ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಭಾವದೋಷ, ಪ್ರಮಾದ ಮತ್ತು ಗೊಂದಲವನ್ನು ದೂರಗೊಳಿಸಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಸಾಧ್ಯತಿ ನಿಷ್ಪಾದಯತಿ ಕಾರ್ಯಮಿತಿ ಇತಿ ಸಾಧಕಃ – ಅಂದರೆ, ಯಾರು (ಆಧ್ಯಾತ್ಮಿಕ ಉನ್ನತಿ) ಸಾಧ್ಯವಾಗಿಸಲು ನಿಷ್ಪತ್ತಿ (ಅಪೇಕ್ಷಿತ ಫಲ) ಸಿಗುವ ವರೆಗೆ ಸತತ ಕರ್ಮವನ್ನು (ಸಾಧನೆ) ಮಾಡುತ್ತಲೇ ಇರುತ್ತಾನೋ, ಅವನೇ ಸಾಧಕ. ಇಂತಹ ನಿಜವಾದ ಸಾಧಕನಾಗುವ ಪ್ರಕ್ರಿಯೆಯಲ್ಲಿನ ಎಲ್ಲಕ್ಕಿಂತ ದೊಡ್ಡ ಅಡಚಣೆಗಳೆಂದರೆ ಸ್ವಭಾವದೋಷಗಳು, ಪ್ರಮಾದ(ಅಪರಾಧ) ಮತ್ತು ಗೊಂದಲ.

೧. ಸ್ವಭಾವದೋಷಗಳು : ಆಲಸ್ಯದಂತಹ ಅನೇಕ ಸ್ವಭಾವದೋಷಗಳಿಂದಾಗಿ ಸಾಧನೆಯ ನಿಷ್ಪತ್ತಿ (ವೇಗ ಮತ್ತು ಫಲ) ಕಡಿಮೆಯಾಗುತ್ತದೆ. ಇದಕ್ಕಾಗಿ ಸಾಧಕರು ‘ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವುದು  ಮಹತ್ವದ್ದಾಗಿದೆ. ಈ ಪ್ರಕ್ರಿಯೆಯಿಂದ ‘ಸ್ವಭಾವ ದೋಷಗಳು ಎಂಬ ಅಡಚಣೆಯನ್ನು ನಿವಾರಿಸಬಹುದು.

೨. ಪ್ರಮಾದ (ಅಪರಾಧ) : ಪ್ರಮಾದ ಎಂದರೆ ತಿಳಿದೋ ಅಥವಾ ತಿಳಿಯದೆಯೋ ಮಾಡಿದ ಅಯೋಗ್ಯ ವರ್ತನೆ. ಕರ್ಮಫಲ ಸಿದ್ಧಾಂತಗಳಿಗನುಸಾರ ಪ್ರತಿಯೊಂದು ಕರ್ಮದ ಫಲವನ್ನು ಭೋಗಿಸಲೇಬೇಕು. ಹಾಗಾಗಿ, ಸಾಧಕನಿಂದಾದ ಯಾವುದಾದರೊಂದು ಪ್ರಮಾದದಿಂದ (ಅಪರಾಧದಿಂದ) ಅವನ ಸಾಧನೆಯು ಖರ್ಚಾಗುತ್ತದೆ. ಪರಿಣಾಮವಾಗಿ ಅವನ ಆಧ್ಯಾತ್ಮಿಕ ಉನ್ನತಿ ಅಪೇಕ್ಷಿತ ರೀತಿಯಲ್ಲಾಗುವುದಿಲ್ಲ. ಪ್ರಾಯಶ್ಚಿತ್ತ ಮುಂತಾದ ಕರ್ಮಗಳನ್ನು ಮಾಡಿ ತಪ್ಪಿನ ಪರಿಮಾರ್ಜನೆ (ನಿವಾರಣೆ) ಆಗಲು ಸಾಧ್ಯವಿದೆ; ಆದ್ದರಿಂದ ಸಾಧಕನು ತನ್ನಿಂದಾದ ತಪ್ಪಿಗಾಗಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು.

೩. ಗೊಂದಲ : ಸಾಧಕನ ದೃಷ್ಟಿಯಿಂದ ಎಲ್ಲಕ್ಕಿಂತ ದೊಡ್ಡ ಅಡಚಣೆಯಾಗುವ ವಿಷಯವೆಂದರೆ ಗೊಂದಲ ! ಗೊಂದಲವು ಸಾಧಕನು ಸ್ವತಃ ನಿರ್ಮಿಸಿಕೊಂಡ ಒಂದು ನಕಾರಾತ್ಮಕ ಮಾನಸಿಕ ಸ್ಥಿತಿಯಾಗಿರುತ್ತದೆ. ಇದರಲ್ಲಿ ಮುಖ್ಯವಾಗಿ ಮೂರು ವಿಷಯಗಳಿರುತ್ತವೆ.

ಅ. ಭ್ರಮೆ (ಸುಳ್ಳನ್ನು ನಿಜವೆಂದು ಭಾವಿಸುವುದು)

ಆ. ದ್ವಂದ್ವ (‘ಇದು ಯೋಗ್ಯವೋ ಅಥವಾ ಅಯೋಗ್ಯವೋ, ಎಂಬ ನಿರ್ಣಯ ತೆಗೆದುಕೊಳ್ಳದ ಸ್ಥಿತಿ)

ಇ. ವಿಕಲ್ಪ (ಗುರುಗಳು ಮತ್ತು ಸಾಧನೆ ಬಗ್ಗೆ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರ ಮಾಡುವುದು.)

ಸ್ವಭಾವದೋಷಗಳು ಮತ್ತು ಅಪರಾಧಗಳನ್ನು ನಾವು ಪ್ರಯತ್ನಗಳ ಮೂಲಕ ಜಯಿಸಬಹುದು; ಆದರೆ ಗೊಂದಲದ ಸ್ಥಿತಿಯನ್ನು ದೂರಗೊಳಿಸಲು ಗುರುಗಳ ಮಾರ್ಗದರ್ಶನ ಅಥವಾ ಗುರುಕೃಪೆಯೇ ಆವಶ್ಯಕವಾಗಿರುತ್ತದೆ. ಗುರುರೂಪದಲ್ಲಿರುವ ಸಂತರ ಮಾರ್ಗದರ್ಶನವನ್ನು ಪಡೆಯುವುದೇ ಗೊಂದಲದ ಸ್ಥಿತಿಯನ್ನು ದೂರಗೊಳಿಸುವ ಅತ್ಯುತ್ತಮ ಮಾರ್ಗವಾಗಿದೆ.

ಈ ಗುರುಪೂರ್ಣಿಮೆಯಂದು ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ನಮ್ಮಲ್ಲಿನ ಅಡಚಣೆಗಳ ರೂಪದಲ್ಲಿರುವ ಸ್ವಭಾವದೋಷಗಳು, ಅಪರಾಧ ಮತ್ತು ಗೊಂದಲಗಳನ್ನು ದೂರ ಮಾಡಲು ದೃಢ ನಿಶ್ಚಯ ಮಾಡೋಣ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು) (೪.೬.೨೦೨೬)