋಚಿಸುತ್ತದೆ,” ಎಂದು ಸೌದಿ ಅರೇಬಿಯಾದ ಯುವರಾಜ ಮಹಮ್ಮದ್ ಬಿನ್ ಸಲ್ಮಾನ್ ಈ ಹಿಂದೆ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಈ ಒಪ್ಪಂದವು ಅಮೆರಿಕ-ಸೌದಿ ಅರೇಬಿಯಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ ಇರಾನ್ ಪ್ರಭಾವವನ್ನು ನಿಯಂತ್ರಿಸುವ ಅಮೆರಿಕದ ನೀತಿಯ ಭಾಗವೆಂದೂ ಪರಿಗಣಿಸಲಾಗಿದೆ.

ಅಮೆರಿಕ-ಸೌದಿ ಅರೇಬಿಯಾ ನಾಗರಿಕ ಅಣು ಸಹಕಾರ ಒಪ್ಪಂದದ ಘಟನಾವಳಿಗಳು

೧. ೨೦೨೦ : ಅಮೆರಿಕದ ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿ ‘ಅಬ್ರಹಾಂ ಒಪ್ಪಂದ’ಗಳು ನಡೆದವು. ಈ ಒಪ್ಪಂದಗಳಿಂದಾಗಿ ಇಸ್ರೇಲ್ ಮತ್ತು ಹಲವು ಅರಬ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಾಂಧವ್ಯ ಸ್ಥಾಪಿತವಾಯಿತು.

೨. ಅಕ್ಟೋಬರ್ ೨೦೨೩ : ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯ ನಂತರ, ಸೌದಿ ಅರೇಬಿಯಾ ಇಸ್ರೇಲ್ ಅನ್ನು ಗುರುತಿಸುವ ಪ್ರಸ್ತಾಪದ ಮೇಲಿನ ಮಾತುಕತೆಗಳಿಗೆ ತಡೆ ಬಿತ್ತು. (ಈ ಒಪ್ಪಂದವನ್ನು ವಿರೋಧಿಸಿ ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿತು ಎಂದೂ ಆ ಸಮಯದಲ್ಲಿ ಹೇಳಲಾಗಿತ್ತು.)

೩. ೨೦೨೪ : ಅಮೆರಿಕದ ಅಂದಿನ ಅಧ್ಯಕ್ಷ ಜೋ ಬೈಡನ್ ಆಡಳಿತವು ಸೌದಿ ಅರೇಬಿಯಾದೊಂದಿಗೆ ಅಣು ಸಹಕಾರ ಮತ್ತು ಭದ್ರತಾ ಒಪ್ಪಂದಕ್ಕೆ ಪ್ರತಿಯಾಗಿ ಇಸ್ರೇಲ್‌ ನೊಂದಿಗೆ ಸಂಬಂಧ ಸ್ಥಾಪಿಸುವ ಪ್ರಸ್ತಾಪದ ಮೇಲೆ ಮಾತುಕತೆ ನಡೆಸಿತು.

೪. ಮೇ ೨೦೨೫ : ಟ್ರಂಪ್ ಆಡಳಿತವು ಒಪ್ಪಂದವನ್ನು ಮುನ್ನಡೆಸಲು ಸೌದಿ ಅರೇಬಿಯಾ ಇಸ್ರೇಲ್ ಅನ್ನು ಗುರುತಿಸಬೇಕೆಂಬ ಷರತ್ತನ್ನು ತಾತ್ಕಾಲಿಕವಾಗಿ ಬದಿಗೊತ್ತಿತು. ಇದರಿಂದಾಗಿ ಉಭಯ ದೇಶಗಳ ನಡುವಿನ ಮಾತುಕತೆ ವೇಗ ಪಡೆಯಿತು.

೫. ೨೨ ಜುಲೈ ೨೦೨೬ : ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವೆ ೩೦ ವರ್ಷಗಳ ನಾಗರಿಕ ಅಣು ಸಹಕಾರ ಒಪ್ಪಂದಕ್ಕೆ ಸಹಿ ಆಯಿತು.

೬. ೨೩ ಜುಲೈ ೨೦೨೬ : ಒಪ್ಪಂದದ ಅಂತಿಮ ಜಾರಿಗೆ ಸೌದಿ ಅರೇಬಿಯಾ ಇಸ್ರೇಲ್ ಅನ್ನು ಮಾನ್ಯ ಮಾಡುವುದು ಮತ್ತೆ ಕಡ್ಡಾಯ ಎಂದು ಟ್ರಂಪ್ ಸ್ಪಷ್ಟಪಡಿಸಿದರು. ಮುಂದಿನ ಪ್ರಕ್ರಿಯೆಗಾಗಿ ಈ ಒಪ್ಪಂದವನ್ನು ಅಮೆರಿಕನ್ ಕಾಂಗ್ರೆಸ್‌ ಗೆ ಪರಿಶೀಲನೆಗಾಗಿ ಕಳುಹಿಸಲಾಗುವುದು.

ಅಮೆರಿಕ ಮತ್ತು ಇಸ್ರೇಲ್ ದೇಶಗಳ ಭದ್ರತಾ ತಜ್ಞರಿಂದ ಕಳವಳ ವ್ಯಕ್ತ!

ಈ ನಿಬಂಧನೆಗಳಿಂದಾಗಿ ಅಮೆರಿಕ ಮತ್ತು ಇಸ್ರೇಲ್‌ ನ ಕೆಲವು ರಾಜಕಾರಣಿಗಳು ಹಾಗೂ ಭದ್ರತಾ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜೊತೆ ಮಾಡಿಕೊಂಡ ಒಪ್ಪಂದದಲ್ಲಿದ್ದ ಕಠಿಣ ಷರತ್ತುಗಳಿಗೆ ಹೋಲಿಸಿದರೆ, ಸೌದಿ ಅರೇಬಿಯಾ ಜೊತೆಗಿನ ಒಪ್ಪಂದದಲ್ಲಿ ನಿಯಂತ್ರಣಗಳನ್ನು ಕಡಿಮೆ ಮಾಡಲಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಭವಿಷ್ಯದಲ್ಲಿ ಸೌದಿ ಅರೇಬಿಯಾ ಯುರೇನಿಯಂ ಸಮೃದ್ಧೀಕರಣ ಸಾಮರ್ಥ್ಯವನ್ನು ಪರಮಾಣು ಶಸ್ತ್ರಾಸ್ತ್ರ ನಿರ್ಮಾಣಕ್ಕೆ ಬಳಸಿಕೊಳ್ಳುವ ಅಪಾಯವನ್ನು ತಳ್ಳಿಹಾಕುವಂತಿಲ್ಲ ಎಂಬ ಭೀತಿಯನ್ನು ಅಮೆರಿಕ ಮತ್ತು ಇಸ್ರೇಲ್‌ನ ಕೆಲವರು ವ್ಯಕ್ತಪಡಿಸಿದ್ದಾರೆ.