‘ಮಾರಕ ವಿಚಾರ ಸರಣಿ’ಯನ್ನು ಬುಡಸಮೇತ ಕಿತ್ತೊಗೆಯಲು ಒಟ್ಟಾಗಿ ಕೆಲಸ ಮಾಡಿ!

ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ಕುರಿತು ಭಾರತದ ತರಾಟೆ

ನ್ಯೂಯಾರ್ಕ್ (ಅಮೆರಿಕ) – ಭಯೋತ್ಪಾದನೆಗೆ ಸಿಗುವ ಆರ್ಥಿಕ ಸಹಾಯವನ್ನು ನಿಲ್ಲಿಸುವುದು ಜಾಗತಿಕ ಸಮುದಾಯದ ಸಾಮೂಹಿಕ ಪ್ರಯತ್ನಗಳ ಒಂದು ಭಾಗವಾಗಿರಬೇಕು. ಅಂತರರಾಷ್ಟ್ರೀಯ ಸಮುದಾಯವು ಭಯೋತ್ಪಾದನೆಯನ್ನು ಸಮರ್ಥಿಸಲು ಯಾವುದೇ ನೆಪ ಹುಡುಕದೆ, ಈ ‘ಮಾರಕ ವಿಚಾರ ಸರಣಿ ’ಯನ್ನು ಬುಡಸಮೇತ ಕಿತ್ತೊಗೆಯಲು ಒಟ್ಟಾಗಿ ಕೆಲಸ ಮಾಡಬೇಕೆಂದು ಭಾರತ ವಿಶ್ವಸಂಸ್ಥೆಯಲ್ಲಿ ಕರೆ ನೀಡಿದೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಹರೀಶ್ ಪರ್ವತನೇನಿ ಅವರು ಮಾತನಾಡಿ, ಭಾರತವು ಕಳೆದ ಹಲವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಗೆ ಬಲಿಯಾಗಿದೆ. ಇದಕ್ಕಾಗಿ ನಾವು ದೊಡ್ಡ ಬೆಲೆಯನ್ನು ತೆತ್ತಿದ್ದೇವೆ. ಅನೇಕ ಮುಗ್ಧ ಜನರ ಪ್ರಾಣಗಳು ಹೋಗಿವೆ, ಹಾಗೂ ಕುಟುಂಬಗಳು ಧ್ವಂಸಗೊಂಡಿವೆ. ಇದೇ ಅನುಭವದಿಂದ ಭಾರತದ ನಿಲುವು ಏನೆಂದರೆ, ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ. ಯಾವುದೇ ದೂರು, ರಾಜಕೀಯ ಉದ್ದೇಶ ಅಥವಾ ಕಾರ್ಯತಂತ್ರದ ಸಮೀಕರಣಗಳಿದ್ದರೂ, ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ವಿಧಾನಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಖಂಡಿಸಬೇಕು. ಸದಸ್ಯ ರಾಷ್ಟ್ರಗಳು ಈ ನಿಟ್ಟಿನಲ್ಲಿ ಪೂರ್ಣ ಸಹಕಾರ ನೀಡಬೇಕು. ಭಯೋತ್ಪಾದನೆ ಎದುರಿಸುವಾಗಅಂತರರಾಷ್ಟ್ರೀಯ ಸಮುದಾಯ ದ್ವಂದ್ವ ನೀತಿ ಅನುಸರಿಸುವುದನ್ನು ತಡೆಯಬೇಕು. ಭಯೋತ್ಪಾದಕ ಕೆಲಸ ಮಾಡುವವರು, ಸಂಚು ರೂಪಿಸುವವರು, ಅವರಿಗೆ ಆರ್ಥಿಕ ಸಹಾಯ ನೀಡುವವರು ಮತ್ತು ಉಗ್ರರ ಪ್ರಾಯೋಜಕರನ್ನು ಆರೋಪಿಗಳನ್ನಾಗಿಸುವುದು ಅತ್ಯಂತ ಅಗತ್ಯವಾಗಿದೆ.