ಇಂಟರ್ನೆಟ್ ಡೇಟಾ ಮತ್ತು ಕರೆಗಳಿಗಾಗಿ ಪ್ರತ್ಯೇಕ ಯೋಜನೆಗಳನ್ನು ಹೊಂದುವ ನಿಯಮ ಜಾರಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಮೊಬೈಲ್ ರೀಚಾರ್ಜ್ ಕುರಿತಾದ ಹೊಸ ಕರಡು ಪ್ರಸಾರ ಮಾಡಿದೆ

ನವದೆಹಲಿ – ಮೊಬೈಲ್ ನಲ್ಲಿ ಕೇವಲ ಸಂಪರ್ಕ (ಕಾಲ್) ಮತ್ತು ಕಿರುಸಂದೇಶ (ಎಸ್.ಎಮ್.ಎಸ್.) ಸೌಲಭ್ಯವನ್ನು ಬಳಸುವ ಗ್ರಾಹಕರಿಗೆ ಶೀಘ್ರದಲ್ಲೇ ದೊಡ್ಡ ಪರಿಹಾರ ಸಿಗಬಹುದು. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಇಂಟರ್ನೆಟ್ ಡೇಟಾವನ್ನು ಒಳಗೊಂಡಿರದ ಅಂತಹ ಮೊಬೈಲ್ ರೀಚಾರ್ಜ್ ಯೋಜನೆಗಳನ್ನು ತರಲು ಸಿದ್ಧತೆ ನಡೆಸುತ್ತಿದೆ. ಡೇಟಾ ಇಲ್ಲದ ರೀಚಾರ್ಜ್ ಗಳ ಕಾರಣದಿಂದಾಗಿ ಈ ಯೋಜನೆಗಳ ಬೆಲೆಯು ಸದ್ಯದ ರೀಚಾರ್ಜ್ ಗಳಿಗೆ ಹೋಲಿಸಿದರೆ ಶೇಕಡಾ 50 ರಿಂದ 70 ರಷ್ಟು ಕಡಿಮೆಯಾಗಬಹುದು. ಟ್ರಾಯ್ ಇದಕ್ಕಾಗಿ ಟೆಲಿಕಮ್ಯುನಿಕೇಶನ್ ಕನ್ಸ್ಯೂಮರ್ ಪ್ರೊಟೆಕ್ಷನ್ ರೆಗ್ಯುಲೇಶನ್ಸ್, 2026 ರ ಕರಡನ್ನು ಪ್ರಸಾರ ಮಾಡಿದೆ. ಹೊಸ ನಿಯಮಗಳಿಗೆ ಅಂತಿಮ ರೂಪ ನೀಡುವ ಮುನ್ನ ಟ್ರಾಯ್ ದೂರಸಂಪರ್ಕ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಗಳನ್ನು ಆಹ್ವಾನಿಸಿದೆ.

ಪ್ರಸ್ತುತ ದೂರಸಂಪರ್ಕ ಸಂಸ್ಥೆಗಳು ಕೆಲವು ನಿರ್ದಿಷ್ಟ ಅವಧಿಗೆ ಮಾತ್ರ ಕರೆ ಮತ್ತು ಕಿರುಸಂದೇಶ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿವೆ. ಇದರಿಂದಾಗಿ ಇಂಟರ್ನೆಟ್ ಅಗತ್ಯವಿಲ್ಲದ ಗ್ರಾಹಕರೂ ಸಹ, ಡೇಟಾ ಹೊಂದಿರುವ ದುಬಾರಿ ಯೋಜನೆಗಳನ್ನು ಖರೀದಿಸಬೇಕಾಗುತ್ತದೆ. ಅನೇಕ ಹಿರಿಯ ನಾಗರಿಕರು, ಸಾಮಾನ್ಯ ಮೊಬೈಲ್ ಫೋನ್ ಗಳನ್ನು ಬಳಸುವ ಜನರು ಮತ್ತು ಎರಡನೇ ಸಿಮ್ ಕಾರ್ಡ್ ಹೊಂದಿರುವ ಗ್ರಾಹಕರು ಡೇಟಾವನ್ನು ಬಳಸುವುದಿಲ್ಲ. ಹೀಗಿದ್ದರೂ ಸಹ, ಅವರು ಡೇಟಾ ವೆಚ್ಚವನ್ನು ಒಳಗೊಂಡಿರುವ ರೀಚಾರ್ಜ್ ಯೋಜನೆಗಳನ್ನೇ ಖರೀದಿಸಬೇಕಾಗುತ್ತದೆ.