ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ಪೂರೈಕೆ! : PM Modi Australia Visit

ಭಾರತದ ಮಹತ್ವಾಕಾಂಕ್ಷೆಯ ‘ಗಗನಯಾನ’ ಯೋಜನೆಗೆ ನೆರವು

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್

ಮೆಲ್ಬೋರ್ನ್ (ಆಸ್ಟ್ರೇಲಿಯಾ) – ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಯುರೇನಿಯಂ ಒಪ್ಪಂದಕ್ಕೆ ಉಭಯ ದೇಶಗಳು ಅಧಿಕೃತ ಮುದ್ರೆ ಒತ್ತಿವೆ. ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ನಡುವೆ ನಡೆದ ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ರಕ್ಷಣೆ, ವ್ಯಾಪಾರ, ಇಂಧನ, ಬಾಹ್ಯಾಕಾಶ ಮತ್ತು ನಿರ್ಣಾಯಕ ಖನಿಜಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದಗಳಾಗಿವೆ ಎಂದು ಉಭಯ ನಾಯಕರು ಘೋಷಿಸಿದರು. ಭಾರತ ಪ್ರಸ್ತುತ ೪ ದೇಶಗಳಿಂದ ಯುರೇನಿಯಂ ಖರೀದಿಸುತ್ತಿದ್ದು, ಈಗ ಆಸ್ಟ್ರೇಲಿಯಾ ಈ ಪಟ್ಟಿಗೆ ಐದನೇ ದೇಶವಾಗಿ ಸೇರ್ಪಡೆಯಾಗಿದೆ. ಪರಮಾಣು ಶಕ್ತಿ ಮತ್ತು ಬಾಂಬ್ ತಯಾರಿಕೆ ಎರಡಕ್ಕೂ ಯುರೇನಿಯಂ ಅತ್ಯಗತ್ಯವಾಗಿದೆ.

ಭಾರತದ ಸ್ವಚ್ಛ ಇಂಧನ ಅಭಿಯಾನಕ್ಕೆ ಬಲ ಸಿಗಲಿದೆ! – ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು, ‘‘ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ದೊರೆಯುವುದರಿಂದ ಭಾರತದ ಸ್ವಚ್ಛ ಇಂಧನ ಅಭಿಯಾನಕ್ಕೆ ಹೆಚ್ಚಿನ ಬಲ ಸಿಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ಒಟ್ಟಾಗಿ ‘ಕ್ರಿಟಿಕಲ್ ಮಿನರಲ್ಸ್ ಕಾರಿಡಾರ್’ (ನಿರ್ಣಾಯಕ ಖನಿಜಗಳ ಕಾರಿಡಾರ್) ಅನ್ನು ಕೂಡ ಅಭಿವೃದ್ಧಿಪಡಿಸಲಿವೆ. ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿ ರಾಜ್ಯಗಳಲ್ಲಿ ಅಪರೂಪದ ಖನಿಜಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಈ ‘ಕ್ರಿಟಿಕಲ್ ಮಿನರಲ್ ಕಾರಿಡಾರ್’ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತದ ಗಗನಯಾನದೊಂದಿಗೆ ಸಂಪರ್ಕ ಸಾಧಿಸಲು ಕೋಕೋಸ್ (ಕೀಲಿಂಗ್) ದ್ವೀಪದಲ್ಲಿ ‘ಸ್ಪೇಸ್ ಟ್ರ್ಯಾಕಿಂಗ್ ಟರ್ಮಿನಲ್’ (ತಾತ್ಕಾಲಿಕ ನಿಲ್ದಾಣ) ಅನ್ನು ಸ್ಥಾಪಿಸಲಾಗುವುದು.’’ ಇದರಿಂದಾಗಿ ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೂ ಸಹ ನೆರವಾಗಲಿದೆ.

ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ! – ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್

ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು, ‘‘ಇಲ್ಲಿಯವರೆಗೆ ಉಭಯ ದೇಶಗಳ ಪೂರೈಕೆ ಸರಪಳಿಗಳು ಪರಸ್ಪರ ಜೋಡಿಸಲ್ಪಟ್ಟಿದ್ದವು; ಆದರೆ ನಮ್ಮ ನೀತಿಗಳು ವಿಭಿನ್ನವಾಗಿದ್ದವು. ಇಂದಿನ ಈ ನಿರ್ಧಾರವು ಆ ದೂರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇಟ್ಟ ದೃಢ ಹೆಜ್ಜೆಯಾಗಿದೆ. ಇಂದು ನಾವು ೨೦೧೫ ರ ಭಾರತ-ಆಸ್ಟ್ರೇಲಿಯಾ ಪರಮಾಣು ಸಹಕಾರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಯುರೇನಿಯಂ ರಫ್ತು ಮಾಡುವ ವ್ಯವಸ್ಥೆಗೆ ಸಹಿ ಹಾಕಿದ್ದೇವೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ,’’ಎಂದು ಹೇಳಿದರು.