ಧ್ರುವ್ ರಾಠಿ ವಿವಾದಾತ್ಮಕ ವಿಡಿಯೋ: 15 ದಿನಗಳಲ್ಲಿ ನಿರ್ಧಾರ : Dhruv Rathee Controversy

  • ಕೇಂದ್ರ ಸರಕಾರಕ್ಕೆ ದೆಹಲಿ ಹೈಕೋರ್ಟ್‌ ಆದೇಶ

  • ನ್ಯಾಯವಾದಿ ಅಮಿತಾ ಸಚ್‌ದೇವ್ ಅವರ ಅರ್ಜಿಯ ಮೇರೆಗೆ ಕೋರ್ಟ್ ಆದೇಶ

(‘ಯೂಟ್ಯೂಬರ್’ ಎಂದರೆ ಸ್ವಂತ ಯೂಟ್ಯೂಬ್ ಚಾನೆಲ್ ಮೂಲಕ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ವ್ಯಕ್ತಿ)

ನವದೆಹಲಿ – ಯೂಟ್ಯೂಬರ್ ಧ್ರುವ್ ರಾಠಿ ಹಿಂದೂ ದೇವತೆಗಳ ಕುರಿತು ಪ್ರಸಾರ ಮಾಡಿರುವ ವಿಡಿಯೋವನ್ನು ತೆಗೆದುಹಾಕಬೇಕೋ ಬೇಡವೋ ಎಂಬ ಬಗ್ಗೆ ಮುಂದಿನ 15 ದಿನಗಳಲ್ಲಿ ತುರ್ತು ನಿರ್ಧಾರ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರಕಾರದ ಕುಂದು ಕೊರತೆ ಮೇಲ್ಮನವಿ ಸಮಿತಿಗೆ ನಿರ್ದೇಶನ ನೀಡಿದೆ. ಈ ವಿಡಿಯೋ ಮೂಲಕ ಮಾನಹಾನಿ ಮಾಡಲಾಗಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ.

ನ್ಯಾಯವಾದಿ ಅಮಿತಾ ಸಚ್‌ದೇವ್ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ನ್ಯಾಯವಾದಿ ಸಚ್‌ದೇವ್ ಅವರು ರಾಠಿ ವಿಡಿಯೋ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಿದ್ದಾರೆ.

ಹಿಂದೂ ದೇವತೆಗಳ ನಿಂದನೆಯನ್ನು ಸಹಿಸಲು ಸಾಧ್ಯವಿಲ್ಲ! – ಕೇಂದ್ರ ಸರಕಾರ

ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು, “ಈ ವಿಡಿಯೋದಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳಿದ್ದು, ಅದನ್ನು ಸಹಿಸಲು ಸಾಧ್ಯವಿಲ್ಲ. ಮಧ್ಯಸ್ಥಗಾರರು (ಸೋಷಿಯಲ್ ಮೀಡಿಯಾ ಸಂಸ್ಥೆಗಳು) ತಾವಾಗಿಯೇ ಈ ವಿಡಿಯೋವನ್ನು ತೆಗೆದುಹಾಕಬೇಕು ಅಥವಾ ಹಾಗೆ ಮಾಡಲು ನ್ಯಾಯಾಲಯ ಆದೇಶ ಹೊರಡಿಸಬೇಕು” ಎಂದು ನ್ಯಾಯಾಲಯದಲ್ಲಿ ಹೇಳಿದರು.

ವಿಡಿಯೋದಲ್ಲೇನಿದೆ?

ಧ್ರುವ್ ರಾಠಿ ಮಾರ್ಚ್ 21 ರಂದು ಬಿಡುಗಡೆ ಮಾಡಿದ ವಿಡಿಯೋ ಒಂದಕ್ಕೆ ಸಚ್‌ದೇವ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ‘ಕ್ಯಾನ್ ಹಿಂದೂಸ್ ಈಟ್ ಬೀಫ್? ಕೇರಳಾಸ್ ಸ್ಟೋರಿ 2 ಎಕ್ಸ್‌ಪೋಸ್ಡ್’ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ರಾಠಿ ಹಿಂದೂ ಧರ್ಮಗ್ರಂಥಗಳಲ್ಲಿನ ಆಹಾರ ಪದ್ಧತಿಗಳ ಬಗ್ಗೆ ಚರ್ಚಿಸಿದ್ದಾನೆ. ಪ್ರಭು ಶ್ರೀರಾಮ ಮತ್ತು ಭಗವಾನ್ ಶ್ರೀಕೃಷ್ಣ ಮುಂತಾದ ದೇವತೆಗಳು ಮಾಂಸಾಹಾರ ಮಾಡಿರುವುದನ್ನು ಹಿಂದೂ ಶಾಸ್ತ್ರಗಳಲ್ಲಿ & ಮುನಿಗಳು ಉಲ್ಲೇಖಿಸಿದ್ದಾರೆಂದು ಧ್ರುವ್ ವಿಡಿಯೋದಲ್ಲಿ ವಾದಿಸಿದ್ದಾನೆ.

ಸಂಪಾದಕೀಯ ನಿಲುವು

ಧ್ರುವ್ ರಾಠಿ ವಿದೇಶದಲ್ಲಿ ವಾಸಿಸುತ್ತಾ ಹಿಂದೂ ದೇವತೆಗಳ ವಿರುದ್ಧ ಹೇಳಿಕೆಗಳನ್ನು ನೀಡುವ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದಾನೆ. ಕೇಂದ್ರ ಸರಕಾರ ಕೇವಲ ವಿಡಿಯೋಗಳನ್ನು ಮಾತ್ರ ತೆಗೆದುಹಾಕುವುದಲ್ಲದೆ, ಅವನ ವಿರುದ್ಧ ವಿದೇಶದಿಂದ ಕ್ರಮ ಕೈಗೊಂಡು ಭಾರತಕ್ಕೆ ಕರೆತರಲು ಪ್ರಯತ್ನಿಸಬೇಕು!