ಕೀನ್ಯಾ: ಹಲಾಲ್ ಪ್ರಮಾಣಪತ್ರಗಳ ವಿರುದ್ಧ ನ್ಯಾಯಾಲಯದಲ್ಲಿ ವ್ಯಾಪಾರಿಗಳ ಅರ್ಜಿ

ನೈರೋಬಿ (ಕೀನ್ಯಾ) – ಆಫ್ರಿಕಾ ಖಂಡದ ಕೀನ್ಯಾ ದೇಶದಲ್ಲಿ ‘ಹಲಾಲ್ ಪ್ರಮಾಣಪತ್ರ’ದ ಕುರಿತು ಕಾನೂನು ಹೋರಾಟ ನಡೆಯುತ್ತಿದೆ. ೧೬ ಏಪ್ರಿಲ್ ೨೦೨೬ ರಂದು ಡೆನಿಸ್ ನತುಂಬಿ, ಡೆನಿಸ್ ಓವುವರ್ ಓಚಾಂಡಾ ಮತ್ತು ಹೆನ್ರಿ ಬಾರಾಸಾ ಟಾಮ್ ಅವರು ನೈರೋಬಿ ಉನ್ನತ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ದಾಖಲಿಸಿದ್ದಾರೆ. ಹಲಾಲ್ ಪ್ರಮಾಣಪತ್ರದಂತಹ ಖಾಸಗಿ ವ್ಯವಸ್ಥೆಯು ಯಾವುದೇ ಸ್ಪಷ್ಟ ಕಾನೂನಿಲ್ಲದೆ ಆಹಾರ ಮತ್ತು ಮಾಂಸ ಮಾರುಕಟ್ಟೆಯನ್ನು ತಲುಪಲು, ಸರಕಾರಿ ಖರೀದಿಯಲ್ಲಿ ಭಾಗವಹಿಸಲು ಮತ್ತು ವ್ಯಾಪಾರ ಮಾಡಲು ಪ್ರಾಯೋಗಿಕವಾಗಿ ಒಂದು ಕಡ್ಡಾಯ ಶರತ್ತಾಗಿ ಬದಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸರಕಾರಿ ಸಂಸ್ಥೆಗಳು ಯಾವುದೇ ಖಾಸಗಿ ಪ್ರಮಾಣಪತ್ರವನ್ನು ಪರವಾನಗಿ, ವ್ಯಾಪಾರ ಅಥವಾ ಸಾರ್ವಜನಿಕ ಖರೀದಿಗೆ ಕಡ್ಡಾಯ ಶರತ್ತನ್ನಾಗಿ ಪರಿಗಣಿಸದಂತೆ ತಡೆಯಬೇಕು ಎಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

೧. ಜೂನ್ ೨೦೨೬ ರಲ್ಲಿ ‘ಕೀನ್ಯಾ ಹಲಾಲ್ ಸರ್ಟಿಫಿಕೇಶನ್ ಬ್ಯೂರೋ’ ಈ ಮೊಕದ್ದಮೆಯಲ್ಲಿ ತನ್ನನ್ನು ತಾನು ಒಂದು ಪಕ್ಷಗಾರನನ್ನಾಗಿ ಮಾಡಿಕೊಳ್ಳಬೇಕೆಂದು ವಿನಂತಿಸಿತ್ತು. ಮುಸ್ಲಿಂ ಗ್ರಾಹಕರಿಗೆ ಯಾವುದೇ ಆಹಾರ ಪದಾರ್ಥಗಳು ಅವರ ಧಾರ್ಮಿಕ ನಂಬಿಕೆಗಳ ಪ್ರಕಾರ ಸಿದ್ಧಪಡಿಸಲಾಗಿದೆಯೇ ಅಥವಾ ಇಲ್ಲವೇ? ಎಂಬುದನ್ನು ತಿಳಿದುಕೊಳ್ಳುವ ಸಾಂವಿಧಾನಿಕ ಹಕ್ಕಿದೆ ಎಂದು ಈ ಸಂಸ್ಥೆ ವಾದಿಸಿದೆ.

೨. ಮುಸ್ಲಿಮರ ಹಲಾಲ್ ಆಹಾರವನ್ನು ಸೇವಿಸುವ ಹಕ್ಕನ್ನು ನಾವು ವಿರೋಧಿಸುತ್ತಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಆದರೆ, ಹಲಾಲ್ ಪ್ರಮಾಣಪತ್ರದಂತಹ ಒಂದು ಖಾಸಗಿ ಧಾರ್ಮಿಕ ವ್ಯವಸ್ಥೆಯು ಕ್ರಮೇಣ ಆಹಾರ ಮತ್ತು ಪಾನೀಯಗಳ ಉತ್ಪಾದನೆ, ಮಾರಾಟ ಮತ್ತು ಪೂರೈಕೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಹೇಗೆ ಅಗತ್ಯ ಶರತ್ತಾಗಿ ಬದಲಾಯಿತು? ಕಸಾಯಿಖಾನೆಗಳಿಂದ ಹಿಡಿದು ವಾಣಿಜ್ಯ ಸಂಕೀರ್ಣಗಳು ಮತ್ತು ಸರಕಾರಿ ಖರೀದಿಗಳಲ್ಲೂ ಹಲಾಲ್ ಪ್ರಮಾಣಪತ್ರವೇ ವ್ಯವಹಾರದ ಸ್ವೀಕಾರಾರ್ಹತೆಯನ್ನು ನಿರ್ಧರಿಸಲಾರಂಭಿಸಿದೆ. ಈ ಪ್ರಮಾಣಪತ್ರವನ್ನು ಪಡೆಯದ ಉದ್ಯಮಿಯು ಕೆಲವು ಪೂರೈಕೆ ಸರಪಳಿಗಳು, ಗುತ್ತಿಗೆಗಳು ಮತ್ತು ಮಾರುಕಟ್ಟೆಗಳಿಂದ ಹೊರಹಾಕಲ್ಪಡುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಕಾಗದದ ಮೇಲೆ ಐಚ್ಛಿಕವಾಗಿ ಕಾಣುವ ಈ ಪ್ರಮಾಣಪತ್ರ ಪ್ರಾಯೋಗಿಕವಾಗಿ ಮಾತ್ರ ಕಡ್ಡಾಯವಾಗುತ್ತಿದೆ.

೩. ಈ ಅರ್ಜಿಯಲ್ಲಿ, ಖಾಸಗಿ ಸಂಸ್ಥೆಗಳಿಗೆ ನೀಡಲಾಗುವ ಶುಲ್ಕವನ್ನು ಅಂತಿಮವಾಗಿ ವಸ್ತುವಿನ ಬೆಲೆಗೆ ಸೇರಿಸಿ ಗ್ರಾಹಕರಿಂದಲೇ ವಸೂಲಿ ಮಾಡಲಾಗುತ್ತದೆ; ಆದರೆ ಬಹುತೇಕ ಖರೀದಿದಾರರಿಗೆ ಈ ಪ್ರಮಾಣೀಕರಣ ಪ್ರಕ್ರಿಯೆಯ ಬಗ್ಗೆ ಅಥವಾ ಅದರ ವೆಚ್ಚದ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ವಾದಿಸಲಾಗಿದೆ.

೪. ಕೀನ್ಯಾದ ಮಾಂಸ ನಿಯಂತ್ರಣ ನಿಯಮಗಳ ಪ್ರಕಾರ, ಪ್ರಾಣಿಗಳು ಮತ್ತು ಮಾಂಸದ ತಪಾಸಣೆಯ ಅಧಿಕಾರವನ್ನು ಸರಕಾರಿ ಪಶುವೈದ್ಯರು, ಆರೋಗ್ಯ ನಿರೀಕ್ಷಕರು ಮತ್ತು ಅಧಿಕೃತ ಅಧಿಕಾರಿಗಳಿಗೆ ನೀಡಲಾಗಿದೆ. ಪ್ರಾಣಿಯನ್ನು ಕೊಲ್ಲುವ ಮುನ್ನ ಮತ್ತು ಮಾಂಸವನ್ನು ಮಾರುಕಟ್ಟೆಗೆ ಕಳುಹಿಸುವ ಮುನ್ನ ಸರಕಾರಿ ತಪಾಸಣೆ ಅಗತ್ಯವಾಗಿರುತ್ತದೆ. ಆದ್ದರಿಂದ, ಧಾರ್ಮಿಕ ಪ್ರಮಾಣೀಕರಣ ಸಾರ್ವಜನಿಕ ಆರೋಗ್ಯದ ಶಾಸನಬದ್ಧ ತಪಾಸಣೆಯ ಸ್ಥಾನ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಸಂಪಾದಕೀಯ ನಿಲುವು

  • ಕೀನ್ಯಾದ ವ್ಯಾಪಾರಿಗಳು ಜಾಗೃತರಾದಂತೆ, ಭಾರತದ ವ್ಯಾಪಾರಿಗಳು ಯಾವಾಗ ಜಾಗೃತರಾಗುವರು?
  • ಕೀನ್ಯಾದಲ್ಲಿ ಯಾವುದೇ ಹಿಂದುತ್ವನಿಷ್ಠ ಸಂಘಟನೆಗಳು ಇಲ್ಲದಿದ್ದರೂ ಹಲಾಲ್ ಪ್ರಮಾಣಪತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂಬುದನ್ನು ಗಮನಿಸಿ!